ಪುಟ:ನಡೆದದ್ದೇ ದಾರಿ.pdf/೫೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೧೨ ನಡೆದದ್ದೇ ದಾರಿ

ಅಡಿಗೆಮನೆಗೆ ಬಂದು ಅತ್ತೆ, ಇಂದಿನಿಂದ ನಿಮಗೆ ರೆಸ್ಟ್‌, ನಾನು ಇರುವ
ವರೆಗೂ ಅಡಿಗೆಮನೆ ಚಾರ್ಜು ನನ್ನದೇ, ಅಂತ ಹೇಳಿ ಸೆರಗು ಸಿಕ್ಕಿಸಿ ಕೆಲಸ ಸುರು
ಮಾಡಿದಳು. ನಿನ್ನೆಯೇ ಬಂದಿದ್ದೀ, ನೀನೇ ರೆಸ್ಟ್‌ ತಗೋ, ನಾನೆಲ್ಲ ನೋಡಿಕೊಳ್ತೀನಿ,
ಅಂತ ಅತ್ತೆ ಅಂದರು. ಒತ್ತಾಯಿಸಿದರೂ ಅವರು ಅಡಿಗೆಮನೆಯಿಂದ ಆಚೆಗೆ
ಹೋಗದಿದ್ದಾಗ ಯಶಸ್ವಿನಿ ನಗುತ್ತಲೇ ಬಲವಂತವಾಗಿ ಅವರನ್ನು ಕೈಹಿಡಿದು ಎಳೆದು
ತಂದು ಹಾಲ್‌ನಲ್ಲಿ ಸೋಫಾದ ಮೇಲೆ ಕೂಡ್ರಿಸಿದಳು. ಆಗ ಬಿಟ್ಟುಬಿಟ್ಟು ಅತ್ತೆ
ಮಾತಾಡಿದರು. ಮನೂ ಊಟದ ಬಗ್ಗೆ ಬಹಳ ಪರ್ಟಿಕ್ಯುಲರ್‌ ಇದ್ದಾನೆ. ಇಂತಹ
ಪದಾರ್ಥ ಹೀಗೆಯೇ ಆಗಬೇಕೆಂದು ಅವನ ಹಟ, ಹೆಚ್ಚು -ಕಡಿಮೆ ಆದರೆ ಊಟ
ಬಿಟ್ಟೇಳುತ್ತಾನೆ. ಇತ್ಯಾದಿ. ಇತ್ಯಾದಿ. ಬಹಿರಂಗವಾಗಿ ಯಶಸ್ವಿನಿ ಏನೂ ಹೇಳಲಿಲ್ಲ.
ಮನಸ್ಸಿನಲ್ಲಿ ಮಾತ್ರ ಅಂದುಕೊಂಡಳು, ಎಲಾ ಮುದುಕಿ, ಏಳೆಂಟು ತಿಂಗಳು ನಾನು
ದೂರವಾಗಿದ್ದ ಮಾತ್ರಕ್ಕೆ ನನ್ನ ಗಂಡನಿಗೇ ಪರಕೀಯಳಾಗುವೆನೆ ? ನನ್ನ ಕೈಯಡಿಗೆಗಿಂತ
ಹೆಚ್ಚು ಪ್ರಿಯವಾದುದು ಅವನಿಗೇನಿದ್ದೀತು ? ಆಗಲಿ, ನೋಡಿಯೇ ಬಿಡೋಣ.

ಆದರೆ ಮಧ್ಯಾಹ್ನ ಊಟಕ್ಕೆ ಕೂತಾಗ ಮನೋಹರ ತುತ್ತಿಗೊಮ್ಮೆ ಛೇ, ಏನಿದು
ಪಲ್ಯ ಇಷ್ಟು ಖಾರ, ಸಾರಿಗೆ ನೀರು ಜಾಸ್ತಿ. ಚಟ್ನಿಗೆ ಒಂಥರಾ ಟೇಸ್ಟ್‌ ಇದೆ. ಅಂತೆಲ್ಲ
ಮುಖ ಸಿಂಡರಿಸಿದಾಗ ಆಕೆಗೆ ನಿಜವಾಗಿ ಚಿಂತೆಯಾಯಿತು. ಇವತ್ತು ನಿನ್ನ ಹೆಂಡತಿ
ಅಡಿಗೆ ಮಾಡಿದ್ದು ಮಾರಾಯಾ, ಅಂತ ಅತ್ತೆ ನಕ್ಕು ಹೇಳಿದಾಗ ಆತ ಒಮ್ಮೆಲೆ
ಸುಮ್ಮನಾಗಿದ್ದ.

ಯಶಸ್ವಿನಿ ಮನೆಗೆ ಬಂದು ಒಂದು ವಾರ ಕಳೆದಿತ್ತು. ಯಾವುದೂ
ಬದಲಾಗಿರಲಿಲ್ಲ. ಮಗಳು ತನ್ನದೇ ಜಗತ್ತಿನಲ್ಲಿದ್ದಳು. ಅಜ್ಜೀ, ಹಸಿವೆಯಾಗಿದೆ,
ಅಜ್ಜೀ ಟೀ ಕೊಡು, ಅಜ್ಜೀ ಜಡೆ ಹಾಕು ಬಾ. ಅಜ್ಜೀ ಟಿಫಿನ್‌ ಬಾಕ್ಸ್‌ ರೆಡಿ ಆಯಿತೇ,
ಅಂತ ಹತ್ತು ಸಲ ಅಜ್ಜಿಯನ್ನೇ ಕೂಗುತ್ತಿದ್ದಳು. ಒಂದೆರಡು ಸಲ ಮಾತ್ರ
ಯಶಸ್ವಿನಿಯ ಬಳಿ ಬಂದು ಅಮ್ಮಾ. ಸೌಥ್‌ ಇಂಡಿಯಾ ಇಂಡಸ್ಟ್ರಿ ಯಲ್‌ ಟೂರ್‌ಗೆ
ಹೋಗಬೇಕು, ಐದು ಸಾವಿರ ಆಗುತ್ತದೆ, ಮೇಲೆ ಶಾಪಿಂಗ್‌ಗೆ ಒಂದೈದು ಸಾವಿರ,
ಒಟ್ಟು ಹತ್ತು ಸಾವಿರಕ್ಕೆ ಚೆಕ್‌ ಕೊಟ್ಟು ಬಿಡ್ತೀಯಾ, ಅಂತ ಕೇಳಿ ಇಸಗೊಂಡಿದ್ದಳು.
ಗ್ಯಾದರಿಂಗ್‌ ಇದೆ, ಹೊಸ ಡ್ರೆಸ್‌ ತಗೋ ಬೇಕು. ಒಂದಿಷ್ಟು ದುಡ್ಡು ಕೊಟ್ಟಿರು
ಮಮಾ, ಅಂದಿದ್ದಳು.

ಯಶಸ್ವಿನಿಗೆ ಕಿರಣನ ಮೇಲೆ ವಿಶೇಷ ಪ್ರೀತಿ. ಗಂಡು ಮಗ ಆಂತ ಅಲ್ಲ, ಆತ
ಚಿಕ್ಕಮಗುವಾಗಿದ್ದಾಗಿನಿಂದಲೂ ಸದಾ ಅಮ್ಮನಿಗೆ ಅಂಟಿಕೊಂಡೇ
ಇರುತ್ತಿದ್ದುದರಿಂದಾಗಿ ಇರಬೇಕು. ಈಗ ದೊಡ್ಡವನಾಗಿದ್ದಾನೆ. ತಾನು ರಾಮನಗರಕ್ಕೆ