೫೧೪ ನಡೆದದ್ದೇ ದಾರಿ
೫
ಏನಂದೆ ಯಶೂ, ನಿನಗೆ ತಲೆ ಕೆಟ್ಟಿದೆಯೇ ? ರಿಟಾಯರ್‌ಮೆಂಟ್
ತಗೊಳ್ಳುತ್ತೀಯಾ ? ಆರ್ ಯೂ ಜೋಕಿಂಗ್ ? ಇಂತಹ ಒಳ್ಳೇ ಕೆಲಸ, ಎಷ್ಟು
ಮರ್ಯಾದೆ, ಎಂತಹ ಅಂತಸ್ತು, ಏನೆಲ್ಲಾ ಸೌಲಭ್ಯಗಳು. ನಿನ್ನ ನೌಕರಿ
ರಾಮನಗರದಲ್ಲಿದ್ದರೂ ನಿನ್ನ ಕಡೆ ಕೇಸು ಇದ್ದವರು ಬೆಂಗಳೂರಿನ ಈ ನಮ್ಮ ಮನೆಗೆ
ಏನೆಲ್ಲ ಸಾಮಾನು ತಂದುಕೊಡುತ್ತಾರೆ. ಅಲ್ಲ, ಸಿಟ್ಟಾಗಬೇಡ, ಅವರು ಪ್ರೀತಿಯಿಂದ
ಕೊಟ್ಟದ್ದು ನಾವು ತಗೊಂಡರೇನು ತಪ್ಪು ? ಬೇಡವೆ ? ಸರಿ, ಆಗಲಿ, ಇನ್ನು ಮುಂದೆ
ತಗೊಳ್ಳುವುದಿಲ್ಲ. ಆದರೆ ರಿಟಾಯರ್‌ಮೆಂಟ್ ತಗೊಳ್ಳೋ ವಿಚಾರ ಮಾತ್ರ
ಮೂರ್ಖತನದ್ದು. ಅದು ಸಾಧ್ಯವಿಲ್ಲ.
ಅಲ್ಲ ಯಶೂ, ಸ್ವಲ್ಪ ವಿಚಾರ ಮಾಡು. ನೀನು ಇಲ್ಲಿದ್ದಾಗ ಸೈಟು ಅಲಾಟ್
ಆಗಿತ್ತಲ್ಲ, ಅಲ್ಲಿ ಮನೆ ಕಟ್ಟಿಸಲು ಹೌಸಿಂಗ್ ಲೋನ್‌ಗೆ ಅರ್ಜಿ ಹಾಕಿದ್ದೇನೆ. ನಿನ್ನ
ಹೆಸರಿನಲ್ಲೇ ಬೇಗ ಸಿಗುತ್ತದೆ ಅಂತ. ಈಗ ಸ್ಯಾಂಕ್ಶನ್ ಆಗಿದೆ. ಹತ್ತು ಲಕ್ಡ. ಮನೆ
ಕಟ್ಟಿಸಬೇಕು. ಸಾಲವನ್ನೂ ತೀರಿಸಬೇಕಲ್ಲ. ನೀನೇ ನೋಡುತ್ತಿದ್ದೀ, ನಮ್ಮ ಕಾರು
ಹಳೆಯದಾಗಿದೆ. ಹೊಸ ಮಾಡೆಲ್ ಇಂಡಿಕಾ ಬೇಕು ಅಂದಳು ಕೀರ್ತಿ, ಬೇಡ ಟಾಟಾ
ಎಸ್ಟೀಮ್ ಇರಲಿ ಅಂದ ಕಿರಣ. ಆಗಲಿ, ಕಿರಣ ನಿನ್ನ ಪ್ರೀತಿಯ ಮಗನಲ್ಲವೇ,
ಅವನಿಷ್ಟದಂತೆಯೇ ಆಗಲಿ, ಅಂತ ಎಸ್ಟೀಮ ಬುಕ್ ಮಾಡಿದ್ದೇನೆ. ಮುಂದಿನ ವಾರವೇ
ಬರುತ್ತದೆ. ಹಾ, ನಿನ್ನ ರಜೆ ಇನ್ನೂ ಮುಗಿದಿರುವುದಿಲ್ಲ. ಹೊಸ ಕಾರು ನಿನ್ನಿಂದಲೇ
ಓಪನಿಂಗ್ ಆಗಬೇಕಲ್ಲ.
ಮತ್ತೆ ನಿನಗೆ ಗೊತ್ತೇ ಇದೆ. ತಂಗಿಯ ಲಗ್ನಕ್ಕೆ ಮಾಡಿದ ಸಾಲ ಇನ್ನೂ ಇದೆ.
ಈಗೇನೋ ಆಕೆ ಹೆರಿಗೆಗೆ ಬರುತ್ತಾಳೆ ಅನ್ನುತ್ತಿದ್ದಳು ಅಮ್ಮ. ಆಕೆಯ ಮಗುವಿಗೂ
ಬಂಗಾರ-ಸಿಂಗಾರ ಅಂತ ಕೊಡಬೇಕಲ್ಲ. ನಮ್ಮ ಪ್ರೆಸ್ಟೀಜ್ ಪ್ರಶ್ನೆ.
ನೀನು ಇಮೋಶನಲ್ ಆಗಬೇಡ ಯಶೂ, ಪ್ರ್ಯಾಕ್ಟಿಕಲ್ ಆಗಿ ವಿಚಾರ ಮಾಡು.
ಮನೆ ಬಿಟ್ಟು ಸ್ವಲ್ಪ ದೂರ ಇದ್ದದ್ದಕ್ಕೆ ಇಷ್ಟು ಬೇಜಾರು ಮಾಡಿಕೊಂಡರೆ ಹೇಗೆ ?
ದೂರವಾದರೂ ಎಂತಹ ದೂರ ? ಒಂದು ದಿನದ ಪ್ರವಾಸ. ನೀನು ಬಾ ಅಂದ ಕೂಡಲೆ
ನಾನು ಹಾರಿ ಬರುವೆ ನಿನ್ನ ಹತ್ತಿರ. ಎಷ್ಟೋ ಹೆಣ್ಣುಮಕ್ಕಳು ಈಗ ವರ್ಷಾನುಗಟ್ಟಲೆ
ಪರದೇಶಗಳಿಗೂ ಹೋಗುತ್ತಾರೆ. ನೌಕರಿಗಾಗಿ ನಾಲ್ಕಾರು ವರ್ಷ ನೀನು ಮನೆ ಬಿಟ್ಟು
ಪರಊರಿಗೆ ಹೋದರೇನಂತೆ ? ನೀನಂತೂ ಬಹಳ ಸೋಶಿಯಲ್ ಇದ್ದೀಯಾ.
ಹೋದಲ್ಲೆಲ್ಲ ನಿನಗೆ ಫ್ರೆಂಡ್ಸ್ ಆಗುತ್ತಾರೆ, ಆ-ಈ ಕಾರ್ಯಕ್ರಮ ಅಂತ ಇರುತ್ತವೆ.
ಹೇಗೋ ಟೈಮು ಕಳೆಯುತ್ತದೆ. ನೀನು ಹೇಗಾದರೂ ಅಡ್ಜಸ್ಟ್ ಮಾಡಿಕೊಳ್ಳಲು
ಕಲಿತುಕೋ.