ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ...
೪೧೩

ಕಣ್ಣಿನಿಂದ ಅವಲೋಕಿಸಿದಾಗ ಎಲ್ಲ ಸಂಗತಿಗಳು ಬೇರೆಯೇ ಬೆಳಕಿನಲ್ಲಿ
ಕಾಣತೊಡಗಿದ್ದವು. ಶಿವಮೂರ್ತಿಯ ಜೊತೆ ಕಮಲಾ ಹಲವಾರು ನಾಟಕಗಳಲ್ಲಿ
ಅಭಿನಯಿಸಿದ್ದು, ಕನ್ನಡ ಹಾಗೂ ಮರಾಠಿ ಎರಡೂ ರಂಗಭೂಮಿಗಳ
ಅಭಿಮಾನಿಗಳಿಂದ ಶ್ರೇಷ್ಠ ಅಭಿನೇತ್ರಿಯೆಂದು ಹೆಸರು ಗಳಿಸಿದ್ದು, ಅವಳಿಗೆ ಬಂದ
ಹಲವಾರು ಬಹುಮಾನಗಳು, ಸಂದ ಮಾನ-ಸನ್ಮಾನಗಳು, ಮತ್ತು ನಂತರ ಹಿಂದಿ
ಚಿತ್ರವೊಂದರಲ್ಲಿ ನಟಿಸಲು ಪ್ರಸಿದ್ಧ ನಿರ್ಮಾಪಕರೊಬ್ಬರಿಂದ ಅವಳಿಗೆ ಬಂದ ಕರೆ,
ಅವಳ ಭವಿಷ್ಯದ ದಿಕ್ಕನ್ನೇ ಬದಲಿಸಿ ಅವಳಿಗೆ ಪ್ರಸಿದ್ಧಿ-ಹಣ ಎರಡೂ
ತಂದುಕೊಡಬಹುದಾಗಿದ್ದ ಅವಕಾಶ, ಅದರಿಂದ ಅವಳಿಗಾದ ಆನಂದ-ಅಭಿಮಾನ....
ಆದರೆ ಆಕಸ್ಮಿಕವಾಗಿ ಶಿವಮೂರ್ತಿಯಿಂದ ಅದಕ್ಕೆ ತಡೆ, ಆಕೆ ಸಿನಿಮಾ ಸೇರಕೂಡದೆಂದು
ಖಂಡತುಂಡವಾದ ನಿರ್ಬಂಧ....
"-ಎಷ್ಟೋ ವರ್ಷಗಳಿಂದ ನಾನು ಕಾಯುತ್ತಲಿದ್ದ ಅವಕಾಶ
ಬಂದಿರುವಾಗ ಮೂರ್ತಿ ಯಾಕೆ ಬೇಡ ಅನ್ನುತ್ತಾನೋ. ನನಗೆ ಹೆಸರು, ಹಣ
ಬರುವುದಾದರೆ ಆತ ಅಭಿಮಾನ ಪಡಬೇಡವೆ? ಆತನಿಗೇಕೆ ಈ ಹಟ? ಎಷ್ಟು
ಪ್ರಯತ್ನಿಸಿದರೂ ಆತನ ಮನಸ್ಸು ಬದಲಿಸುವುದು ಆಗಲೊಲ್ಲದು.
ಹಿಂದೆಲ್ಲ ನಾನು ಏನು ಹೇಳಿದರೂ, ಕೇಳಿದರೂ ಹಿಂದು-ಮುಂದು ನೋಡದೆ
ಒಪ್ಪಿಬಿಡುತ್ತಿದ್ದವನು ಈಗೀಗ ನನ್ನ ಎಲ್ಲ ಮಾತು-ಕಥೆ, ನಡೆ-ನುಡಿಗಳಲ್ಲಿ
ತಪ್ಪು ಕಾಣತೊಡಗಿದ್ದಾನೆ. ನಾನು ಏನು ಮಾಡುವೆನೆಂದರೂ ಬೇಡ. ಎಲ್ಲಿಗೆ
ಹೋಗುವೆನೆಂದರೂ ಬೇಡ. ನನಗೆನಿಸುತ್ತದೆ- ಆತನಿಗೆ ನನ್ನ ಮೇಲೆ
ಎಂಥದೋ ಅನುಮಾನ. ಪಾರ್ಟಿಗಳಲ್ಲಿ ಬೇರೆ ಯಾರಾದರೂ ನನ್ನನ್ನು
ಮಾತಾಡಿಸಿದರೆ ಆತನಿಗೆ ಸಿಟ್ಟು ಬರುತ್ತದೆ. ತೀರ ಅವಶ್ಯವಿದ್ದಾಗ ಸಹ,
ರಿಹರ್ಸಲ್ ನಡೆದಾಗ, ಸಹನಟರೊಂದಿಗೆ ನಾನು ಮಾತಾಡಿದರೆ ಆತನ ಕಣ್ಣು
ಕೆಂಪಾಗುತ್ತವೆ. ಮಾತು ಮಾತಿಗೆ 'ನಾನು ನನಗಾಗಿ ಎಷ್ಟು ತ್ಯಾಗ ಮಾಡಿದೆ,
ನಿನಗದರ ಬೆಲೆಯೇ ಇಲ್ಲ' ಅನ್ನುತ್ತಾನೆ. ಆತ ನನಗಾಗಿ ತನ್ನ ಹೆಂಡತಿ-
ಮಕ್ಕಳನ್ನೇನು ಬಿಟ್ಟಿಲ್ಲ. ಬಿಡಲಿ ಅಂತ ನಾನೆಂದೂ ಬಯಸಲೂ ಇಲ್ಲ. ಆತ
ಇರುವದು ಸಹ ಅವರೊಂದಿಗೆ. ಆತನ ದುಡಿಮೆಯ ಹಣವೆಲ್ಲ ಎಂದಿನಂತೆ
ಅವರಿಗಾಗಿಯೇ. ಆತ ಸಿನೆಮಾ-ಪಿಕ್ನಿಕ್ಕುಗಳಿಗೆ, ದೂರದ ಪ್ರವಾಸಗಳಿಗೆ-
ಊರಲ್ಲಿನ ಇತರ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದಾಗ
ಆತನಿಗೆ ಜೊತೆಯಾಗಿರುವವರು ಆ ಹೆಂಡತಿ, ಆಕೆಯ ಮಕ್ಕಳು. ವಾರದಲ್ಲಿ
ಒಂದು ದಿನವೋ, ಬಹಳವಾದರೆ ಎರಡು ದಿನವೋ ಬಿಡುವಿದ್ದಾಗ ಮಾತ್ರ
ಆತ ನನ್ನೊಂದಿಗೆ ಕಳೆಯುವುದು. ಹೀಗಿದ್ದಾಗ....