________________
ನಡೆದದ್ದೇ ದಾರಿ ಹೀಗೆಲ್ಲ ಮಾಡಬಾರದು ಅನಿಸಿರಬೇಕು ಆತನಿಗೆ ಆತನ ಈ ಮೌನ, ಈ ದೂರತೆ, ಈ ತಾತ್ಸಾರದ ಪರಿಣಾಮವೇ ತನ್ನ ಇತ್ತೀಚಿನ ಬೇಸರ ? - ಅಂದರೇನು ತಾನೇನು ಸತೀಶನನ್ನು ಪ್ರೀತಿಸುತ್ತಿದ್ದೇನೋ ಏನು ಮಣೋ ? - ಛೇ, ಛೇ ತಾನು ಮತ್ತು ಪ್ರೀತಿ ಮತ್ತು ಒಬ್ಬ ಗಂಡಸು ! ಎಲ್ಲಿಂದೆಲ್ಲಿಯ ಸಂಬಂಧ ! ತಾನೇನು ಕಮಲಾ ಅಲ್ಲ ಗಂಡಸನ್ನು ಪ್ರೀತಿಸಲು. ತಾನೇನು ರೋಶನ್‌ಬಿ ಅಥವಾ ಪೂರ್ಣಿಮಾ ಸಿಂಗ್ ಅಲ್ಲ ಗಂಡಸಿನ ಹಿಡಿತದಲ್ಲಿ ಸಿಕ್ಕು ಒದ್ದಾಡಲು. ತಾನೇನು ಲೀಲಾ ಕುಲಕರ್ಣಿಯಲ್ಲಿ ಬಸಿರಾಗಿ ಅಳುತ್ತ ಕೂಡಲು, ತಾನು ಈ ಎಲ್ಲಾ ಮೂರ್ಖ ಹೆಂಗಸರಿಗಿಂತ ಬೇರೆ. ತೀರ ಬೇರೆ. ಹಾಗಿದ್ದರೆ ಮೊನ್ನೆ ಸಂಜೆ ತೀರ ಬೇಸರವಾಗಿದ್ದಾಗ, ಎಲ್ಲಾದರೂ ಔಟಿಂಗ್‌ಗೆ ಹೋಗಬೇಕು ಅನ್ನಿಸಿದಾಗ, ಡಾ. ಖಾನ್ ಎಷ್ಟು ಜುಲುಮೆಯಿಂದ ಎಲಿಫಂಟಾ ಕೇಮ್ಸ್ಗೆ ಅಥವಾ ವಿಹಾರ್‌ಲೇಕ್‌ಗೆ ಹೋಗೋಣ ಬಾ ಅಂತ ಕರೆದರೂ ತಾನೇಕೆ ಒಲ್ಲೆ ಅಂದಿದ್ದು ? ಎದುರಿಗೆ ಸತೀಶನೂ ಇದ್ದ. ಖಾನ್ ತನ್ನನ್ನು ಕರೆದಾಗ ತನ್ನ ಕಡೆ ಒಮ್ಮೆ ನೋಡಿದ. ತಾನು ಒಲ್ಲೆ ಅಂದಾಗ ಎದ್ದು ಹೋದ. ಸತೀಶ ಹೋದೊಡನೆ ತನಗೇಕೆ ತಲೆನೋವು ಸುರುವಾದದ್ದು ? -ಮುಂದೆ ಯೋಚಿಸಲು ಬೇಸರವಾಯಿತು ಶಶಿಗೆ ಲೀಲಾ ಪುರಸೊತ್ತಾಗಿದ್ದರೆ ಅವಳನ್ನು ಕರಕೊಂಡು ಒಂದು ಸಿನೆಮಾನಾದರೂ ನೋಡೋಣವೆಂದು ಕೆಳಗಿಳಿದು ಕುಲಕರ್ಣಿ ಮಾಸ್ತರರ ಮನೆಗೆ ಹೋದರೆ ಬಾಗಿಲಲ್ಲೇ ಭೆಟ್ಟಿಯಾದಳು ಲೀಲಾ. ಎಲ್ಲೋ ಹೊರಡುವ ತಯಾರಿಯಿಂದ ಹೊರಬಂದಿದ್ದಳು. ಶಶಿಗೆ ಲೀಲಾ ಒಮ್ಮೆಲೇ ಬದಲಾದಂತೆ ತೋರಿದಳು. ಅವಳ ಒಂದು ಜಡೆ, ವಾಯಲ್ ಸೀರೆ, ಮುತ್ತಿನ ಬೆಂಡೋಲೆ, ಹವಾಯಿ ಚಪ್ಪಲಿ, ದೊಡ್ಡ ಕರಿಯ ಕೊಡೆ ಮಾಯವಾಗಿದ್ದವು. ಎತ್ತಿ ಕಟ್ಟಿದ ಕೂದಲು, ಪಾಲಿಸ್ಟರ್ ಸೀರೆ, ದೊಡ್ಡ ಬಳೆಯಾಕಾರದ ರಿಂಗು, ಎತ್ತರದ ಹಿಮ್ಮಡಿಯ ಶೂ, ಫ್ಯಾಶನೇಬಲ್ ಆಗಿ ಕಾಣುತ್ತಿದ್ದ ಸೀರೆಗೆ ಮ್ಯಾಚ್ ಆಗಿದ್ದ ವ್ಯಾನಿಟಿಬ್ಯಾಗ್, ಮುಖದ ಮೇಲೆ ಆತ್ಮವಿಶ್ವಾಸದ ಮುಗುಳಗು. ಆಕೆ “ನಮಸ್ಕಾರ ಡಾಕ್ಟರ್" ಅಂದಾಗ ಶಶಿ ಚೇತರಿಸಿಕೊಂಡು ಕೇಳಿದಳು, “ಎಲ್ಲಿಗೆ ಸವಾರಿ ?" ಧ್ವನಿ ತಗ್ಗಿಸಿ ಕಣ್ಣು ಮಿಟುಕಿಸುತ್ತಾ ಲೀಲಾ ಕುಲಕರ್ಣಿ ಹೇಳಿದಳು, “ನಮ್ಮ ಬಾಸ್ ಕೂಡ ಲೋಣಾವಳಕ್ಕೆ ಹೊರಟೀನಿ. ಆಫೀಶಿಯಲ್ ಟೂರ್ ಅಂತ ಹೇಳೀನಿ ಮನ್ಯಾಗ, ಈ ಸೀಕ್ರೆಟ್ ನಿಮ್ಮೊಳಗ ಇರಿ. ನಂತರ ನಕ್ಕು ಮತ್ತೆ ಸೇರಿಸಿದಳು, “ಮತ್ತೇನರೆ ಡಿಫಿಕಲ್ಟಿಯೊಳಗ ಇನ್ನ ಸಿಕ್ಕಿಹಾಕಿಕೊಂಡು ನಿಮಗೆ ತ್ರಾಸ ಕೊಡೂದಿಲ್ಲ ಡಾಕ್ಟರ್, ನಾ ಈಗ ಸಾಕಷ್ಟು ಶಾಣ್ಯಾಕಿ ಆಗೀನಿ. ನೀವ ಹೇಳಿದಾಂಗ ಕೇರ್‌ಫುಲ್