ಇನ್ನಷ್ಟು ಕತೆಗಳು/ ಸಮಾಧಾನ ೪೯೭
ವೇಟ್ ಮಾಡ್ರಿ" -ಅಂತ ಕ್ಲಾರ್ಕ್ ತನ್ನ ಟೇಬಲಿನಿಂದ ತಲೆಯೆತ್ತದೇ ಹೇಳಿದಾಗ ಅವಳಿಗೆ ಸ್ವಲ್ಪ ನಿರಾಶೆಯಾಯಿತು. ಒಂದೇ ಕ್ಷಣ. ಇನ್ನು ಈ ಪ್ರಿನ್ಸಿಪಾಲರನ್ನು, ಇಡೀ ಹೈಸ್ಕೂಲನ್ನು, ಅದರ ಮೇಲಿನವರನ್ನು ಸಹ, ತನ್ನ ಕೂಡ ಮಾತಾಡಲು ವೇಟ್ ಮಾಡಹಚ್ಚಿದಾಗ ಈ ನರತಲೆಯ ಕ್ಲಾರ್ಕ್‍ನಿಗೆ ತನ್ನ ಕಿಮ್ಮತ್ತು ತಿಳಿಯುವುದೆಂದು ಆಕೆ ಸಮಾಧಾನ ಹೇಳಿಕೊಂಡಳು. ಐದು ನಿಮಿಷ, ಹತ್ತು ನಿಮಿಷ. ಅವಳ ಸಹನೆ ಮೀರುತ್ತ ಬಂತು. ಅವಳಿಗೆ ನೆನಪಿರುವ ಹಾಗೆ ಅವಳೆಂದೂ ಯಾರಿಗೂ ಕಾಯ್ದುದಿಲ್ಲ. ಇನ್ನು ಈ ಪ್ರಿನ್ಸಿಪಾಲನದೇನು ? ಇವಳ್ಯಾವಳು ವರ್ಮಾಬಾಯಿ ಇಷ್ಟೊತ್ತು ಮಾತಾಡುವವಳು ? ತಾನೊಮ್ಮೆ ಒಳಗೆ ಹೋದರೆ ಅವಳಲ್ಲಿಂದ ಹೊರಡಬೇಕಾಗುವುದು ಖಂಡಿತ ; ಹೋಗಿಯೇ ಬಿಟ್ಟರೇನು -ಅಂತ ಅವಳಂದುಕೊಳ್ಳುವಷ್ಟರಲ್ಲಿ ಅವಳ ಹೆಸರಿನ ಕಾರ್ಡನ್ನು ಪ್ರಿನ್ಸಿಪಾಲರ ಕಡೆ ಒಯ್ದಿದ್ದ ಪ್ಯೂನ್ ಹೊರಬಂದು ಅವಳಿಗೆ ಪ್ರಿನ್ಸಿಪಾಲರ ಸಂದೇಶವಿದ್ದ ಚೀಟಿ ಕೊಟ್ಟನು. ಆಫೀಸಿಗೆ ಹೋಗಿ ಜಾಯಿನಿಂಗ್ ರಿಪೋರ್ಟ್ ಕೊಡಲು ಅವರು ತಿಳಿಸಿದ್ದರು. ಅವಳಿಗೆ ಸಿಟ್ಟು ಬಂದಿತು. ಹೊಸದಾಗಿ ಬಂದಾಕೆಯ ಮುಖ ಸಹ ನೋಡದೆ ಹೀಗೆ ಹೇಳಿ ಕಳಿಸುವುದೆ ? ಅಂಥದೇನು ಏಕಾಂತ ನಡೆದಿದ್ದೀತು ಇವರದು ? ಪ್ರಿನ್ಸಿಪಾಲರ ರೂಮಿನ ತೂಗುಬಾಗಿಲ ಸಂದಿಯಿಂದ ಅವಳಿಗೆ ಕಂಡದ್ದು ವರ್ಮಾಬಾಯಿಯ ದೊಡ್ಡ ತುರುಬು, ಗುಲಾಬಿ ಜಾರ್ಜೆಟ್ ಸೀರೆ. ಹೋಗಲಿ,ರಿಪೋರ್ಟ್ ಮಾಡಿಕೊಳ್ಳುವುದು ಎಷ್ಟು ಹೊತ್ತಿನ ಕೆಲಸ, ಆ ಮೇಲೆ ನೋಡೋಣ ಒಂದು ಕೈ, ಅಂತ ಅವಳು ಆಫೀಸಿನ ಕಡೆ ನಡೆದಳು.
* * *
ಆಕೆ ಸ್ಟಾಫ್ ರೂಮಿಗೆ ಹೋದಾಗ ಒಂದೆಡೆ ಬಹಳಷ್ಟು ಶಿಕ್ಷಕರು-ಶಿಕ್ಷಕಿಯರು ಗುಂಪಾಗಿ ಕೂಡಿದ್ದು ಕಾಣಿಸಿತು.ಕೆಲವರು ನಿಂತು, ಕೆಲವರು ಕೂತು, ಕೆಲವರು ಅರ್ಧಮರ್ಧ ಕೂತಹಾಗೆ ಬಾಗಿ, ತುಂಬ ಆಸಕ್ತಿಯಿಂದ ತುಂಬ ಕುತೂಹಲದಿಂದ, ಕೌತುಕದಿಂದ ಕೇಳುತ್ತಿದ್ದರು. ಯಾರದು ಇಷ್ಟೊಂದು ಜನರ ಲಕ್ಷ್ಯವನ್ನು ಹಿಡಿದಿಟ್ಟುಕೊಂಡು ಮಾತಾಡುವುದೆಂದು ಅವಳು ಬಾಗಿ ನೋಡಿದರೆ- ಓಹ್, ದೊಡ್ಡ ತುರುಬು,ಗುಲಾಬಿ ಜಾರ್ಜೆಟ್ ಸೀರೆ,ವರ್ಮಾಭಾಯಿಯ ಹಿಂಭಾಗ. ತುಂಬ ಸ್ಟೈಲಿಶ್ ಆದ ಇಂಗ್ಲೀಷ್‍ನಲ್ಲಿ ಅದೇನೇನೋ ಹೇಳುತ್ತಿದ್ದಳು. ಎಲ್ಲರೂ ನಕ್ಕೇ ನಕ್ಕರು. ನಕ್ಕೇ ನಕ್ಕರು. ಹೊಸದಾಗಿ ಬಂದಾಕೆಯ ಕಡೆಗೆ ಅವರು ಯಾರೂ ತಿರುಗಿ ಸಹ ನೋಡಲಿಲ್ಲ. * * *
ಒಂಬತ್ತನೆ ತರಗತಿಯ ಬಿ ಡಿವ್ಹಿಜನ್ನಿಗೆ ಆಕೆ ಹೋದಾಗ ತಟ್ಟನೆ ಎದ್ದು ನಿಂತ