ಪುಟ:ನಡೆದದ್ದೇ ದಾರಿ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಲಗ್ನ ಆಗೇದ. ಹೆಂಡತಿ ಕಲತಾಕಿ ಅಲ್ಲ. ಅದಕ್ಕ ಇವಗ ಅಷ್ಟ ಸೇರೂದಿಲ್ಲ ಕಾಣಸ್ತದ.
ಮಾವನ ದುಡ್ಡಿನಿಂದ ಇಲ್ಲೆ ಈ ಮಗಾ ಕಾಲೇಜ ಕಲೀತಾನ. ಚೈನೀ ಮಾಡತಾನ.
ನನಗೂ ಗೊತ್ತಿದ್ದಿಲ್ಲ. ಇವತ್ತ ನನ್ನ ಕಝಿನ್ ಬಂದಿದ್ನಲಾ, ಅಂವಾ ಹೇಳಿದಾ. ಅಂತೂ
ಈ ಸರೋಜಿನಿಯ ಗತಿ ಮಾತ್ರ ಕಠಿಣ ಅದs ಅಲ್ರೀ ಮ್ಯಾಡಂ ?"
- ಊರ್ಮಿಲಾನ ಧ್ವನಿಯಲ್ಲಿ ನಿಜವಾಗಿಯೂ ಸಂತಾಪವಿತ್ತು. ತಾನೂ ಈಗ
ಸಂತಾಪ ಸೂಚಿಸದಿದ್ದರೆ ಎಂಥ ವಿರೋಧಾಭಾಸವಾಗುವುದೆಂಬುದರ ಕಲ್ಪನೆಯನ್ನೂ
ಮಾಡದೆ ಪ್ರೊ. ಲೀಲಾವತಿಯ ಹೃದಯ ಎಂಥದೋ ಸಮಾಧಾನದಿಂದ ಕುಣಿಯಿತು.
ಸರಿಯಾಗಿ ಸೆಟೆದು ಕುಳಿತಳು ಆಕೆ, “ಖರೇನ ಊರ್ಮಿಲಾ ? ಸರೋಜಿನಿಗೆ
ಗೊತ್ತಿದ್ಧಾಂಗ ಕಾಣ್ಸೂದಿಲ್ಲಲ್ಲ ?"
“ಇಲ್ರೀ ಪಾಪ, ಆಕಿಗ್ಯಾರು ಹೇಳಬೇಕು ?"
“ಯಾಕ, ನಾ ಹೇಳತೀನಿ. ಇಂಥಾ ಲಫಂಗನ ಜೋಡೀ ತಿರಿಗಿ ಜೀವನಾ ಹಾಳ
ಮಾಡಿಕೋಬ್ಯಾಡಾ ಅಂತ ನಾನs ಆಕೀಗೆ ಹೇಳತೀನಿ. ಆಕಿ ಸಣ್ಣಾಕಿ, ತಿಳವಳಿಕಿ ಇಲ್ಲದಾಕಿ.
ಮತ್ತ ಮ್ಯಾಲ ನನ್ನ ವಾರ್ಡ್. ಆಕೀಗೆ ಉಪದೇಶ ಕೊಟ್ಟು ನಾ ದಾರಿಗೆ ತರಬೇಕು.
It is my duty, ಅಲ್ಲೇನು ?"
-ಹುರುಪು ಏರತೊಡಗಿತ್ತು ಆಕೆಗೆ. ತಾನು ಈ ಸುದ್ದಿ ಹೇಳಿದಾಗ ಸರೋಜಿನಿ
ಕಣ್ಣೀರಿನ ಕಾಲುವೆ ಹರಿಸುವ, ಉಪವಾಸ ಬೀಳುವ, ಮೂರ್ಛೆ ಹೋಗುವ,
ಹುಚ್ಚಿಯಾಗುವ ಅದ್ಭುತ ಚಿತ್ರಗಳೆಲ್ಲಾ ಕಣ್ಣೆದುರು ಕಟ್ಟಿ ನಿಂತಂತಾಗಿ, ಆಗ
ವಾರ್ಡನ್ ಎಂದು -ಸಹೃದಯ ವೈಸ್ ಪ್ರಿನ್ಸಿಪಾಲ ಎಂದು - ತಾನು ಹೇಗೆ ಸಹಾಯ,
ಸಮಾಧಾನ ಮಾಡಬೇಕೆಂಬುದರ ಬಗ್ಗೆ ಆಕೆ ಲೆಕ್ಕ ಹಾಕತೊಡಗಿದಳು.
“ಹೌದ್ರೀ ಮ್ಯಾಡಂ, ಹಂಗs ಮಾಡ್ರಿ. ನಾ ಇನ್ನ ಬರ್ತೀನಿ, ಈ ಬ್ಯಾಗು ನಾಳೆ
ರಾತ್ರಿ ಕೊಡ್ತೀನಿ ಹಂಗಾರ, ಗುಡ್‌ನೈಟ್'- ಎಂದೆನ್ನುತ್ತ, ಉತ್ತರಕ್ಕಾಗಿ ಕಾಯದೆ
ಊರ್ಮಿಲಾ ಕುಣಿಯುತ್ತ ಹೊರಗೋಡಿದಳು.
ಕೆಲಹೊತ್ತಿನ ಮುಂಚೆ ಬೇಸತ್ತು ಮಲಗಿದ್ದ ಪ್ರೊ. ಲೀಲಾವತಿ ಈಗ ಮತ್ತೆ
ಚೈತನ್ಯ ತುಂಬಿದಂತಾಗಿ ಅರ್ಧಕ್ಕೆ ಬಿಟ್ಟ ಕೆಲಸ ಮಾಡಲೆಂದು ಎದ್ದು ಕುರ್ಚಿಯ ಮೇಲೆ
ಆಸೀನಳಾದಳು.
-ಮುದುಕ ಪ್ರೊಫೆಸರ್ಸ್ ಜೊತೆಗೆ ಬಂದರೆ ಪಿಕ್‌ನಿಕ್ಕು ಸಪ್ಪಗಾಗುವದಂತೆ.
ಎಷ್ಟು ಧಿಮಾಕು ಈ ಊರ್ಮಿಲಾಗೆ ! ಅವಳದಾದರೂ ಏನು ತಪ್ಪು ? ಆ
ನಾಚಿಗೆಯಿಲ್ಲದ ಗಂಡಸರು ತಮ್ಮ ಮನೆಮಾರನ್ನೆಲ್ಲ ಮರೆತುಬಿಟ್ಟು ಇವಳ ಹಿಂದೆ
ತಿರುಗುತ್ತಿದ್ದುದರಿಂದಲೇ ಅಲ್ಲವೆ ಇವಳಿಗಿಷ್ಟು ಸೊಕ್ಕು ಬಂದದ್ದು ?