ಪುಟ:ನಡೆದದ್ದೇ ದಾರಿ.pdf/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧೮

ನಡೆದದ್ದೇ ದಾರಿ

ಈಗ ಕ್ಲಾರ್ಕ್ ಅಲ್ಲ ಡಾಕ್ಟರ್, ಆಫೀಸರ್ ಆಗೀನಿ. ನಮ್ಮ ಬಾಸ್ ಹೇಳಿದಾಂಗ
ಕೇಳದಿದ್ದರೆ ನನಗ ಆ ಪೈವ್ಹೇಟ್ ಬ್ಯಾಂಕಿನಾಗ ಎಂದೂ ಪ್ರಮೋಶನ್ ಸಿಗ್ತಿರಲಿಲ್ಲ.
ಪ್ರಮೋಶನ್ ಸಿಗದಿದ್ರೆ ನನ್ನ ಸಣ್ಣ ಪರಾಗದಾಗ ಅಪ್ಪನ ಬ್ಲಡ್ ಪ್ರೆಶರಿಗೆ ಔಷಧ
ತರೊದು, ಚಿಂದಿ ಸೀರಿ ಉಟಕೊಂಡು ಕಾಲ ಕಳೀತಿರೋ ಅವ್ವಗ ಹೊಸಸೀರಿ
ತರೋದು, ಇಬ್ಬರು ತಮ್ಮಂದಿರ ಕಾಲೇಜಿನ ಫೀ ಕಟ್ಟೋದು, ನನ್ನ ಉಢಾಳ ಅಣ್ಣನ
ಸಿಗರೇಟು-ಹೋಟಲಿಗೆ ರೊಕ್ಕಾ ಕೊಡೋದು, ಉದ್ದರೀ ಅಂಗಡಿ ಬಾಕಿ ಕೊಡೋದು
- ಯಾವುದೂ ಆಗ್ತಿರಲಿಲ್ಲ...."
"ಅದು ಎಲ್ಲಾ ಸರಿ, ಆದರ ನೀನು ಇನ್ನೂ ಲಗ್ನ ಆಗೋ ಹುಡುಗಿ, ಕೇರಫುಲ್
ಆಗಿರಬೇಕು."
"ಇನ್ನ ನನಗೆಲ್ಲೀ ಲಗ್ನರೀ ಡಾಕ್ಟರ್? ಹಿಂಗ ಒಂದು ಸಲಾ ಅಪವಿತ್ರ ಆದ
ದೇಹಾನ ಗಂಡ ಅನ್ನಿಸಿಕೊಳ್ಳೋ ವ್ಯಕ್ತಿಗೆ ಹ್ಯಾಂಗ ಅರ್ಪಣಾ ಮಾಡೋದು? ಅದು
ಇದಕ್ಕಿಂತ ಹೆಚ್ಛಿನ ಪಾಪದ ಕೆಲಸ ಅನಸತದ ನನಗ."

ಈ ಮಾತಿಗೆ ಶಶಿಯಲ್ಲಿ ಪ್ರತಿಮಾತು ಇರಲಿಲ್ಲ. ಆಕೆ ಸುಮ್ಮನಾದಳು.

***


ಮದುವೆಗೆ ಮೊದಲು ಯಾರೊಂದಿಗಾದರು ದೈಹಿಕ ಸಂಬಂಧ ಉಂಟಾದರೆ
ಮದುವೆಯಾಗುವ ವ್ಯಕ್ತಿಗೆ ಅದು ದ್ರೋಹ ಅಂತ ಲೀಲಾ ತಿಳಿದದ್ದು ತಪ್ಪು
ಅನ್ನಿಸಲಿಲ್ಲ ಶಶಿಗೆ. ಯಾಕೆಂದರೆ ಸಾಮಾನ್ಯವಾಗಿ ಎಲ್ಲರೂ ತಿಳಿಯುವುದು ಹಾಗೆಯೇ.
ವಿಶೇಷವಾಗಿ ಗಂಡಸರು ತಾವು ಮದುವೆಯಾಗುವ ಹೆಣ್ಣು ವ್ಹರ್ಜಿನ್
ಆಗಿರಲೇಬೇಕೆಂದು ಯಾವಾಗಲು ಇನ್ಸಿಸ್ಟ್ ಮಾಡುತ್ತಾರೆ ಅಂತ ಅನುಭವದಿಂದ
ಅವಳಿಗೆ ಗೊತ್ತಿತ್ತು. ಆದರು ಇದಕ್ಕೆ ಅಪವಾದವಾದವರೂ ಇರುತ್ತಾರೆ ಅಂತ ಕಮಲಾ
ವಾದಿಸುತ್ತಿದ್ದಳು:

"ಎಲ್ಲಾ ಗಂಡಸರೂ ಒಂದೇ ಥರ ಮೀನ್ ಮೈಂಡೆಡ್
ಆಗಿರುತ್ತಾರೆಂದು ಶಶಿಯ ಅಭಿಪ್ರಾಯ. ಬಹುತೇಕ ಗಂಡಸರು ತಮ್ಮ ಹೆಣ್ಣಿನ
ವಿಷಯದಲ್ಲಿ ಮೀನ್ ಮೈಂಡೆಡ್ ಆಗಿರುವುದು ನಿಜವೇನೋ. ಆದರೆ
ಸುದೈವದಿಂದ ನನ್ನ ಮೂರ್ತಿ ಹಾಗಲ್ಲ. ಮದುವೆಗೆ ಮೊದಲು ನಾನಾಗಿ
ಆತನಿಗೆ ನನ್ನ ಧಾರವಾಡದಲ್ಲಿ ಯೂನ್ಹಿವರ್ಸಿಟಿಯಲ್ಲಿದ್ದಾಗಿನ ವಿಫಲ
ಪ್ರೇಮದ ಬಗ್ಗೆ ತಿಳಿಸಿದಾಗ ನನ್ನನ್ನಪ್ಪಿ ಹಣೆಯ ಮೇಲೊಂದು ಹೂ
ಮುತ್ತನ್ನಿತ್ತು ಆತ ಅಂದಿದ್ದ, 'ಕಮಲಾ, ಒಂದು ಗಂಡು ಹಾಗೂ ಒಂದು
ಹೆಣ್ಣಿನ ಪ್ರೀತಿಗೆ ಪರಸ್ಪರ ಭೂತಕಾಲವೊಂದು ಅಡ್ಡಿಯಾಗುವುದಾದರೆ ಅದು