ಪುಟ:ನಡೆದದ್ದೇ ದಾರಿ.pdf/೫೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ ?

೫೦೭

ಆಸ್ತಿಯ ಹಕ್ಕು ಕೊಡಿಸಿದ್ದಾಳೆ. ಅವರನ್ನು ಪೀಡಿಸುವ ಗಂಡಂದಿರನ್ನು ಅತ್ತೆ-
ಮಾವಂದಿರನ್ನು ಶಿಕ್ಸಿಸಿದ್ದಾಳೆ, ಪೀಡಕ ಪತಿಗಳಿಂದ ವಿಚ್ಛೇದನ ಕೊಡಿಸಿದ್ದಾಳೆ.
ಅಪ್ರಾಪ್ತ ವಯಸ್ಸಿನ ಮಕ್ಕಳ ಪಾಲನೆಯ ಅಧಿಕಾರ ಕೊಡಿಸಿದ್ದಾಳೆ. ಒಟ್ಟು
ಮಹಿಳೆಯರ ಪಾಲಿನ ನ್ಯಾಯದೇವತೆಯೇ ಆಗಿದ್ದಾಳೆ.

ರಾಮನಗರಕ್ಕೆ ಶ್ರೀಮತಿ ಯಶಸ್ವಿನಿ ದೇಸಾಯಿ ಸಿ. ಜೆ. ಎಮ್‌. ಎಂದು
ವರ್ಗವಾಗಿ ಬಂದಾಗಿನಿಂದ ಎಲ್ಲರೂ ಆಕೆಯ ಬಗ್ಗೆ ಪ್ರಶಂಸೆಯ
ಮಾತುಗಳನ್ನಾಡುತ್ತಿದ್ದಾರೆ. ಆಕೆಯನ್ನು ಕೌತುಕದಿಂದ ಆದರಿಸುತ್ತಿದ್ದಾರೆ.
ಕಾಲೇಜುಗಳಲ್ಲಿ, ಲಾಯನ್ಸ್‌-ರೋಟರಿ ಕ್ಲಬ್ಬುಗಳಲ್ಲಿ, ಸಾರ್ವಜನಿಕ, ಧಾರ್ಮಿಕ,
ರಾಜಕೀಯ ಸಂಘ-ಸಂಸ್ಥೆಗಳಲ್ಲಿ, ಎಲ್ಲಿಯೇ ಒಂದು ಮುಖ್ಯ ಸಮಾರಂಭ ನಡೆದರೂ
ಆಕೆಯೇ ಮುಖ್ಯ ಅತಿಥಿ. ಆಕೆಯೇ ಆಕರ್ಷಣೆಯ ಕೇಂದ್ರಬಿಂದು. ಎತ್ತರ ನಿಲುವಿನ,
ನಸುಗಪ್ಪು ಬಣ್ಣದ, ತೇಜಃಪುಂಜ ಕಣ್ಣುಗಳ, ಕಂಚಿನ ಕಂಠದ ಆಕೆ ವೇದಿಕೆಯ ಮೇಲೆ
ನಿಂತು ಮಾತಾಡುವುದನ್ನು ನೋಡುವುದೇ ಚೆಂದ, ಕೇಳುವುದೂ ಚೆಂದ.

ಆದರೆ ರಾಮನಗರದಲ್ಲಿ ಯಶಸ್ವಿನಿ ಸುಖಿಯಾಗಿಲ್ಲ. ಯಾಕೆಂದರೆ
ಮೊಟ್ಟಮೊದಲ ಬಾರಿಗೆ ಆಕೆ ತನ್ನ ಸಂಸಾರವನ್ನು ಬಿಟ್ಟು ದೂರದ ಊರಿಗೆ
ಬಂದಿದ್ದಾಳೆ. ಅನಿವಾರ್ಯವಾಗಿ ಇದ್ದಾಳೆ. ಮನೆಯ ನೆನಪು ಆಕೆಯನ್ನು ಸದಾ
ಕಾಡುತ್ತದೆ. ಯಶಸ್ವಿನಿ ಕಾನೂನು ಓದುತ್ತಿದ್ದಾಗ ತನ್ನ ಸಹಪಾಠಿಯಾಗಿದ್ದ
ಮನೋಹರ ದೇಸಾಯಿಯನ್ನು ಪ್ರೀತಿಸಿದಳು. ಆ ವಯಸ್ಸಿನ ಉಳಿದ ಹುಡುಗ-
ಹುಡುಗಿಯರ ಹಾಗೆ ಕ್ಯಾಂಪಸ್ಸಿನಲ್ಲಿದ್ದಾಗ ಪ್ರೀತಿಸಿ, ಓದು ಮುಗಿದ ನಂತರ
ಗುಡ್‌ಬಾಯ್‌ ಹೇಳಿ ಹೋಗುವ ಪ್ರೀತಿಯಾಗಿರಲಿಲ್ಲ ಅದು. ಸುಸಂಸ್ಕೃತನೂ,
ಸಭ್ಯನೂ, ತಿಳಿವಳಿಕೆಯುಳ್ಳವನೂ ಆಗಿದ್ದ ಮನೋಹರನನ್ನು ಆಕೆ ಎಲ್ಲ ರೀತಿಯಿಂದ
ಪರೀಕ್ಷಿಸಿ, ಮೆಚ್ಚಿ ಮದುವೆಯಾದಳು. ಮದುವೆಯ ನಂತರ ಇಬ್ಬರೂ ಜೊತೆಯಾಗಿ
ಬೆಂಗಳೂರಿನಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. ಯಶಸ್ವಿನಿ ಐದಾರು ವರ್ಷಗಳಲ್ಲಿ
ಮ್ಯಾಜಿಸ್ಟ್ರೇಟ್‌ ಆಗಿ ಆಯ್ಕೆಯಾಗಿ ನೌಕರಿ ಸುರು ಮಾಡಿದಳು. ಮನೋಹರ ಮಾತ್ರ
ವಕೀಲನಾಗಿಯೇ ಮುಂದುವರೆದ. ಎರಡು ಮಕ್ಕಳು- ಮಗಳು ಕೀರ್ತಿ
ಇಂಜಿನಿಯರಿಂಗ್‌ ಎರಡನೆಯ ವರ್ಷದಲ್ಲಿದ್ದಳು. ಮಗ ಕಿರಣ ಇನ್ನೂ
ಹಾಯ್‌ಸ್ಕೂಲಿನಲ್ಲಿದ್ದ. ಮನೋಹರನ ತಾಯಿ ಗಟ್ಟಿಮುಟ್ಟಾಗಿದ್ದರು.
ಮನೆವಾರ್ತೆಯಲ್ಲಿ ತುಂಬ ಸಹಾಯ ಮಾಡುತ್ತಿದ್ದರು. ನೌಕರಿ ಮಾಡತೊಡಗಿ