________________
೪೯೦ ನಡೆದದ್ದೇ ದಾರಿ “ಮಿಲಿ, ಖರೇ ಹೇಳು, ಸೋನಿಯಾ ಚಿತ್ರಾ ತಗಿಯೋವಾಗ ನೀ ಏನು ಮಾಡತಾ ಇದ್ದಿ ?" “ಅಮ್ಮಾ, ನಾ ಕೈಕಾಲು ಮುಖ ತೊಳಕೊಂಡು ಬನಿ ಹ್ಯಾ" ಅಂತ ಹೇಳಿ ಮಿಲಿ ಕಾಲು ಕಿತ್ತಳು. ನನ್ನ ಪ್ರಶ್ನೆಯ ಉತ್ತರ ನನಗೆ ಗೊತ್ತಾಗಿ ಬಿಟ್ಟಿತು. ಮಿಲಿಯ ಆಪ್ತ ಗೆಳತಿ ಸೋನಿಯಾ. ತುಂಬ ತುಂಟಿ. ಓದಿನಲ್ಲಿ ಜಾಣೆ ಕೂಡ. ಬೋರ್ಡಿನ ಮೇಲೆ ಟೀಚರರ ಚಿತ್ರ ತೆಗೆಯುವುದು, ಆಯಾ ಟೀಚರರಿಗೆ ಹೊಂದುವಂಥ ಟೀಕೆ-ಟಿಪ್ಪಣಿ ಬರೆಯುವುದು, ಹಾಜರಿ ತೆಗೆದುಕೊಳ್ಳುವಾಗ ಪ್ರಾಕ್ಸಿ ಹೇಳುವುದು, ಟೀಚರನ್ನೇ ತಬ್ಬಿಬ್ಬು ಮಾಡುವಂಥ ಪ್ರಶ್ನೆ ಕೇಳುವುದು, ಕ್ಲಾಸಿನಲ್ಲಿ ಬೋರಾದರೆ ಟೇಪ್ ರಿಕಾರ್ಡರಿನಲ್ಲಿ ಕ್ಯಾಸೆಟ್ ಹಾಕಿ ಕೇಳುವುದು, ಹಿಂದಿನ ಬೆಂಚಿನಲ್ಲಿ ಕೂತು ಕಳ್ಳ ದನಿಯಲ್ಲಿ ಜೋಕ್ಸ್ ಹೇಳುತ್ತ ತಾನು ಗಂಭೀರವಾಗಿ ಕೂತು ಜೊತೆಯವರನ್ನು ನಗಿಸಿ ಅವರು ಬೈಯಿಸಿಕೊಳ್ಳುವಂತೆ ಮಾಡುವುದು – ಇವೆಲ್ಲ ಸೋನಿಯಾಳ ಪ್ರೀತಿಯ ಹವ್ಯಾಸಗಳು. ಈ ಹುಡುಗಿಯರಷ್ಟೇ ಅಲ್ಲ, ಹುಡುಗರಿಗೂ ಸೋನಿಯಾನೇ ಲೀಡರ್. ಆಕೆಯೇ ಯಾವಾಗಲೂ ಕ್ಲಾಸಿನ ಮಾನಿಟರ್, ತನ್ನ ವಿರುದ್ಧ ಸೊಲ್ಲೆತ್ತುವ ಗಂಡು ಹುಡುಗರ ಹೆಸರುಗಳನ್ನು ಬ್ಲಾಕ್ ಲಿಸ್ಟಿನಲ್ಲಿ ಸೇರಿಸಿ ಟೀಚರಿಂದ ಶಿಕ್ಷೆ ವಿಧಿಸುವುದೆಂದರೆ ಅವಳಿಗೆ ಬಹಳ ಇಷ್ಟ, ಎತ್ತರವಾಗಿ ಕಟ್ಟು ಮಸ್ತಾಗಿದ್ದ ಆಕೆ ಹಲವಾರು ಬಾರಿ ಕ್ಲಾಸಿನಲ್ಲಿ ಫೈಟಿಂಗ್ ಮಾಡಿ ಹುಡುಗರನ್ನು ಸೋಲಿಸಿದ್ದೂ ಉಂಟು. ಕ್ರೀಡಾಕೂಟಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಸಭೆಮೆರವಣಿಗೆಗಳಲ್ಲಿ, ಸೋನಿಯಾ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದಳು. ಪರೀಕ್ಷೆಗಳಲ್ಲೂ ಅಷ್ಟೇ, ಮೊದಲ ಬ್ಯಾಂಕು ತಪ್ಪಿದರೆ ಎರಡು ಅಥವಾ ಮೂರನೆಯ ಲ್ಯಾಂಕು ಅವಳಿಗೆ ಸಿಕ್ಕೇ ಸಿಗುತ್ತಿತ್ತು. ಒಮ್ಮೆ ಮಿಲಿಯ ಕ್ಲಾಸಿನವರು ಕಾರವಾರಕ್ಕೆ ಟ್ರಿಪ್ ಹೋದಾಗ ಕಾಲುಜಾರಿ ನೀರಲ್ಲಿ ಮುಳುಗಿ ಹೋಗತೊಡಗಿದ್ದ ಕ್ಲಾಸ್ ಟೀಚರನ್ನು ಸೋನಿಯಾ ಈಜಿಕೊಂಡು ಹೋಗಿ ದಡಕ್ಕೆ ಎಳೆದು ತಂದಳು. ಈ ಘಟನೆಯ ನಂತರವಂತೂ ಸೋನಿಯಾಳ ವೀರಗಾಥೆಗಳು ಹೊಸ ಬಣ್ಣವನ್ನೇ ಪಡೆದುಕೊಂಡವು. ಹುಟ್ಟಿನಿಂದ ರಜಪೂತಳಾದ ಆಕೆಯನ್ನು ಎಲ್ಲರೂ ಸ್ಟಂಟ್ ಕ್ಲೀನ್ ಎಂದೇ ಕರೆಯತೊಡಗಿದ್ದರು. ಮಿಲಿಗಂತೂ ಸೋನಿಯಾ ಬಗ್ಗೆ ವಿಪರೀತ ಅಭಿಮಾನ, ನನಗೂ ಅಷ್ಟೆ.