ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ...
೪೦೧

ನಾಟಕಗಳ ಬಗ್ಗೆ, ಅಭಿನಯದ ಬಗ್ಗೆ, ಒಟ್ಟು ರಂಗಭೂಮಿಯ ಬಗ್ಗೆ ಆತನಿಗೆ
ಎಷ್ಟು ಜ್ಞಾನ, ಎಂಥ ನಿಷ್ಠೆ, ಏನು ಆರಾಧಕ ಭಾವ ! ತನ್ನ ಊರು, ಹೊಲ,
ಗದ್ದೆ, ತೋಟ, ಬಂಧು, ಬಳಗ, ಸುಖ, ಸಂಪತ್ತು ಎಲ್ಲ ಬಿಟ್ಟು ನಾಟಕದ
ಹುಚ್ಚಿಗಾಗಿ ಮುಂಬಯಿ ಸೇರಿದ ಈತನ ಕಲಾಪ್ರೇಮ ಎಷ್ಟು
ಆಳವಾಗಿದ್ದೀತು! ಕಲಾಸೇವೆಯ ಹೆಸರಲ್ಲಿ ಸ್ವಂತ ಖರ್ಚು ಮಾಡಿಕೊಂಡು
ಹೀಗೆ ಊರೂರು ಅಲೆಯುವವರು ಬೇರಾರು ಇದ್ದಾರು ? ಆತನ ಅಭಿನಯ,
ಮಾತು, ಒಟ್ಟು ವ್ಯಕ್ತಿತ್ವದಲ್ಲಿ ಎಂಥ ಜಾದೂ ಇದೆ !"
- ಈ ಜಾದೂವಿನ ಮೋಡಿಗೆ ಕಮಲಾ ಸಂಪೂರ್ಣವಾಗಿ ಸೋತಳು. ಆ ಸಲ ಮೆಡಿಕಲ್ ಕೊನೆಯ ವರ್ಷದ ಪರೀಕ್ಷೆ ಮುಗಿಸಿ ಶಶಿ ವಿಜಾಪುರಕ್ಕೆ ಹೋದಾಗ ಬೇಸಿಗೆ ರಜೆಯಲ್ಲಿ ಕಮಲಾನ ಮಾತುಗಳ ತುಂಬ ಈ 'ಡೈರೆಕ್ಟರ್ ಸಾಹೇಬರು' ತುಂಬಿದ್ದ. ಆತನ ಬಗ್ಗೆ ಮಾತನಾಡುವಾಗ, ಆತನ ವಿಚಾರಗಳನ್ನು ತನ್ನವೇ ಎಂಬಂತೆ ವಿವರಿಸುವಾಗ, ಆತನ ಸುಸಂಸ್ಕೃತತೆ, ಕಲಾಭಿಜ್ಞತೆ, ಉನ್ನತ ಅಭಿರುಚಿಗಳನ್ನು ವರ್ಣಿಸುವಾಗ ಕಮಲಾ ಬೇರೆಯೇ ಲೋಕದಲ್ಲಿರುವಂತೆ ತೋರುತ್ತಿದ್ದಳು. ಆ ತಂದ್ರಿಯಿಂದ ಅವಳನ್ನೆಚ್ಚರಿಸಲು ಶಶಿ ಅನೇಕ ಸಲ ಪ್ರಾಮಾಣಿಕ ಪ್ರಯತ್ನ ಮಾಡಿದ್ದಳು :
'ಅಲ್ಲ ಕಮಲಾ, ಯಾರರೆ ಒಬ್ಬ ಸಭ್ಯ ಮನುಷ್ಯನ್ನ ನೋಡಿ ಲಗ್ನಾ ಮಾಡಿ ನಿನ್ನ ಗಂಡನ ಮನೀಗೆ ಕಳಿಸೋ ಪ್ರಯತ್ನದಾಗಿದ್ದಾರೆ ನಿನ್ನ ದೊಡ್ಡಣ್ಣ. ನಿನ್ನ ಟೆಂಪರಮೆಂಟ್‌ಗೂ ಗೃಹಿಣೀ ಜೀವನಾನೇ ಸೂಟ್ ಆಗತದ. ಅದೆಲ್ಲಾ ಬಿಟ್ಟು ಇದೇನು ಹುಚ್ಚು ತಲಿಗೇರಿಸಿಕೊಂಡೀ ನೀನು ? ಲಗ್ನಾದ ಮ್ಯಾಲ ಬೇಕಾದರ ಟೈಮು ಸಿಕ್ಕರ ಕಲಾಸೇವಾ-ಸುಡುಗಾಡು ಏನಾದ್ರೂ ಮಾಡು.'
'ನಾ ನಿನಗ ಎಂದೂ ಹೇಳೀನಲ್ಲ ಶಶಿ, ಲಗ್ನದ ಸಲುವಾಗಿ ನನ್ನ ಆಯ್ಡಿಯಾಜ್ ಏನು ಅಂತ. ಕಲೆಯ ಸಲುವಾಗಿ ನನಗಿರೋ ಭಕ್ತಿ-ಪ್ರೀತಿ ತಿಳಕೊಂಡು
ಗೌರವಿಸೋವಂಥಾ ವ್ಯಕ್ತಿ ಸಿಕ್ಕರ ನಾ ಲಾಗ್ನಾಗ್ತೀನಿ. ಇಲ್ಲಿದ್ರ, ಹಿಂಗs ಇರ್ತನಿ. ನನ್ನ ಕಾಲ ಮ್ಯಾಲ ನಾ ನಿಲ್ಲತೀನಿ. ನನಗ ಯಾರ ಹಂಗೂ ಬ್ಯಾಡ.'

ಜೀವನದ ಬಗ್ಗೆ ಕಮಲಾಳಿಗಿದ್ದ ಕನಸುಗಳು ನೂರಾರು, ಸಾವಿರಾರು.
ಬಣ್ಣ ಬಣ್ಣದ ಚೆಂದಚೆಂದದ ಕನಸುಗಳು, ಆದರೆ ಬಹುಬೇಗ ಜೀವನದ ಉರಿಬಿಸಿಲ ಬೇಗೆ ಅವಳ ಮೃದುಮಧುರ ಕನಸುಗಳನ್ನು ಬಾಡಿಸತೊಡಗಿತು.
ಹೌಸ್ ಸರ್ಜನ್‌ಶಿಪ್ ಮುಗಿಸಿ ಮುಂಬಯಿಯಲ್ಲೇ ಸಿಕ್ಕ ಸರಕಾರಿ ನೌಕರಿ