೩೬೮ ನಡೆದದ್ದೇ ದಾರಿ
ಮಂಗಳೂರಿನವನೆಂದೂ ಆತನಿಗೆ ಅಲ್ಲಿ ಸಾಕಷ್ಟು ಪಿತ್ರಾರ್ಜಿತ ಆಸ್ತಿಯಿದೆಯೆಂದೂ ಶಾಂತಿಗೆ ತಿಳಿದು ಬಂತು. ಆತ ಸಂಪದಿಸುತ್ತಿದ್ದ "ಕ್ರಾಂತಿ" ಪತ್ರಿಕೆ ಮುಖ್ಯವಾಗಿ ವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿತ್ತು. ವ್ಯಕ್ತಿಸ್ವಾತಂತ್ರ್ಯದ ಯಾವುದೇ ಘಟಕಕ್ಕೆ ಯಾವುದೇ ಶಕ್ತಿಯಿಂದ ಧಕ್ಕೆ ಬಂದರೆ ಅದನ್ನು ಸರ್ವ ಪ್ರಯತ್ನದಿಂದಲೂ ವಿರೋಧಿಸಿ ನಿವಾರಿಸುವುದೇ ಪತ್ರಿಕೆಯ ಧ್ಯೇಯ. ಹೀಗೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಶಕ್ತಿ ಯಾವುದೇ ಸಂಸ್ಥೆಯಾಗಿರಲಿ, ದೊಡ್ಡ ವ್ಯಕ್ತಿಯಾಗಿರಲಿ, ಸಾಮಾಜಿಕ ಕಟ್ಟಳೆಯಾಗಿರಲಿ,ಧರ್ಮಗುರುವಾಗಿರಲಿ, ಕೊನೆಗೆ ಸರಕಾರವಾಗಿದ್ದರೂ, ಅದನ್ನು ಪತ್ರಿಕೆ ಸ್ಪಷ್ಟವಾಗಿ ಖಂಡಿಸುತ್ತಿತ್ತು. ಎಷ್ಟೋ ಸಲ ಹಾಗೆ ತೊಂದರೆಗೊಳಗಾದ ವ್ಯಕ್ತಿಗಳ ಪರವಾಗಿ ಜಾನ್ ಅಶೋಕ ಕುಮಾರ ಸ್ವತಃ ಕೋರ್ಟಿಗೆ ಹೋಗಿ ಎಲ್ಲ ವೆಚ್ಚ ನಿರ್ವಹಿಸಿ ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಉದಾಹರಣೆಗಳನ್ನು ಪಾರ್ಟಿಯ ಮೆಂಬರುಗಳು ಹೇಳುತ್ತಿದ್ದರು. ಒಂದು ಧ್ಯೇಯಕ್ಕಾಗಿ ಒಬ್ಬ ಮನುಷ್ಯ ಇಷ್ಟೆಲ್ಲ ಆಳಕ್ಕೆ ಉದ್ದಕ್ಕೆ ಹೋಗಬಲ್ಲನಲ್ಲ, ಅಂತ ಶಾಂತಿಗೆ ಆಶ್ಚರ್ಯವಾಗುತ್ತಿತ್ತು. ಪರಿಣಾಮವಾಗಿ ಆಕೆಗೆ ತನ್ನ ಕೆಲಸದಲ್ಲಿ ಆಸಕ್ತಿ ಹೆಚ್ಚಿತು. ತಾನೇಕೆ ಇಷ್ಟು ನಿರಾಶಳಾಗಿದ್ದೇನೆ. ಒಂದಾನೊಂದು ಕಾಲದಲ್ಲಿ ತನ್ನಲ್ಲಿ ಜೀವಂತವಾಗಿ ಉರಿಯುತ್ತಿದ್ದ ಮಹಿಳಾ ಉದ್ಧಾರ, ಮೂಢನಂಬಿಕೆಗಳ ವಿರೋಧ, ಸಂಪ್ರದಾಯಗಳ ದಾಸ್ಯದಿಂದ ಹೆಂಗಸರ ಬಿಡುಗಡೆ, ಮುಂತಾದ ಆದರ್ಶಗಳನ್ನೆಲ್ಲ ತಾನೇಕೆ ಹೀಗೆ ಸತ್ತು ಹೋಗಲು ಬಿಡಬೇಕು, ತಾನೂ ಏನನ್ನಾದರೂ ಮಾಡಬೇಕು, ಎಂದೆಲ್ಲ ಅನಿಸತೊಡಗಿತು.
ಜೊತೆಗೆ ಜಾನ್ ಅಶೋಕಕುಮಾರನ ಬಗ್ಗೆ ಗೌರವವೂ ಬೆಳೆಯಿತು. * * * ಒಂದು ಮಧ್ಯಾಹ್ನ ಪತ್ರಿಕೆಯ ಕಾರ್ಯಾಲಯದಲ್ಲಿನ ತನ್ನ ವಿಭಾಗದಲ್ಲಿ ಕೂತು ಶಾಂತಿ ಮರುದಿನದ ಪತ್ರಿಕೆಗೆ ಬೆಕಾದ ಅಂತಿಮ ವರದಿ ತಯಾರಿಸುತ್ತಿದ್ದಾಗ ಜಾನ್ ಅಶೋಕ ಕುಮಾರ್ ಬಂದು "ಹಲೋ ಮಿಸ್ ಕಾಮತ್" ಅಂದ. ಆಕೆ ಎದ್ದು ನಿಂತು "ಹಲೋ ಸರ್" ಅಂದಳು. ಆತ ಆತ್ಮೀಯವಾಗಿ ಕನ್ನಡದಲ್ಲೇ ಮಾತಾಡಿದಾಗ ಅವಳಿಗೆ ತುಸು ಆಶ್ಚರ್ಯ ವೆನಿಸಿತು."ಕೂತುಕೊಳ್ಳಿ. ನಿಮ್ಮ ಕೆಲ್ಸ ಹೇಗೆ ಸಾಗಿದೇಂತ ಕೇಳೋಕೆ ಬಂದೆ." ಆತ ಎದುರಿನ ಕುರ್ಚಿಯಲ್ಲಿ ಕೂತ ನಂತರ ತಾನೂ ಕೂತು ಆಕೆ ಮೃದುವಾಗಿ ವಿನೀತಳಾಗಿ ಉತ್ತರಿಸಿದಳು. "ಕೆಲಸ ಛಲೋ ನಡದದ." ನಾಲ್ಕೈದು ನಿಮಿಷ ಆ-ಈ ಮಾತಾಡಿ ಒಮ್ಮೆಲೆ ಧ್ವನಿ ತಗ್ಗಿಸಿ ಆತನೆಂದ,