ಸುಸ್ತು, ಬೇಸರ, ತಲೆನೋವು. ಏನೇನೋ. ಪುಣ್ಯಕ್ಕೆ ಗೌರೀ ಹಬ್ಬವೋ ಅಂಥದೇ ಏನು ಮಣ್ಣೋ ಇದ್ದುದರಿಂದಲೇ ಇರಬೇಕು, ಇವತ್ತು ಯಾರೂ ಪೇಶಂಟ್ಶ್ ಬಂದಿಲ್ಲ ಅನಿಸಿತು ಆಕೆಗೆ. ಒಳ್ಳೆಯದಾಯಿತು. ರೋಶನ್ ಬಿ ಮಾಡಿಟ್ಟು ಹೋಗಿದ್ದ ಅಡಿಗೆಯನ್ನು ಫ಼್ರಿಜ್ ನಿಂದ ತೆಗೆದು ಊಟ ಮಾಡಿ ಮಲಗಿಬಿಡಬೇಕು.
ಹಾಗೆಂದುಕೊಳ್ಳುತ್ತಿರುವಾಗಲೇ ಕರೆಗಂಟೆ ಬಾರಿಸಿತು. ಬಾಗಿಲು ತೆರೆದು ಬಂದಾಕೆಯನ್ನು ಒಳಗೆ ಕುಳ್ಳಿರಿಸಿ ಬಂದ ಸೇವಂತಿಬಾಯಿ, ಒಂದು ಕಾಲಕ್ಕೆ ನರ್ಸ್ ಆಗಿ ಕೆಲಸ ಮಾಡಿ ನಿವೃತ್ತಿ ಹೊಂದಿ ಈಗ ಶಶಿಯ ಸಾಯಂಕಾಲದ ಮನೆಯಲ್ಲಿನ ದವಾಖಾನೆಯಲ್ಲಿ ಆಕೆಗೆ ನೆರವಾಗಲೆಂದು ಬರುತ್ತಿದ್ದ ಹೆಂಗಸು, ಹೇಳಿದಳು, ಆಚೆ ಬೀದಿಯ ದೊಡ್ಡ ಬಂಗ್ಲೆಯ ಬಾಯೀ ಸಾಹೇಬ ಬಂದಿದ್ದಾರೆಂದು. ಓಹ್, ಟೆಕ್ಸ್ ಟೈಲ್ಸ್ ಮಿಲ್ಲಿನ ಮ್ಯಾನೇಜಿಂಗ್ ಡೈರೆಕ್ಟರ್ ಭಾಸ್ಕರ್ ಸಿಂಗ್ ರ ಹೆಂಡತಿ ಪುರ್ಣಿಮಾ. ಬೆಳ್ಳಗಿನ ತೆಳ್ಳಗಿನ ಕನಸುಗಣ್ಣುಗಳ ಕವಿಯಿತ್ರಿ. ಸದಾ ಬಂಗಾರದೊಡವೆ ತೊಟ್ಟು ಮಿನುಗುವ ಸೀರೆಯುಟ್ಟು ಮರ್ಸಿಡಿಸ್ ಬೆಂಝ್ ನಲ್ಲಿ ಬಳುಕುತ್ತ ತಿರುಗಾಡುವ ಬೆಡಗಿ, ಯಾಕೆ ಬಂದಿದ್ದಾಳೋ. ಪುಣ್ಯಕ್ಕೆ ಮತ್ತೆ ಬಸಿರಿರಬಾರದು.... "ನಮಸ್ಕಾರ ಡಾಕ್ಟರ್" ಅನ್ನುತ್ತ ಎದ್ದು ನಿಂತವಳನ್ನು ಪ್ರತಿವಂದಿಸಿ ಕೂಡ್ರ ಹೇಳಿದಳು ಶಶಿ, ಹ್ಙೂ, ಮತ್ತೇನು ಮಿಸೆಸ್ ಸಿಂಗ್ ? ಪ್ರಕೃತಿ ಹ್ಯಾಗಿದೆ ಈಗ?"
"ಯಾಕೋ ಒಂದು ವಾರದಿಂದ ಬಹಳ ಸುಸ್ತು. ಒಂಡಥರಾ ಗಿಡಿನೆಸ್ ಅನಸತದ ಡಾಕ್ಟರ್, ಹಸಿವೀನೇ ಆಗೂದಿಲ್ಲ, ಏನು ನೋಡಿದ್ರೂ ವಾಂತಿ ಬಂಧಾಂಗ ಆಗತದ..." -ಆಕೆಯ ಎಂದಿನವೇ ರೋಗಲಕ್ಷಣಗಳು. ಹತ್ತು ವರ್ಷಗಳಿಂದ ಕೇಳಿಕೇಳಿ ಅಭ್ಯಾಸವಾಗಿದೆ ಶಶಿಗೆ. ನಕ್ಕು ಆಕೆ ಅಂದಳು, "ಈ ಸಲ ಪೀರಿಯಡ್ ಬಂದಿಲ್ಲ ಹೌದಲ್ಲೋ?"
ಧ್ವನಿ ಇಳಿಸಿ ಪೂರ್ಣಿಮಾ ಸಿಂಗ್ ಅಂದಳು, "ಇಲ್ರೀ ಡಾಕ್ಟರ್, ಹದಿನೈದು ಇಪ್ಪತ್ತು ದಿನಾ ಆಗಿ ಹೋತು. ನನಗ ಹೆದರಿಕಿ ಆಗ್ತದ ಡಾಕ್ಟರ್." -ಶಶಿ ನಕ್ಕಳು.
"ಹೆದರಿಕಿ ಎಂಥಾದ್ದು ಮಿಸೆಸ್ ಸಿಂಗ್? ನಿಮಗಿದು ಆರನೆಯ ಸಲ ಅಲ್ಲವೆ? ಸಾಕಷ್ಟು ಎಕ್ಸ್ ಪೀರಿಯನ್ಸ್ಡ್ ಇದ್ದೀರಿ." ಮಿಸೆಸ್ ಸಿಂಗ್ ನಗಲಿಲ್ಲ. ಒಂಬತ್ತು ತಿಂಗಳು ಬಸಿರಾಗಿರುವುದು, ಹೆರುವುದು, ಮಗುವನ್ನು ಬೆಳೆಸುವುದು, ಮತ್ತೆ ಬಸಿರಾಗುವುದು, ಮತ್ತೆ ಹೆರುವುದು -ಇವೆಲ್ಲ ಆಕೆಗೆ ಪ್ರಿಯವಾದ ವಿಷಯಗಳಾಗಿರಲಿಲ್ಲ. ಬಾಡಿದ ಆಕೆಯ ಮುಖ ನೋಡಿ ಆಕೆಯನ್ನು ಪ್ರಸನ್ನಗೊಳಿಸಲೆಂದ ಶಶಿ ಅಂದಳು, "ಅದೆಲ್ಲ ಇರಲಿ ಮಿಸೆಸ್ ಸಿಂಗ್, ಯಾಕೋ ಇತ್ತಿತ್ಲಾಗ ಯಾವ ಮ್ಯಾಗಝೀನಿನೊಳಗೂ ನಿಮ್ಮ