________________
೪೬೯ ದೆವ್ವ ನಿನ್ನೆ ರಾತ್ರಿ ಹಾಳು ಕನಸು, ಸ್ಕೂಟರ್ ಮೇಲೆ ಕೂತು ಗಾಳಿಯೊಂದಿಗೆ ಗಾಳಿಯಾಗಿ ವಿಪರೀತ ಸ್ಪೀಡಿನಿಂದ ತಾನು ಹೋಗುತ್ತಿದ್ದಂತೆ... ತನ್ನ ಹಿಂದೆ ತನಗೆ ಆತು ಕೂತವಳ ನೈಲಾನ್ ಸೀರೆಯ ಸೆರಗು ಭರೆಂದು ಹಾರಾಡುತ್ತಿದ್ದಂತೆ... ತನ್ನ ಬೆನ್ನಿಗೆ ಅವಳ ಎದೆಯ ಹಿತವಾದ ಸ್ಪರ್ಶ... ಯಾರವಳು ? ಕರ್ನಾಟಕ ಸಂಘದ ವಾರ್ಷಿಕೋತ್ಸವದಲ್ಲಿ ತಾನು ನಿರ್ದೇಶಿಸಿದ ತನ್ನ ನಾಟಕದ ನಾಯಕಿಯಾಗಿದ್ದ ಆ ತೆಳುವಾದ ಎತ್ತರವಾದ ಹುಡುಗಿಯ ? ಅಥವಾ ಮಗ್ಗುಲ ಮನೆಗೆ ಹೊಸದಾಗಿ ಬಾಡಿಗೆಗೆ ಬಂದಿರುವ ತರುಣ ಇಂಜಿನಿಯರನ ದಪ್ಪನಾದ ಬೆಳ್ಳಗಿನ ಹೆಂಡತಿಯ ? ಇಲ್ಲವೆ ಮೊನ್ನೆ ಆ ಹುಡುಗಿಯರ ಕಾಲೇಜಿನ ಗ್ಯಾದರಿಂಗಿಗೆ ತಾನು ಭಾಷಣಕ್ಕಾಗಿ ಹೋದಾಗ ಕಾರ್ಯದರ್ಶಿಯೆಂಬ ನೆವದಿಂದ ಎರಡು ತಾಸು ತನ್ನ ಹಿಂದೆ-ಮುಂದೆ ಮಾತಾಡುತ್ತ ಸುಳಿದಾಡಿದ... ಬಳುಕುವ ನಡುವಿನ ಹೆಂಗಸೆ ? ...ಯಾರಿದ್ದರೇನು, ಸ್ಕೂಟರಿನ ಹಿಂದಿನ ಸೀಟಿನಲ್ಲಿ ಅವಳು ಕೂತಿದ್ದಂತೂ ನಿಜ. ಆ ಕೊನೆಯಿಲ್ಲವೆಂಬಂತೆ ತೋರುತ್ತಿದ್ದ ದಾರಿಗುಂಟ ತಾವಿಬ್ಬರೂ ಎಲ್ಲಿಗೋ ಹೊರಟಿದ್ದೂ ಅಷ್ಟೇ ನಿಜ. ಎಷ್ಟು ಸುಂದರವಾಗಿತ್ತು ಕನಸಿನ ಈ ಮೊದಲ ಅಂಕ !... ಮುಂದೆ ಮುಂದೆ ಹೊಸ ಬಗೆಯ ತಂತ್ರವೆಂದು ತನ್ನ ಇತ್ತೀಚಿನ ನಾಟಕದಲ್ಲಿ Climax ನ್ನು ತಾನು ಪ್ರಾರಂಭದಲ್ಲೇ ತಂದ ಹಾಗೆ ನಡೆದಿತ್ತು ಆ ಅನಿರೀಕ್ಷಿತ ಘಟನೆ. ಆಬ್ಬ, ಈಗ ನೆನೆದರೂ ಮೈ ಮೇಲಿನ ಕೂದಲು ಸೆಟೆದು ನಿಲ್ಲುತ್ತವೆ... ಮುಂದೇನಾಯಿತು ? ಹ್ಯಾ, ಮುಂದೆ ಫಕ್ಕನೆ ತನ್ನ ಮುಖದ ಮೇಲೆ ಸರಿಯಾಗಿ ಯಾರೋ ಉಗುಳಿದ ಹಾಗೆ... ತನ್ನ ಬಗ್ಗೆ ತನಗೇ ಒಂದು ಕ್ಷಣ ಹೇಳತೀರದ ಜಿಗುಪ್ಪೆ, ಹೇಸಿಕೆ, ನಾಚಿಕೆ, ನಂತರ ತಲೆತಗ್ಗಿಸಿದ್ದ ಹಾಗೆಯೇ- ಕಣ್ಣು ಮುಚ್ಚಿದ್ದ ಹಾಗೆಯೇ ಉಗುಳಿದವರು ಯಾರೆಂದು ನೋಡಲು ಪ್ರಯತ್ನಿಸಿದ್ದ ತಾನು. - ಅಸ್ಪಷ್ಟ, ತೀರ ಮಸಕಾಗಿದ್ದ ಆಕೃತಿ, ಭಯಾನಕವಾಗಿತ್ತು. ನೆರಳೊಂದಿಗೆ ನೆರಳಾಗಿ ಹೊರಟೇ ಹೋಗಿತ್ತು. ಮೈಯೆಲ್ಲ ಬೆವರೋ ಬೆವರು. ಆ ಹೊತ್ತಿಗೆ ಸರಿಯಾಗಿ ತನ್ನ ಹೆಂಡತಿ ಬಂದು, ಮುಸುಕೆಳೆದು, ಎಬ್ಬಿಸಿ, ಪುಣ್ಯ ಕಟ್ಟಿಕೊಂಡಳು ಮಹಾರಾಯತಿ, ತನ್ನ ಹುಚ್ಚಾಗಿದ್ದ ಮುಖ ನೋಡಿ ಸಂಶಯ ಬರುವಷ್ಟು ಬುದ್ದಿ ಅವಳಿಗಿರದಿದ್ದುದೂ ಪುಣ್ಯವೇ ಅನ್ನ ಬೇಕು.