ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅವನಲ್ಲಿನ್ನೂ ಹೊಸ ಜೀವಶಕ್ತಿ ತುಂಬಿ ಹರಿಯುತ್ತಿದ್ದಾಗ, ಅವನು ಪ್ರೀತಿಸಿದ ಹುಡುಗಿಯೊಬ್ಬಳು ಬೇಕಾಗಿಯೋ ನಿರುಪಾಯಳಾಗಿಯೋ ಅವನಿಗೆ ಕೈಕೊಟ್ಟು ಹೋದಳೆಂದು, ಮನುಷ್ಯತ್ವ ಕಳೆದುಕೊಂಡು, ಕನಸು ಒಡೆಯಿತೆಂದು, ಜೀವಶಕ್ತಿ ಉರಿದು ಬೂದಿಯಾಯಿತೆಂದು, ಪ್ರೀತಿ ಬರಿ ಹೊಗೆಯಾಯಿತೆಂದು, ಎಲ್ಲದರ ಮೇಲೆ—ಎಲ್ಲರ ಮೇಲೆ ಸಿಟ್ಟಾಗಿ ಈ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲು ಬಯಸಿದನೆ?

'ಶಶಿ, ಹಿಂದೆ ಜೀವನದಲ್ಲಿ ನನಗಾದ ಆಘಾತದಿಂದ ನಾನೆಂದೂ ಚೇತರಿಸಿಕೊಳ್ಳಲಾರೆನೇನೋ ಎನಿಸಿದ್ದ ದಿನಗಳಲ್ಲಿ ನಿನ್ನನ್ನು ಕಂಡೆ. ನಿನ್ನಿಂದ ನನ್ನ ಜೀವನಕ್ಕೊಂದು ಅರ್ಥ ಬರುತ್ತಿದೆ. ಜನ್ಮಾಂತರಗಳಿಂದಲೂ ನನ್ನ ಅತೃಪ್ತ ಆತ್ಮ ಅರಸುತ್ತಿದ್ದ ಉತ್ತರ ನಿನ್ನಲ್ಲಿ ಸಿಗತೊಡಗಿದೆ. ಈ ಉತ್ತರವನ್ನು ಪರಿಪೂರ್ಣಗೊಳಿಸಿ ನನ್ನ ವ್ಯಕ್ತಿತ್ವವನ್ನೇ ಹರಿದುತಿನ್ನುತ್ತಿರುವ ಪ್ರಶ್ನೆಯನ್ನು ಕೊನೆಗೊಳಿಸು, ಇಲ್ಲದಂತಾಗಿಸು'- ಎಂದು ಮೊದಲಲ್ಲಿ ಯಾಚಿ ದಾಗ ಎಷ್ಟು ಪ್ರಾಮಾಣಿಕನಾಗಿ ತೋರಿದ್ದನೋ ಇಂದು ಬಹಳ ದಿನಗಳ ನಂತರದ ಒಂದು ಸಂಜೆ ತನ್ನ ಸತ್ಯ ಸ್ವರೂಪವನ್ನು ಬಯಲಿಗಿಡುವಾಗಲೂ ಅದೇ, ಅಂಥದೇ ನಿರ್ಲಜ್ಜ ಪ್ರಾಮಾಣಿಕತೆ ಕಾಣುತ್ತಿತ್ತು ಅವನ ಹಿಂಡಿ ಹಿಪ್ಪೆಯಾದಂಥ ಮುಖದಲ್ಲಿ. 'ಕ್ಷಮಿಸು ಶಶಿ, ಇಷ್ಟು ದಿನಗಳ ನಂತರದ ಆತ್ಮಶೋಧನೆಯಿಂದ ನನ್ನ ಪ್ರಶ್ನೆಯ ಉತ್ತರ ನೀನಲ್ಲ—ನೀನಾಗಲಾರೆಯೆಂದು ನನಗೆ ತಿಳಿದು ಬಂದಿದೆ' ಎಂದನಲ್ಲ, ಇವನ "ಆತ್ಮಶೋಧನೆ'ಯ ಅರ್ಥವೇನು? ಇವನ, ಇವನ ಸಾಹಿತ್ಯದ, ಹಣೆಬರಹವೇ ಇಷ್ಟೆಯೇ? 'ಶೋಧನೆ' ಮಾಡಲು 'ಆತ್ಮ'ವಾದರೂ ಇವನಿಗಿದೆಯೆ? ಅಥವಾ ಉಳಿದೆಲ್ಲದರ ಹಾಗೆ ಈ ಕಲ್ಪನೆಯೂ ಬರಿ ಭ್ರಮೆಯೋ? ಒಂದು ಸೂತ್ರವನ್ನೋ ತತ್ವವನ್ನೋ ಕಂಡು ಹಿಡಿಯಲು ನಿರ್ಜಿವ ಅಂಕಿ-ಸಂಖ್ಯೆಗಳ ಮೇಲೆ, ಸಜೀವ ಕ್ರಿಮಿಕೀಟಗಳ ಮೇಲೆ ಪ್ರಯೋಗ ಮಾಡುತ್ತಾರಲ್ಲ, ಹಾಗಿವನು ತನ್ನ ಪ್ರಶ್ನೆಗೆ ಉತ್ತರ ಹುಡುಕಲು ನನ್ನ ಮೇಲೆ ಪ್ರೀತಿಯ ಪ್ರಯೋಗ ಮಾಡಿ ನೋಡಿದನೇ?

ಬರೇ ಪ್ರಶ್ನೆ. ಇವನ ಸಹವಾಸದಿಂದ ಜೀವನವೇ ಒಂದು ಪ್ರಶ್ನೆಯಾಗತೊಡಗಿದೆ. ಉತ್ತರವಿಲ್ಲದ ಪ್ರಶ್ನೆ: ಉತ್ತರ ಬೇಕೆಂದು ಕಿರುಚುತ್ತಿರುವ ಪ್ರಶ್ನೆ.

ಮೊನ್ನೆ-ಮೊನ್ನೆ ಮನೆಗೆ ಹೋದಾಗ, ಯಾರೊಂದಿಗೋ ಹರಟುತ್ತಿರುವಾಗ ಜೀವನವೇ ಒಂದು ಪ್ರಶ್ನೆ ಎಂದು ತಾನಂದದ್ದನ್ನು ಕೇಳಿಸಿಕೊಂಡ ತಂದೆ ಹೇಳಿದ್ದರು, "ಹೆಣ್ಮಕ್ಕಳು ಲಗ್ನಾ ಮಾಡಿಕೊಂಡ ಮ್ಯಾಲೆ ಎಲ್ಲಾ ಪ್ರಶ್ನಿನೂ ಬಗೀಹರೀತಾವ. ನೀ