ಪುಟ:ನಡೆದದ್ದೇ ದಾರಿ.pdf/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೮ ನಡೆದದ್ದೇ ದಾರಿ ಕಮಲಾ ಮೂರ್ತಿ ಎಂದಷ್ಟೆ ಅನ್ನುತ್ತಿದ್ದಳಲ್ಲ, ಈಗೇಕೆ -ಒಮ್ಮೆಲೆ ಶಶಿಗೆ ಅನಿಸಿತು, ಕಮಲಾ ನಿಜವಾಗಿಯೂ ಇನ್ನೆಂದೂ ತಿರುಗಿ ಬರುವುದೇ ಇಲ್ಲವೋ ಏನೋ, ಇದೇ ಅವಳ ಕೊನೆಯ ಭೇಟಿಯಾಗಬಹುದೋ ಏನೋ.... ಆ ವಿಚಾರದಿಂದ ಶಶಿಗೆ ಬಹಳ ದಿನಗಳ ನಂತರ ಒಂದು ಥರಾ ಚಿಂತೆಯ ಅನುಭವವಾಯಿತು. ಕಮಲಾನ ಈ ಆಕಸ್ಮಿಕ ನಿರ್ಧಾರದ ಹಿಂದೆ ಏನೋ ರಹಸ್ಯವಿರಬೇಕು, ಕಮಲಾನನ್ನು ಹೀಗೆ ಹೋಗಲು ಬಿಡಬಾರದು, ಅವಳೇನಾದರೂ ಅಪಾಯ ಮಾಡಿಕೊಂಡಾಳು, ಅವಳನ್ನು ಒತ್ತಾಯದಿಂದ ನಿಲ್ಲಿಸಿಕೊಂಡು ಏನಾಯಿತೆಂದು ಕೇಳಬೇಕು, ಶಿವಮೂರ್ತಿಯ ಮಾತುಂಗಾದ ಆಫೀಸಿಗೆ ಫೋನ್ ಮಾಡಿ ತಿಳಿಸಬೇಕು, ಕಮಲಾ ಎಂಥದೋ ಆಪತ್ತಿನಲ್ಲಿದ್ದಾಳೆ.... ಶಶಿ ಹೀಗೆಲ್ಲ ವಿಚಾರ ಮಾಡುತ್ತಿರುವಾಗ ಆಗಲೇ ಬಾಗಿಲು ದಾಟಿದ್ದ ಕಮಲಾ “ಬಾಯ್ ಶಶಿ, ದೇವು ನಿನಗಾದರೂ ಛಲೋ ಮಾಡ್ಲಿ" ಅಂತ ಮೆಲುದನಿಯಲ್ಲಿ ಹೇಳಿದಳು. ಅವಳ 'ನಿನಗಾದರೂ' ಶಶಿಯನ್ನು ಚುಚ್ಚಿತು. ಕಮಲಾನನ್ನು ಒತ್ತಾಯಿಸಿದರೂ ಅವಳು ನಿಲ್ಲಲಾರಳೆಂದು ಅನಿಸಿತು. ಹೀಗೆ ದೂರ ಹೋಗುವುದರಲ್ಲೇ ಅವಳ ಸುಖ-ನೆಮ್ಮದಿ ಇದ್ದರೆ ಹೋಗಲಿ ಅನಿಸಿತು. ಶಶಿ ಸುಮ್ಮನೆ ಬಾಗಿಲಲ್ಲಿ ನಿಂತು ಕೈಬೀಸಿದಳು. ನಂತರ ಐದು ನಿಮಿಷ ಬಿಟ್ಟು ಎದುರಿಗೆ ಬಾಲ್ಯನಿಗೆ ಬಂದು ಕೆಳಗಡೆ ರಸ್ತೆಯ ಮೇಲೆ ನಿಂತಿದ್ದ ಟ್ಯಾಕ್ಸಿಯೊಂದರಲ್ಲಿ ಕಮಲಾ ಕೂಡುತ್ತಿದ್ದುದನ್ನು, ರಾಜು-ನೀಲಾ ಇಬ್ಬರೂ ಅವಳಿಗೆ ಟಾ ಟಾ ಮಾಡುತ್ತಿದ್ದುದನ್ನು ನೋಡಿದಳು.

  • *

ತಡವಾಗಿ ಬಂದ ರೋಶನ್‌ಬೀಯನ್ನು ಗದರಿಸಲೆಂದು ಸ್ನಾನದ ಮನೆಯಿಂದ ಹೊರಬಂದ ಶಶಿ ರೋಶನ್‌ಬೀಯ ಅತ್ತು ಕೆಂಪಾದ ಕಣ್ಣುಗಳನ್ನು ನೋಡಿ ಧ್ವನಿ ಏರಿಸದೇ ಕೇಳಿದಳು, “ಯಾಕಿಷ್ಟು ಲೇಟು ರೋಶನ್ ?" ರೋಶನ್‌ಬೀಯ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯಿತು. ಇದೇನೂ ಶಶಿಗೆ ಹೊಸತಲ್ಲ. ಕಳೆದು ಏಳೆಂಟು ವರ್ಷಗಳಿಂದ ರೋಶನ್‌ಬಿ ಅವಳ ಮನೆಯಲ್ಲಿ ಅಡಿಗೆಯವಳಾಗಿ, ಕೆಲಸದವಳಾಗಿ, ಹಲವಾರು ಸಲ ದಾದಿಯೂ ಆಗಿ, ಒಟ್ಟು ಶಶಿಗೆ ಬಹಳ ಆಪ್ತಳಾಗಿ ಕೆಲಸ ಮಾಡುತ್ತ ಬಂದಿದ್ದಾಳೆ. ವಾರದಲ್ಲಿ ಮೂರು ಸಲವಾದರೂ ರೋಶನ್‌ಬಿ ಹೀಗೆಯೇ ಕೊಡಗಟ್ಟಲೆ ಕಣ್ಣೀರು ಸುರಿಸುತ್ತಾಳೆ. ಕಣ್ಣೀರು ಸುರಿಸುತ್ತಲೇ ಮನೆಯ ಹಾಗೂ ಹೊರಗಿನ ಎಲ್ಲಾ ಕೆಲಸ ನೀಟಾಗಿ ನಿಭಾಯಿಸುತ್ತಾಳೆ. ಅವಳ ಕೆಲಸದಲ್ಲಿ ಕಣ್ಣೀರು ಅಡ್ಡಿಯಾಗುವುದಿಲ್ಲವೆಂದು ಗೊತ್ತಿದ್ದರಿಂದ ಶಶಿಯೂ ಅಷ್ಟಾಗಿ ಅವಳ ಕಣ್ಣೀರಿನ ಕಡೆ ಲಕ್ಷ್ಯ ಕೊಡುವುದಿಲ್ಲ. ಎಂದಾದರೊಮ್ಮೆ ರಜೆಯ ದಿನ ಯಾರೂ