ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಇನ್ನಷ್ಟು ಕತೆಗಳು/ ಸಮಾಧಾನ
೪೯೯


ಲಕ್ಷ್ಯ ಕೊಟ್ಟು ಕೇಳಿದಳು. ಹೌದು ತೀರಾ ಎದುರಿನ ಸಾಲಿನಿಂದ ಬಹಳ ಇಂಪಾದ ದನಿಯೊಂದು. ಪ್ರಾರ್ಥನೆಯ ಹಾಡಿನ ಒಂದೊಂದೇ ಸಾಲನ್ನು ಬಹಳ ಭಾವಪೂರಿತವಾಗಿ ಹೇಳುತ್ತಿತ್ತು. ಉಳಿದವರು ಅನುಸರಿಸುತ್ತಿದ್ದರು. ಆಕೆ ಕಾಲೆತ್ತರಿಸಿ ನೋಡಿದಳು- ಹಾಡುತ್ತಿರುವಾಕೆ ವರ್ಮಾಬಾಯಿ. ಇನ್ನೂ ಕಾಲೆತ್ತರಿಸಿ ನೋಡಿದಾಗ ಆಕೆಗೆ ವರ್ಮಾಬಾಯಿಯ ಮುಖ ಮೊದಲ ಬಾರಿ ಪೂರಾ ಕಾಣಿಸಿತು. ಆಕೆಗೆ ಒಮ್ಮೆಲೆ ಅಸ್ವಸ್ಥತೆಯೆನಿಸಿತು. ಈ ವರ್ಮಾಬಾಯಿಯ ಮುಖ ಇಷ್ಟು ಕೋಮಲವಾಗಿ, ಸುಂದರವಾಗಿ, ಆಕರ್ಷಕವಾಗಿ ಇರಲು ಹೇಗೆ ಸಾಧ್ಯ ? ಬಹುಶಃ ದೂರದಿಂದ ಮಾತ್ರ ಹೀಗೆ ಕಾಣುತ್ತಿರಬಹುದು. ಬಹುಶಃ ಅದು ಅತಿಯಾದ ಮೇಕಪ್‌ ಇರಬಹುದು. ಬಹುಶಃ ಬಿಸಿಲಿನಲ್ಲಿ ನಡೆದುಬಂದುದರಿಂದ ತನಗೇ ಕಣ್ಣು ಸರಿಯಾಗಿ ಕಾಣದಂತಾಗಿವೆಯೋ ಏನೋ. ಬಹುಶಃ...

* * *

“ಸರ್‌, ಇದು ನಾಳಿನ ಸ್ವಾತಂತ್ರ್ಯ ದಿನೋತ್ಸವದ ಪ್ರೋಗ್ರ್ಯಾಮಿನ ಡೀಟೇಲಾದ ಪ್ಲ್ಯಾನು. ನಾನು ಮೊದಲು ಇದ್ದೆನಲ್ಲ. ಆ ಸ್ಕೂಲಿನಲ್ಲಿ ಎಲ್ಲಾ ಎಕ್‌ಸ್ಟ್ರಾಕರಿಕ್ಕುಲರ್‌ ಅ್ಯಕ್ಟಿವ್ಹಿಟೀಜ್‌ನ ಪ್ಲ್ಯಾನೂ ನಾನೇ ಮಾಡುತ್ತಿದ್ದೆ. ಎಲ್ಲ ಕಾಂಪಿಟೇಶನ್ಸ್‌ದಲ್ಲೂ ನನ್ನ ಬ್ಯಾಚಗೇ ಫಸ್ಟ್‌ ಪ್ರೈಜ್‌ ಬರ್‍ತಿತ್ತು. ಇದು ನೋಡ್ರಿ ಸರಿಯಾಗಿದೆಯೆ ಅಂತ. ನೀವು ಹೇಳಿದರೆ ಟೀ ಪಾರ್ಟಿಯ ವ್ಯವಸ್ಥೆಯನ್ನೂ ನಾನು ನೋಡಿಕೊಳ್ಳುತ್ತೇನೆ" -ತುಂಬ ಸಿಂಗಾರಾಗಿ ಸ್ಕೂಲಿಗೆ ಬಂದಿದ್ದ ಆಕೆ ಬಂದೊಡನೆ ಪ್ರಿನ್ಸಿಪಾಲರನ್ನು ಅವರ ರೂಮಿನಲ್ಲಿ ಕಂಡು ಮಾತನಾಡಿದಳು. ಆತ ಫೈಲಿನಲ್ಲಿ ಮುಖವಿಟ್ಟುಕೊಂಡೇ ಹೇಳಿದರು. ""ನೀವು ಮಿಸೆಸ್‌ ವರ್ಮಾ ಅವರನ್ನು ಕನ್ಸಲ್ಟ್‌ ಮಾಡ್ರಿ. ಈ ವಿಷಯಗಳಲ್ಲೆಲ್ಲ ಅವರು ಎಕ್ಸ್‌ಪರ್ಟ್‌. ಅವರು ಹ್ಞೂ ಅಂದರೆ ಮುಗಿಯಿತು."

* * *

ಸ್ವಾತಂತ್ರ್ಯ ದಿನೋತ್ಸವದಂದು ಹುಡುಗಿಯರಿಂದ ಸ್ವಾಗತಗೀತೆ ಹಾಡಿಸಿದ್ದು, ಆಶುಭಾಷಣ ಸ್ಪರ್ಧೆ- ವಿವಿಧ ಕ್ರೀಡಾಸ್ಪರ್ಧೆಗಳನ್ನು ನಿರ್ವಹಿಸಿದ್ದು, ಶಿಕ್ಬಕರ ಟೀ ಪಾರ್ಟಿಯಲ್ಲಿ ಓಡಾಡಿದ್ದು -ಎಲ್ಲ ಮಿಸೆಸ್‌ ವರ್ಮಾ. ಅವಳ ಮುಖದಲ್ಲಿ ಸದಾ ನಗೆ. ನಗುವ ಹೆಂಗಸಿನ ಬಗ್ಗೆ ಅದೇನೋ ಗಾದೆಯಿದೆಯಲ್ಲಾ -ರಜನಿ ನೆನಪಿಸಿಕೊಳ್ಳಲು ಹೆಣಗಿದಳು. ಸಾಲದ್ದಕ್ಕೆ ಶಿಕ್ಬಕರಿಗಾಗಿ ನಡೆದ ಬ್ಯಾಡ್ಮಿಂಟನ್‌ ಮ್ಯಾಚಿನಲ್ಲಿ ರಜನಿಗೆ ಮಿಸೆಸ್‌ ವರ್ಮಾಳಿಂದ ಸೋಲು. ರಜನಿಯ ಬ್ಯಾಡ್ಮಿಂಟನ್‌ ಜೀವನದಲ್ಲಿ ಪ್ರಾಯಶಃ ಮೊದಲ ಸೋಲು.

“ಮಿಸೆಸ್‌ ವರ್ಮಾಗೆ ಈ ಸೀರೆ ಎಷ್ಟು ಒಪ್ಪುತ್ತದಲ್ರೀ ?"