ಪುಟ:ನಡೆದದ್ದೇ ದಾರಿ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೂರ್ಖ ಆನಂದವೋ ಇವರಿಗೆ 1 ....ಕಿಡಕಿಯ ಹೊರಗೆ ಏನೋ ಸದ್ದಾಗುತ್ತಿದೆ,
ಯಾರದೋ ಬೂಟುಗಾಲಿನ ಹೆಜ್ಜೆಯ ಸದ್ದು. ಛೇ, ಇಲ್ಲ್ಯಾರು ಬರಬೇಕು ಬೂಟು
ಹಾಕಿಕೊಂಡು ? ಎಲ್ಲೋ ದನ ಇರಬೇಕು. ಸುಮ್ಮನೆ ಅಂಜಿಕೆ ತನಗೆ. ಹೀಗೆ ವ್ಯರ್ಥ
ವಿಚಾರ ಮಾಡುವ ಬದಲು ನಾಳೆ ಆ ಸ್ಕೂಲಿನಲ್ಲಿ ಮುಖ್ಯ ಅತಿಥಿಯಾಗಿ ಮಾಡಲಿರುವ
ಭಾಷಣದ ತಯಾರಿ ಮಾಡಬೇಕು.
-ಯಾಕೋ ಎದೆನೋವು ಹೆಚ್ಚಾಗತೊಡಗಿದೆ....
“ಒಂದ ಮನೀ ಇಲ್ಲ, ಮಾರಿಲ್ಲ. ಸುಡಗಾಡ ಸಿದ್ಧರಾಂಗ ಬರೆ ಗೆಸ್ಟ್ ಆಗಿ
ತಿರಗೋದರಾಗ ಇರ್ತಾಳ...."
-ಪ್ರೊ. ಲೀಲಾವತಿ ಒಂದು ಕೈಯಿಂದ ಎಡಭಾಗದ ಎದೆಯನ್ನು ಗಟ್ಟಿಯಾಗಿ
ಒತ್ತಿ ಹಿಡಿದಳು, ಪೆನ್ನು ಟೇಬಲ್ ಮೇಲಿನಿಂದ ಜಾರಿ ಬಿದ್ದಿತು.
ತನಗೆ ಮನೆ-ಮಾರು ಇಲ್ಲವೆ ? ತಾನು ಸುಡಗಾಡುಸಿದ್ಧರ ಹಾಗೆ ನೆಲೆಯೇ
ಇಲ್ಲದವಳೇ ? ಬರೇ ಅತಿಥಿಯಾಗಿ ಅಲ್ಲಲ್ಲಿ ತಿರುಗುವುದರೊಳಗೇ ತನ್ನ ಜೀವನ
ಸವೆದುಹೋಗುತ್ತಿದೆಯೇ ? ಈ ಕಾರ್ಯಕ್ರಮಗಳಿಗೆ ಮಾತ್ರವಲ್ಲ, ಈ ಜೀವನಕ್ಕೇ
ತಾನು ಅತಿಥಿಯೆಂದು ಬಂದವಳೇ ? ದುಡಿದು-ದಣಿದು ಬಂದಾಗ ತನ್ನನ್ನು
ಸ್ವಾಗತಿಸುವ, ದಣಿವು ಕಡಿಮೆ ಮಾಡುವ, ಪ್ರೀತಿಸುವ ಯಾವ ಜೀವವೂ ಇಲ್ಲಿಲ್ಲವೇ ?
ಯಾರೇಕೆ ಬೇಕು, ಒಬ್ಬಳೇ ಜೀವನವನ್ನೆದುರಿಸುವೆನೆಂಬ ಆ ಧೈರ್ಯ ಈಗ ಎಲ್ಲಿಗೆ
ಹೋಯಿತು ? ತಾನು ಎಲ್ಲಿ ಹೋದರೂ, ಬಂದರೂ, ಸತ್ತರೂ,
“ಮನೆ"ಯವಳಲ್ಲವೆಂಬ, ಬರೇ “ಅತಿಥಿ"ಯೆಂಬ ಈ ಪ್ರಜ್ಞೆ ಎಷ್ಟೊಂದು ತೀಕ್ಷ್ಣ‌ವಾಗಿ
ಹೃದಯವನ್ನು ಕೊರೆಯತೊಡಗಿದೆಯಲ್ಲ...ಏ ಸದಾನಂದ, ಈ
ಕಣ್ಣು‌ಮುಚ್ಚಾಲೆಯನ್ನು ಸಾಕುಮಾಡು. ಒಮ್ಮೆ ತಪ್ಪಾಯಿತೆಂದು ಒಪ್ಪಿಕೊಂಡುಬಿಟ್ಟೆ.
ಇದೇನು ನಿನ್ನ ಹಟ ? ಯಾಕೆ ಹೀಗೆ ಕಾಡತೊಡಗಿರುವಿ ? ನಿನ್ನ ಮನೆಗೆ ನಾನು
ಮನೆಯವಳಾಗಲಿಲ್ಲವೆಂದು, ಈ ಜಗತ್ತೇ ನನ್ನನ್ನು ಅತಿಥಿಯ ಹಾಗೆ ಕಾಣಲೆಂದು
ನೀನೇನು ಶಾಪ-ಗೀಪ ಕೊಟ್ಟಿದ್ದೀಯಾ ಹೇಗೆ ? ಈ ಶಾಪವನ್ನು ಹಿಂದಿರುಗಿಸಿಕೊಳ್ಳೋ
ಪುಣ್ಯಾತ್ಮ.... ನಿನಗಷ್ಟು ಮನಸ್ಸಿದ್ದರೆ, ನಾನು ಸೋತೆನೆಂದು ನನ್ನಿಂದಲೇ
ಹೇಳಿಸಬೇಕೆಂಬ ಇಚ್ಛೆ‌ಯಿದ್ದರೆ, ಇದೋ ಹೇಳುತ್ತಿದ್ದೇನೆ. ಬೇಕಾದರೆ ಅತ್ತು
ಬಿಡಲೇನು ? ನಿನಗೆ ಸಮಾಧಾನವಾಗುವಂತಿದ್ದರೆ ಅಳಲು ನನ್ನ ಅಡ್ಡಿಯೇನಿಲ್ಲ....
-ಕಣ್ಣೀರು ಜಾರಿ ಪೇಪರಿನ ಮೇಲೆ ಬಿದ್ದು ಟಪ್ ಎಂದು ಸದ್ದಾದಾಗ ಪ್ರೊ.
ಲೀಲಾವತಿ ಒಮ್ಮೆಲೆ ಅರಿವಿಗೆ ಬಂದಳು. ತನ್ನ ಈ ರೊಮ್ಯಾಂಟಿಕ್ ಕಲ್ಪನೆಯಿಂದ
ಅವಳಿಗೆ ಬಹಳ ಮಜಾ ಅನಿಸಿತು. ಇದೇನು, ನಿಜವಾಗಿಯೂ ಅಳುತ್ತಿದ್ದೇನಲ್ಲ,