ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೪೦೨
ನಡೆದದ್ದೇ ದಾರಿ


ಸೇರಿದಳು ಶಶಿ. ನಂತರ ಹಲವಾರು ಸಾವಿರ ಪಗಡಿ ಸುರಿದು ಮುಳುಂದದಲ್ಲಿ ಒಳ್ಳೆಯ
ಲೊಕ್ಯಾಲಿಟಿಯೊಂದರಲ್ಲಿ ಒಂದು ಬ್ಲಾಕ್ ಹಿಡಿದಳು. ಆ ವೇಳೆಗಾಗಲೇ ಆಕೆಯ ತಂದೆ-
ತಾಯಿ ಇಬ್ಬರೂ ತೀರಿಹೋಗಿದ್ದರಿಂದ ವಿಜಾಪುರದಲ್ಲಿ ಆಕೆಗೆ ತನ್ನವರು-ತನ್ನದು
ಅಂತ ಏನೂ ಇರಲಿಲ್ಲ. ಹೀಗಾಗಿ ಒಂದು ರೀತಿಯಿಂದ ಶಶಿಗೆ ಮುಂಬಯಿ ವಾಸವೇ ಸ್ಥಾಯಿಯಾಯಿತು.
ಈ ಎಲ್ಲ ದಿನಗಳಲ್ಲಿ ಕಮಲಾನೊಂದಿಗೆ ಪತ್ರ ವ್ಯವಹಾರದ
ಸಂಬಂಧವಿರಿಸಿಕೊಂಡಿದ್ದರಿಂದ ಕಮಲಾಳ ಜೀವನದಲ್ಲಿ ಆಗುತ್ತಲಿದ್ದ
ಬದಲಾವಣೆಗಳು ಆಕೆಗೆ ಗೊತ್ತಾಗುತ್ತಲಿದ್ದವು. ಆಗ ಘಟಿಸಿದ ಕೆಲವು
ಘಟನೆಗಳಿಂದಾಗಿ ಕಮಲಾಳ ಭವಿಷ್ಯದ ದಾರಿ ನಿರ್ಧರಿತವಾಯಿತು.
ಮೊದಲನೆಯದಾಗಿ ಆಕಸ್ಮಿಕ ಹೃದಯಾಘಾತದಿಂದ ಕಮಲಾಳ ಅಣ್ಣ ಸತ್ತರು. ಇಷ್ಟು
ದಿನ ಆತನೇ ಕಮಲಾಳ ವಿದ್ಯಾಭ್ಯಾಸ-ಯೋಗಕ್ಷೇಮ ನೋಡಿಕೊಂಡಿದ್ದರಿಂದ ಈಗ
ಆತನ ಇಬ್ಬರು ಅಲ್ಪವಯೀ ಮಕ್ಕಳು ರಾಜು-ನೀಲಾರನ್ನು ನೋಡಿಕೊಳ್ಳುವುದು ತನ್ನ
ನೈತಿಕ ಹೊಣೆ ಎಂದು ಕಮಲಾ ತಿಳಿದಳು. ಹಾಗೂ ಅದಕ್ಕಾಗಿ ಆಕೆಗೊಂದು ನೌಕರಿಯ
ಜರೂರತ್ತು ಇತ್ತು. ಆದರೆ ಬೇರಾವುದೇ ಬಗೆಯ ನೌಕರಿಯಲ್ಲಿ ಆಕೆಗೆ ಆಸಕ್ತಿ ಇರಲಿಲ್ಲ.
ಎರಡನೆಯದಾಗಿ ಇದೇ ಸಮಯದಲ್ಲಿ ಆಕೆಗೆ ಮುಂಬಯಿಯಿಂದ
ಶಿವಮೂರ್ತಿಯಿಂದ ಒಂದು ಪ್ರಪೋಜಲ್ ಬಂತು : 'ರಸಿಕಕೂಟ'ದ ನಾಟಕಗಳಲ್ಲಿ
ಖಾಯಂ ಆಗಿ ಅಭಿನಯಿಸಬಲ್ಲ ಒಬ್ಬ ನಾಯಕಿಯ ಆವಶ್ಯಕತೆಯಿರುವುದರಿಂದ
ಸಾಕಷ್ಟು ಸಂಬಳ ಕೊಟ್ಟು ಈ ಜಾಗ ತುಂಬಲು ನಿರ್ಧರಿಸಿರುವುದಾಗಿಯೂ ಕಮಲಾ
ಒಪ್ಪುವುದಾದರೆ ತಮಗೆಲ್ಲ ಸಂತೋಷವೆಂದೂ ಆತ ಬರೆದಿದ್ದ. ಕಮಲಾಗೆ ಬಯಸಿದ
ಭಾಗ್ಯ ಬಾಗಿಲಿಗೆ ಬಂದಂತಾಯಿತು.
ಮೂರನೆಯದಾಗಿ ಕಮಲಾ ವಿಜಾಪುರ-ಧಾರವಾಡ ಬಿಟ್ಟು ದೂರ ಹೋಗಲು
ಬಯಸಿದ್ದಳು. ಕಾರಣ, ಶಶಿ ಮೊದಲೇ ಊಹಿಸಿದ್ದಂತೆ, ಪ್ರೇಮಭಂಗ.
ಯೂನಿವ್ಹರ್ಸಿಟಿಯಲ್ಲಿನ ಎರಡು ವರ್ಷಗಳಲ್ಲಿ ಕಮಲಾಳೊಂದಿಗೆ ಹಲವಾರು ಸಲ
ನಾಟಕದಲ್ಲಿ ಹೀರೋ ಆಗಿದ್ದ ಹುಡುಗನೊಬ್ಬ ಕೆಲವಾರು ತಿಂಗಳು ಅವಳೊಡನೆ
ಪ್ರೇಮದ ನಾಟಕವನ್ನೂ ಆಡಿ ಪರೀಕ್ಷೆ ಮುಗಿದೊಡನೆ ನಾಟಕಕ್ಕೆ ಪರದೆ ಎಳೆದು ರಂಗದ
ಹಿಂಬದಿಯಲ್ಲಿ ಅಂತರ್ಧಾನನಾಗಿ ಬಿಟ್ಟಿದ್ದ.
ಈ ಎಲ್ಲ ಕಾರಣಗಳಿಂದಾಗಿ ಕಮಲಾ ಮುಂಬಯಿಗೆ ಬರುವ ನಿರ್ಧಾರ
ಕೈಗೊಂಡಳು. ಶಶಿಯ ನೆರೆಯ ಬ್ಲಾಕ್‌ನಲ್ಲಿ ಇಬ್ಬರು ಗುಜರಾಥೀ ದಂಪತಿಗಳಿದ್ದರು.
ತಮ್ಮ ವಿಶಾಲವಾದ ಬ್ಲಾಕ್‌ನ ಎರಡು ಕೋಣೆಗಳನ್ನು 'ಡಾಕ್ಟರ್ ಬಾಯಿ'ಯ ಗೆಳತಿಗೆ