ಈ ಪುಟವನ್ನು ಪರಿಶೀಲಿಸಲಾಗಿಲ್ಲ.
350
ಅತ್ತು ಪೂರೈಸಿದ ಜಯಶ್ರೀ ಎದ್ದು ಕುಳಿತು ಹೇಳಿದಳು, " ಶಾಂತಿ, ನಾ ಇನ್ನ ವಿಷ ತಗೊಂಡು ಸಾಯ್ತೀನಿ, ನನಗ ಬ್ಯಾರೇ ಹಾದೀನs ಇಲ್ಲ." "ಏನಾತು ಹೇಳರೆ ಹೇಳs ಪುಣ್ಯಾತ್ಗಿತ್ತಿ." "ಏನ ಹೇಳ್ಲಿ ಶಾಂತಿ? ಎಷ್ಟ ನಂಬಿದ್ದೆ ಅವನನ್ನ. ಎಂದೂ ಕೈಬಿಡೂದಿಲ್ಲ ಅಂದಿದ್ದ. ನೀನs ನನ್ನ ಸರ್ವಸ್ವ ಅಂದಿದ್ದ. ಒಬ್ಬಾಕಿ ಹೆಂಡ್ತಿ ಇದ್ರೂ ನಿನ್ನನ್ನ ಎರಡನೇ ಲಗ್ನಾ ಆಗ್ತೀನಿ ಅಂದಿದ್ದಾ. ಹಾಗಂತ ನಾನು-" "ಹಾಗಂತ ನೀನು-" ಜಯಶ್ರೀಗೆ ಮತ್ತೊಮ್ಮೆ ಅಳು ಉಕ್ಕಿ ಬಂತು. "ಹಾಗಂತ ನಾನು ಅವನಿಗೆ ಸರ್ವಾರ್ಪಣಾ ಮಾಡಿದೆ ಶಾಂತೀ, ಎರಡ ಲಗ್ನಾ ಮಾಡಿಕೋಬಾದರದು ಅಂತ ಕಾಯಿದೇ ಇದ್ರೂ ಈ ಕಾಯಿದೇ ಸರಕಾರೀ ನೌಕರರಲ್ಲದವ್ರಿಗೆ ಹತ್ತೂದಿಲ್ಲಾ ಅಂತ ಹೇಳಿದಾ. ಈಗ..." "ಈಗ ಏನಾತು ಜಯಾ? ಬೇಕಾಯ್ದೇಶೀರ ಆದರ ಆಗವಲ್ದು, ನಿಮ್ಮ ಸಂಬಂಧ ಇಷ್ಟ ಮುಂದುವರದದ ಅಂದ್ರ ನೀವು ಲಗ್ನಾ ಆಗಿಬಿಡ್ರೆಲಾ?' ಮತ್ತೊಮ್ಮೆ ಅತ್ತು ಪೂರೈಸಿ ಮಡಿಲಿನೊಳಗಿಂದ ಒಂದು ಮಡಚಿ ಮುದ್ದೆಯಾದ ಕಾಗದ ತೆಗೆಯುತ್ತಾ ಜಯಶ್ರೀ ಹೇಳಿದಳು- "ಅವಾ ನನಗ ಎಲ್ಲಾ ಸುಳ್ಳs ಹೇಳಿದ್ದ ಶಾಂತೀ, ನನಗ ಹೇಳಿದಾಂಗ ಆ ಜ್ಯೂನಿಯರ್ ಬಿ.ಎಸ್ ಸಿ. ಯೊಳಗ ಇದ್ದಾಳಲಾ ರಮಾ ಪಾಟೀಲ- ಆಕಿಗೂ ಹೇಳ್ಯಾನ. ಆಕಿಗೇನು ಗೊತ್ತು ಪಾಪ ನನ್ನ ಕತೀ. ಆಕಿ ತಾನಾಗಿ ಇವತ್ತ ನನಗ ತನ್ನದೂ-ಅವನದೂ ರೋಮಾನ್ಸ್ ಕಥೀ ಹೇಳಿ ಅವಾ ತನಗ ಬರದ ಪತ್ರಾ ಸುದ್ದಾ ತೋರ್ಸಿದ್ಳು. ಅದನ್ನs ತಂದೀನಿ ನೋಡು." "ಏನಂತ ಬರದಾನ ಮಗಾ?" "ಮತ್ತೇನ ಹೊಸಾದು ಬರೀತಾನ? ನನಗ ಏನೇನು ಬರಿತಿದ್ನೋ ಆಕಿಗೂ ಅದನ್ನs ಬರದಾನ. ಇನ್ನೂ ಯಾರ್ಯಾರಿಗೆ ಟೊಪಿಗೀ ಹಾಕ್ಯಾನೋ ಹಿಂಗs...ನಾ ಏನ್ಮಾಡ್ಲಿ ಶಾಂತಿ? ಅಕಾಸ್ಮಾತ್ ಏನರೆ ಹೆಚ್ಚೂ ಕಡಿಮೆ ಆತಂದ್ರ ನಾ ಏನ್ಮಾಡ್ಲಿ ಶಾಂತೀ?' - ಜಯಶ್ರೀ ಮತ್ತೇ ಅಳತೊಡಗಿದಳು. "ಸೀದಾ ಅವನ ಕಡೇ ಹೋಗಿ ಎಲ್ಲಾ ಹೇಳಿ ಈಗೇನ್ಮಾಡೋದು ಅಂತ ಕೇಳ್ಲಿಲ್ಯಾಕ ನೀನು?" "ಅಂವಾ ನನಗೆಲ್ಲೆ ಸಿಗ್ತಾನ ಶಾಂತಿ? ಮನೀಗೆ ಹೋದ್ರ ಕೀಲಿ ಹಾಕಿತ್ತು. ಯಾರೋ ಹೇಳಿದ್ರು, ಇವನ ರೋಮಾನ್ಸಿನ ಕಥೀ ಹೆಂಡ್ತೀ ಕಿವಿಗೆ ಬಿದ್ದು ಇವನನ್ನ ಛಲೋತ್ನ್ಯಾಗಿ ಝಾಡಿಸಿದಲಳಂತ. ಆಕೀನ್ನ ರಮಿಸಲಿಕ್ಕೆ ಕಾಶ್ಮೀರ-ಆಗ್ರಾ ಕಡೆ