ಯಶಸ್ವಿನಿ ಎದ್ದು ಮಲಗುವ ಕೋಣೆಗೆ ಹೋಗಿ ಅಡ್ಡಾ ದಳು. ಆಕೆಯ ಕಣ್ಣುಗಳು
ಕೂಡಲೇ ಮುಚ್ಚಿಕೊಂಡವು.
ರಾತ್ರಿ ಅದೆಷ್ಟೋ ಹೊತ್ತಿನಲ್ಲಿ ಅತ್ತೆ ಆಕೆಯನ್ನು ಎಬ್ಬಿಸಿದರು. "ಏಳಮ್ಮಾ.
ಊಟ ಮಾಡು, ಮಕ್ಕಳು ಊಟ ಮಾಡಿ ಮಲಗಿಬಿಟ್ಟರು. ಮನು ಬರೋದು ಬಹಳ
ತಡವಾದೀತು, ಇಂದು ರವಿವಾರವಲ್ಲವೆ, ಅವನಿಗೂ ಇದೊಂದೇ ದಿನ ಸಿಗೋದು.
ನೀನು ಉಂಡು ಮುಗಿಸಿ ವಿಶ್ರಾಂತಿ ತಗೋ. ಕೀರ್ತಿ ಪಿಕ್‌ನಿಕ್‌ನಿಂದ ದಣಿದು ಬಂದು,
ಊಟ ಮಾಡಿ ಮಲಗಿಯೇ ಬಿಟ್ಟಳು. ಕಿರಣ ಪಾಪ, ಆಡುವಾಗ ಕಾಲು ಉಳುಕಿತಂತೆ,
ಎಣ್ಣೆ ಹಚ್ಚಿ ತಿಕ್ಕಿದ್ದೇನೆ, ಸಾಕಾಗಿದೆ ಅಂತ ಮಲಗಿದ್ದಾನೆ. ನೀನು ಏಳಮ್ಮಾ...."
ಎಲ್ಲೋ ಏನೋ ತಪ್ಪುತ್ತಿದೆ ಅನಿಸಿತು ಯಶಸ್ವಿನಿಗೆ. ಆಕೆ ಎದ್ದು ಮುಖ
ತೊಳೆದು, ಮಲಗಿದ್ದ ಮಕ್ಕಳಿಬ್ಬರನ್ನೂ ಕಣ್ಣುತುಂಬ ನೋಡಿ, ಅವರ ಹಣೆಗಳನ್ನು
ಮೃದುವಾಗಿ ಮುದ್ದಿಸಿ, ಊಟ ಮಾಡಿ, ಮತ್ತೆ ಮಲಗಿದಳು. ನಾಳೆಯಿಂದ
ನಿಧಾನವಾಗಿ ಎಲ್ಲವನ್ನೂ ಕೈಗೆ ತೆಗೆದುಕೊಳ್ಳೋಣವೆಂದು ಯೋಚಿಸಿ
ಸಮಾಧಾನಪಟ್ಟುಕೊಂಡಳು. ಮಧ್ಯ ರಾತ್ರಿ ದಾಟಿದ ನಂತರ ಮನೆಗೆ ಬಂದು, ತಾಯಿ
ಬಡಿಸಿದ ಊಟ ಮಡಾಡಿ ಹಾಸಿಗೆಗೆ ಬಂದು ಮಾತೇ ಆಡದೆ ಬಿಗಿದಪ್ಟಿದ
ಮನೋಹರನಿಗೆ, ನಿದ್ದೆ ಕೆಟ್ಟಿದ್ದಕ್ಕೆ ಸಿಟ್ಟು ಬಂದರೂ ಹೇಳದೆ, ಸಹಕಾರ ನೀಡಿದಳು.
ಮರುದಿನ ಮುಂಜಾನೆ ಯಶಸ್ವಿನಿ ಎಲ್ಲರಿಗಿಂತ ಮುಂಚಿತವಾಗಿ ಎದ್ದಳು.
ಬೇಗನೆ ಕಾಲೇಜಿಗೆ ಹೋಗಲಿರುವ ಮಗಳಿಗಾಗಿ ಅವಳಿಗಿಷ್ಟವಾದ ಮಸಾಲೆ ಉಪ್ಪಿಟ್ಟು
ಮಾಡಿದಳು. ತಿನ್ನುತ್ತ ಕೂತ ಮಗಳನ್ನೆ ನೋಡುತ್ತ ನಿಂತಳು. ಅಮ್ಮಾ, ಇವತ್ತಿನ ತಿಂಡಿ
ಎಕ್ಸಲೆಂಟ್ ಆಗಿದೆ. ಎಷ್ಟೋ ದಿನ ಆಗಿತ್ತು ಇಂಥ ಉಪ್ಪಿಟ್ಟು ತಿಂದು, ಯು ಆರ್
ಗ್ರೇಟ್ ಮಮಾ, ಅಂತ ಕೀರ್ತಿ ಆನ್ನುತ್ತಾಳೆಂದು ನಿರೀಕ್ಷಿಸಿದಳು.
ಇಲ್ಲ. ಬದಲಿಗೆ, ಏನು ಮಮಾ, ಉಪ್ಪಿಟ್ಟು ಮಾಡಿದ್ದೀ, ಈಗೆಲ್ಲ ಇದನ್ನು
ಯಾರೂ ಇಷ್ಟಪಡೋದಿಲ್ಲ. ನೂಡಲ್ಸ್ ಮಾಡಲು ಹೇಳಿದ್ದೆ ನಾನು ಅಜ್ಜಿಗೆ-
ಅಂದಳು. ಮಗಳು ದೊಡ್ಡವಳಾಗಿದ್ದಾಳೆ. ಅವಳ ಇಷ್ಟಾನಿಷ್ಟಗಳೂ ಬದಲಾಗಿವೆ.
ತಾನೇ ಹೊಂದಿಕೊಳ್ಳಬೇಕು.
ಸ್ಕೂಲಿಗೆ ಹೊರಟ ಮಗ ಕಿರಣ ಎಷ್ಟು ಎತ್ತರವಾಗಿದ್ದಾನೆ. ಎಷ್ಟು ಸ್ಮಾರ್ಟ್
ಆಗಿದ್ದಾನೆ. ತಾನು ಮೊದಲ ಸಲ ನೋಡಿದಾಗ ಮನೋಹರನೂ ಹೀಗೆಯೇ ಇದ್ದ.
ಪ್ರೀತಿಯಿಂದ ಯಶಸ್ವಿನಿ ಮಗನ ಮುಖವನ್ನು ಬೊಗಸೆಯಲ್ಲಿ ಹಿಡಿದು ಹಣೆಗೊಂದು
ಮುತ್ತನ್ನಿತ್ತಳು. ಆತ ಕೊಸರಿಕೊಂಡು ಥೂ, ಬಿಡು ಮಮಾ, ನನ್ನ ಹೇರ್ ಸ್ಟಾಯಿಲ್
ಕೆಡಿಸಿಬಿಟ್ಟಿ ಅಂತ ಓಡಿ ಹೋದ.