ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದಂಬರಿಗಳು / ಶೋಷಣಿ.ಬಂಡಾಯ ಇತ್ಯಾದಿ... ೩೯೩
"ಹಂಗಾರ ಪ್ರಮೋಶನ್ ಸಿಗತದ ಅನ್ನು." "ಪರೀಕ್ಷಾ ಪಾಸಾಗೋದಕ್ಕೋ ಪ್ರಮೋಶನ್ಗೂ ಏನೂ ಸಂಬಂಧಿಲ್ಲ ಡಾಕ್ಟರ್. ನನಗಿಂತ ಜ್ಯೂನಿಯರ್ ಇದ್ದಳಲ್ಲ ಒಬ್ಬಾಕಿ ಪಾರ್ಸೀ ಹುಡಿಗಿ, ಒಂದ ದಿನಾ ನಿಮಗ ಟ್ರೇನಿನ್ಯಾಗ ತೋರ್ಸಿದ್ದೆ,ಆಕಿ ನನ್ದಾಂಗ ಗ್ರ್ಯಾಜುಯೇಟ್ ಸಹ ಅಲ್ಲ, ಆಕೀಗೆ ಆಗ್ಲೇ ಪ್ರಮೋಶನ್ ಸಿಕ್ಕಿಹೋತು.ನನಗ ಡಿಗ್ರೀ ಇದ್ದು ಎಕ್ಸ್ ಪೀರಿಯನ್ಸ್ ಇದ್ದು ಪರೀಕ್ಷಾ ಪಾಸಾದ್ರೂ ಏನೂ ಸಿಕ್ಕಿಲ್ಲ."-ಲೀಲಾನ ಧ್ವನಿಯಲ್ಲಿ ಸಹಜವಾಗಿ ಆಕ್ಷೇಪಣೆಯಿತ್ತು, ನೋವಿತ್ತು. "ಆದ್ಯಾಕ ಇಷ್ಟು ಅನ್ಯಾಯ ಲೀಲಾ?"ಶಶಿ ಆನುಕಂಪದಿಂದ ಕೇಳಿದಳು. "ಈ ಪ್ರೈವ್ಹೇಟ್ ಮ್ಯಾನೇಜಮೆಂಟನ ಬ್ಯಾಂಕಿನ್ಯಾಗೆಲ್ಲಾ ಇದೇ ಹಣೆಬರಹ ಡಾಕ್ಟರ್,ಮ್ಯಾಲಿನವರ ಮರ್ಜಿ ಕಾಯ್ದರ ಎಲ್ಲಾ ಕೆಲ್ಸ ಆಗತಾವ.ಅವರ ಮರ್ಜಿ ಕಾಯದಿದ್ದರ ಎಲ್ಲಾ ಕ್ವಾಲಿಫಿಕೇಶನ್ನೂ ವ್ಯರ್ಥ" ಲೀಲಾನ ಮುಖ ಸಿಟ್ಟು - ಅಸಹಾಯಕತೆಯಿಂದ ಕೆಂಪಾಗಿತ್ತು. "ಮ್ಯಾಲಿನವರ ಮರ್ಜಿ ಅಂದರ?" "ಅಂದರ ಮ್ಯಾನೇಜರು ಹೇಳಿಧಾಂಗ ಕುಣೀಬೇಕು,ಓವ್ಹರ್ ಟೈಂ ಕೆಲಸಾ ಮಾಡಬೇಕು,ಅವರು ಬಾ ಅಂದಲ್ಲೆ ಹೋಗಬೇಕು,ಕೂಡ್ರು ಅಂದರ ಕೂಡ್ರಬೇಕು, ನಿಲ್ಲು ಅಂದರ ನಿಲ್ಲಬೇಕು..."ಅಸಹನೆಯಿಂದ ಲೀಲಾ ಮಾತು ಮುಗಿಸಿದಳು. "ಮಲಗು ಅಂದರ ಮಲಗಬೇಕು." ಶಶಿಯ ಬೇಸರ ಹತ್ತು ಪಾಲು ಹೆಚ್ಚಾಯಿತು.ಮಾತು ಬದಲಿಸಲೆತ್ನಿಸುತ್ತ ಆಕೆ ಅಂದ್ಳು."ಯಾಕೋ ವೀಕ್ ಕಾಣಸ್ತೀ ಲೀಲಾ.ಸಂಜೀನ್ಯಾಗ ಮನೀಗೆ ಬಾ. ಟಾನಿಕ್ಕಿನ ಸ್ಯಾಂಪಲ್ಸ್ ಮಸ್ತ ಬಂದು ಬಿದ್ದಾವ.ಒಂದೆರಡು ಛಲೋ ಟಾನಿಕ್ಸ್ ಕೊಡ್ತೀನಿ." "ಥ್ಯಾಂಕ್ಸ್ ಡಾಕ್ಟರ್" * * * ಇಡಿಯ ದಿನದ ದುಡಿಮೆಯಿಂದ ದಣಿದು ಸಂಜೆ ಮನೆಗೆ ಬಂದ ಶಶಿಗೆ ಇವತ್ತು ಯಾರೂ ಪೇಶಂಟ್ಸ ಮನೆಗೆ ಬರದಿದ್ದರೆ ಸಾಕು ಅನ್ನಿಸಿತು.ಹಾಸ್ಪಿಟಲಿನ ಡ್ಯೂಟಿ ಮುಗಿಸಿ ಆರು ಗಂಟೆಗೆ ಹಿಂದಿರುಗಿದ ನಂತರ ಸಂಜೆ ಏಳುರಿಂದ ಒಂಬತ್ತರ ವರೆಗೆ ಆಕೆ ಮನೆಯಲ್ಲೇ ಪೇಶ್ಂಟ್ಸ್ ನೋಡುತ್ತಿದ್ದಳು.ಆಸುಪಾಸಿನವರಿಗೆಲ್ಲಾ ಆಕೆ ಬಹಳ ವಿಶ್ವಾಸದ ಡಾಕ್ಟರು.ಎಷ್ಟೋ ಸಲ ರಾತ್ರಿ ಹತ್ತು-ಹನೋಂದರವರೆಗೂ ಆಕೆಗೆ ಬಿಡುವಿರುತ್ತಿರಲಿಲ್ಲ.ಕೆಲಸದ ಬಗ್ಗೆ ಎಂದೂ ಬೇಸರಿಸದ ಆಕೆಗೆ ಇಂದೇಕೋ ಆಲಸ್ಯ.