ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಮುಳ್ಳುಗಳು / ಪ್ರಶ್ನೆ
೪೩

ಬೆಳಗಾಗುತ್ತದೋ ಆಗಲಿ-ಎನ್ನಿಸಿತು.

ಮೂರು ಗಂಟೆ.... ತಮ್ಮಿಬ್ಬರ ಪರಿಚಯವಾದ ಹೊಸದರಲ್ಲಿ ಹೇಳಿದ್ದ No. IV, "ಶಶೀ, ನನಗೆ ನಿನ್ನ ಯೋಚನೆಯಲ್ಲಿ ನಿದ್ರೆಯೇ ಬರುವದಿಲ್ಲ. ದಿನಾ ಮೂರು ಗಂಟೆಗೇ ಎಚ್ಚರವಾಗಿಬಿಡುತ್ತದೆ. ನಾನು ನಿನ್ನ ಬಗ್ಗೆ ಯೋಚಿಸದೇ ಇದ್ದ ಕ್ಷಣವೂ ಇಲ್ಲ.’ ಇರಬೇಕು, ಆಗ ಅವನಿಗೆ ಹಾಗನಿಸುತ್ತಿದ್ದಿರಬೇಕು. ಆದರೆ ತಾನೇಕೆ ಅದಕ್ಕಾಗಿ ರಾತ್ರಿ ಮೂರು ಗಂಟೆಗೆ ಕಣ್ಣು ಬಿಟ್ಟು ಕೊಂಡು ಹೀಗೆ ಕುದಿಯಬೇಕು? ತನ್ನ ಬಗ್ಗೆ ಸದಾ ಯೋಚಿಸುವೆನೆಂದು ಹೇಳಿದವನು ಇವನೇ ಮೊದಲನೆಯವನೇನಲ್ಲವಲ್ಲ! ತನ್ನ ನೆನಪಿನಲ್ಲಿ ಈಗ ದೂರದ ಕಿರುನೆರಳಾಗಿ ಮಾತ್ರ ಉಳಿದ No. 1. No. II ಇತ್ಯಾದಿ ಅಸಂಖ್ಯರೆಲ್ಲ ಹೀಗೆ ಹೇಳಿದ್ದರು. ಬಿಳಿ ಬೆಡ್ಶೀಟ್‌ನ ಮೇಲೆ ಬಂದ ತಗಣಿಯನ್ನು, ಕಲೆಗಳು ಬೆಡ್ ಶೀಟಿನ ಮೇಲೆ ಉಳಿದಾವೆಂದು ಸಹ ಚಿಂತಿಸದೆ, ಅಲ್ಲೇ ಒರೆದು ಬಿಡುವ ಹಾಗೆ ಅವರನ್ನೆಲ್ಲ ಒರೆದು ಬಿಡಲಿಲ್ಲವೆ? ಆದರೆ ಈ No. IV ಬರಿಯ ತಗಣಿಯಲ್ಲ. ಹಾಗಾದರೆ ಇವನೇನು ಚೇಳೆ? ಹಾವೆ?

-ಮತ್ತೆ ಪ್ರಶ್ನೆ. ಇವನ ಬಗೆಗಿನ ವಿಚಾರಗಳಿಗೆ ಅನಿವಾರ್ಯವಾದ ಕೊನೆಯ ಹಂತವೆಂದರೆ ಒಂದು ಪ್ರಶ್ನಾರ್ಥಕ ಚಿಹ್ನೆ. ಉತ್ತರ ಹುಡುಕಲು ಪ್ರಯತ್ನ ಮಾಡಿದಂತೆಲ್ಲಾ ಪ್ರಶ್ನೆ ದೊಡ್ಡದು- ದೊಡ್ಡದಾಗುತ್ತ ನಡೆಯುತ್ತಿದೆ. ಸುಮ್ಮನೆ ಸ್ವಸ್ಥ ಮಲಗುವುದು ಒಳ್ಳೆಯದು.

.............

ಸ್ವಸ್ಥ ಮಲಗುವುದೆ? ಇನ್ನೆಲ್ಲಿಯ ಸ್ವಸ್ಥ ಇಷ್ಟೆಲ್ಲಾ ಆದ ನಂತರ?

ಏನೆಲ್ಲ ಆಗಿ ಹೋಯಿತು ಇಷ್ಟು ಸ್ವಲ್ಪ ಅವಧಿಯಲ್ಲಿ! ಬೇಡ — ಬೇಡವೆಂದರೂ ಶಶಿಯ ಕಣ್ಣುಗಳು ಆಕಸ್ಮಾತ್ತಾಗಿ ತುಂಬಿಬಂದವು ಆ ನೆನಪಿನಿಂದ. ತನ್ನ ಸಾಹಿತ್ಯದಂತೆಯೇ ತಾನೂ ಪ್ರಾಮಾಣಿಕನೆಂದು, ಬಿಚ್ಚುಮನಸ್ಸಿನವನೆಂದು, ಇದ್ದುದನ್ನು ಇದ್ದಂತೆ ಹೇಳುವವನೆಂದು, ಒಣ ಜಂಭ ಈ No. IVನಿಗೆ, ಈ ಜಂಭದಲ್ಲಿ -ಮೌಡ್ಯದಲ್ಲಿ ಆತನಿಗೆ ತನ್ನ ಭಾವನೆಗಳ ಪೊಳ್ಳು, ತನ್ನ ವ್ಯಕ್ತಿತ್ವದ ಶೂನ್ಯ ಗಮನಕ್ಕೆ ಬರುವುದೇ ಇಲ್ಲ. ಈತನ ನವ್ಯತೆಗೆ-ಸಾಹಿತ್ಯಕ್ಕೆ ಬೆಂಕಿ ಹಚ್ಚಬೇಕು..... ಎಂಥ ಹುಚ್ಚು ಧೈರ್ಯ ಆತನಿಗೆ! ಈ ಅನುಭವದಲ್ಲಿ ಹಿಂದೊಮ್ಮೆ ಮಣ್ಣು ಮುಕ್ಕಿದ್ದನ್ನು ಆಗಾಗ ಮರೆತುಬಿಟ್ಟು ಮತ್ತೆ ಅಂಥದೇ ಅನುಭವಗಳ ಜಾಲದಲ್ಲಿ ಸಿಕ್ಕುಬೀಳುವ, ಒದ್ದಾಡುವ ಬಯಕೆ. ಇಲ್ಲವಾದರೆ ಆತನ ಸಾಹಿತ್ಯಕ್ಕೆ ವಾಸ್ತವಿಕತೆ, ವೈವಿಧ್ಯತೆ ಎಲ್ಲಿಂದ ಬರಬೇಕು? 'ಶಶಿ, ಎಲ್ಲಾ ಬಿಟ್ಟು ದೂರ ಹೋಗೋಣ ಬಾ, ಇಷ್ಟು ದಿನ ನಾವಿಬ್ಬರೂ ಪರಸ್ಪರರಿಗಾಗಿ ಹುಡುಕಾಡುತ್ತಿದ್ದೆವು.