ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೪೬ ನಡೆದದ್ದೇ ದಾರಿ
ಮಾಡಬೇಕೆನ್ನುತ್ತೇನೆ ಎಂದಲ್ಲ. ನೀನು ಬೇಕಾದವರನ್ನು ಮದುವೆಯಾಗು. ಬೇಕಾದಲ್ಲಿ ಹೋಗು. ಬೇಕಾದ್ದನ್ನು ಮಾಡು.ನಾನು ಹೀಗೆಯೇ ನಿನ್ನನ್ನು ಪ್ರೀತಿಸುತ್ತ ಇರುತ್ತೇನೆ. ಮದುವೆ ಅಂದರೆ ಬರಿಯ ಅರ್ಥವಿಲ್ಲದೊಂದು ಬಂಧನ. ಪ್ರೀತಿಗೂ ಅದಕ್ಕೂ ಸಂಬಂಧವಿಲ್ಲ. ಇದಕ್ಕೆ ನನ್ನ ಮದುವೆಯೇ ಸಾಕ್ಷಿ. ನನ್ನ ಹೆಂಡತಿಯೊಂದಿಗೆ ಎಷ್ಟೋ ವರ್ಷಗಳಿಂದ ನಾನು ಕೂಡಿ ಬಾಳುತ್ತಿದ್ದರೂ ನನಗೆಂದೂ ಅವಳನ್ನು ಪ್ರೀತಿಸುವ ಅವಶ್ಯಕತೆ ತೋರಿಲ್ಲ. ನಿನ್ನ ಬಗೆಗೆ ನನಗನಿಸುತ್ತಿರುವುದು ಇದೇನೋ ಬೇರೆಯೇ ಅಭೂತಪೂರ್ವ ಅವರ್ಣನೀಯ ಅಸಾಧ್ಯ ಭಾವನೆ. ನಾನು ಹೇಗೆ ಹೇಳಲಿ ?-ಹಾ, ನಾಳೆ ಸಂಜೆ ಆರು ಗಂಟೆಗೆ ಲೈಬ್ರೆರಿಯಲ್ಲಿ ನನ್ನನ್ನು ಕಾಣುತ್ತೀಯಾ ? ನಿನ್ನ ಕಾ.ಮ." * * * "ಯಾಕ ಶಾಂತಿ, ಈ ಕೆರೀ ದಂಡೀಮ್ಯಾಲೆ ನಾವು ಬಂದು ಕೂತು ಈಗ ಅರ್ಧಾ ತಾಸಾತು, ಇನ್ನೂ ನನ್ನ ಕಡೇ ನೋಡವಲ್ಲಿ?" ಮಠದ್. 'ನಿಜ ಹೇಳಬೇಕೆಂದರೆ ನನಗೆ ಹೆದರಿಕೆಯಾಗುತ್ತಿದೆ ನಿನ್ನ ಬಗ್ಗೆ, ನನ್ನ ಬಗ್ಗೆ, ಈ ಪ್ರಕರಣದ ಬಗ್ಗೆ. ಇದು ತಪ್ಪು ಅನಿಸುತ್ತಿದೆ. ನನ್ನ ಕಾಲ ಕೆಳಗಿನ ನೆಲವೇ ನೀರಾಗಿ ನನ್ನನ್ನು ಕೊಚ್ಚಿಕೊಂಡು ಹೊರಟ ಹಾಗೆ ಅನ್ನಿಸುತ್ತಿದೆ-' ಎಂದೆಲ್ಲ ಚೀರಿ ಹೇಳಬೇಕೆನಿಸಿತು ಶಾಂತಿಗೆ. ಆದರೆ ಆಕೆ ಏನೂ ಹೇಳದೆ ಮತ್ತಷ್ಟು ತಲೆ ತಗ್ಗಿಸಿದಳು. "ಶಾಂತಿ!" -ಆಕೆ ಪ್ರತಿಭಟಿಸುವ ಮೊದಲೇ ಆತನ ಕೈ ಅವಳನ್ನು ಬಿಗಿಯಾಗಿ ಬಳಸಿತು. ಅವಳ ಮುಖದ ಸಮೀಪ ಬಾಗಿ ತೀರ ಪಿಸುದನಿಯಲ್ಲಿ ಆತನೆಂದ, "ಶಾಂತಿ,ನಿನ್ನ ಎದೀಮ್ಯಾಲ ತಲೀ ಇಟ್ಟು ಅಳಬೇಕು ಅನಸ್ತದ ನನಗ. ನನ್ನ ಒಳಗ ಹೆಪ್ಪುಗಟ್ಟದ ಅತೃಪ್ತಿ, ದುಃಖ ಕರಗಿ ಹೋಗಬೇಕು ಅಂತಾವ ಶಾಂತಿ." ಆಕೆ ಒಮ್ಮೆಲೆ ಎದ್ದು ನಿಂತಳು. ಆಕೆಯ ಮೈಯಿಡೀ ನಡುಗುತ್ತಿತ್ತು. ಕೆಲಕ್ಷಣ ಆಕೆಗೆ ಮಾತಾಡಲಾಗಲೇ ಇಲ್ಲ. ಅಕಸ್ಮಾತ್ತಾಗಿ ಆತನೂ ಎದ್ದು ನಿಂತ. ನಡುಗುವ ಧ್ವನಿಯಲ್ಲಿ ಮಾತಾಡಿದ. "ಇಲ್ನೋಡು ಶಾಂತಿ, ನಾ ಹೆಚ್ಚು ಏನೂ expect ಮಾಡೂದಿಲ್ಲ ನಿನ್ನ ಕಡಿಂದ. ಇಷ್ಟಕ್ಕ ಅವಕಾಶ ಕೊಡು ನನಗ,ಪ್ಲೀಜ್.ಇದೂ ಪಾಪ ಅನಸ್ತದೇನು ನಿನಗ? ನನಗನ್ಸೂದಿಲ್ಲ. ಪ್ರೀತಿಗೂ, ಪಾಪಕ್ಕೂ ಏನು ಸಂಬಂಧ ಶಾಂತಿ ?"ಲಾಜಿಕ್ ಪ್ರೊಫೆಸರನ ತರ್ಕ ಸರಣೆ ಸರಿಯಾಗಿಯೇ ಇತ್ತು.ಯಾಕೋ ಶಂಕರನ ನೆನಪು ಒಮ್ಮೆಲೆ ಅವಳನ್ನು ತದವಿ ಹೋದಂತಾಯಿತು. ಶಾಂತಿಗೆ ಅನಿಸಿತು-ತಾನಿನ್ನು ಬೀಳುತ್ತೇನೆ. ಬಹುಶಃ ತನಗೆ ಎಚ್ಚರ ತಪ್ಪುತ್ತಿದೆ, ಕಣ್ಣಿಗೆ ಕತ್ತಲು ಬರುತ್ತಿದೆ....