೫೧೬ ನಡೆದದ್ದೇ ದಾರಿ
ಒಂದು ಗಿಡ, ಒಂದು ಬಾವಿ
ನಿನಗೆ ನೆನಪಿದೆಯೆ, ಐವತ್ತು ವರ್ಷಗಳ ಹಿಂದೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದ
ದಿನ? ಊರಲ್ಲಿನ ಪಟಾಕಿ ಸುಡುವ ಸಂಭ್ರಮ, ಸಿಹಿ ಹಂಚುವ ಹುರುಪು, ಪರಸ್ಪರ
ಅಭಿನಂದಿಸಿಕೊಳ್ಳುವ ಆನಂದ, ಆ ಎಲ್ಲ ಗದ್ದಲ ಇಲ್ಲಿಯ ವರೆಗೂ ಕೇಳಿ ಬರುತ್ತಿತ್ತು.
ನಾನು ಕಿವಿ ನಿಮಿರಿಸಿ ಕೇಳಿ ಸಂತೋಷ ಪಡುತ್ತಾ ಇದ್ದೆ. ಕೆಲ ದಿನಗಳ ಹಿಂದೆಯಷ್ಟೆ
ಊರಲ್ಲಿ ಸ್ವಾತಂತ್ರ್ಯಕ್ಕಾಗಿ ಚಳುವಳಿ ನಡೆದಿತ್ತು. ನಾಯಕರು ಬರುತ್ತಿದ್ದರು. ಭಾಷಣ
ಮಾಡುತ್ತಿದ್ದರು. ಕಡಪಾ ಮೈದಾನದಲ್ಲಿ ಮಾಡಿದ ಭಾಷಣಗಳು ಧ್ವನಿ ವರ್ಧಕದ
ಮೂಲಕ ಊರಾಚೆಯ ಈ ಪ್ರದೇಶದ ವರೆಗೂ ಕೇಳಿ ಬಂದು, ನನ್ನ ಕಲ್ಲುಗಳಲ್ಲೂ
ಸ್ಫೂರ್ತಿ ಉಕ್ಕಿಸುತ್ತಿದ್ದಪು. ರಾಷ್ಟ್ರಪಿತ ಈ ಊರಿಗೆ ಭೇಟಿ ನೀಡಿದ ನೆನಪಿಗಾಗಿಯೇ
ಊರಿನಿಂದ ದೂರವಿರುವ ಈ ಪ್ರದೇಶದ ಜನರಿಗೆ ಅನುಕೂಲವಾಗಲೆಂದು ನನ್ನನ್ನು
ನಿಯಮಿಸಿದರು. ನನ್ನ ಸುತ್ತೆಲ್ಲ ಹಸಿರು. ಅಲ್ಲೊಂದು ಇಲ್ಲೊಂದು ಕೆಂಪು ಹಂಚಿನ
ಮನೆಗಳು. ನಡುವೆ ಕೆಂಪು ಮಣ್ಣಿನ ಕಾಲುದಾರಿ. ಇಂಥ ನಾಲ್ಕು ತೆಳುವಾದ ದಾರಿಗಳು
ನನ್ನೆದುರೇ ಕೂಡುತ್ತಿದ್ದವು. ಈ ಕೂಟದ ಆಚೆ ಬದಿಗೆ ನಿನ್ನನ್ನು ತಂದು ನೆಟ್ಟರು, ಅಂದು
ನಮ್ಮ ದೇಶ ಸ್ವತಂತ್ರವಾದ ದಿನ. ನೀನು ಪುಟ್ಟದಾಗಿ, ಮಾಟವಾಗಿ ಗೇಣುದ್ದ ಮಾತ್ರ
ಇದ್ದೆ. ಎಷ್ಟು ನಾಜೂಕಾಗಿದ್ದೆ. ಈಚೆ ಬದಿಯಿಂದ ನಾನು ನಿನ್ನನ್ನು ನೋಡುತ್ತಲೇ
ಇದ್ದೆ. ನೀನೋ ಎರಡು ದಿನ ತಗ್ಗಿಸಿದ ತಲೆಯನ್ನು ಎತ್ತಿರಲೇ ಇಲ್ಲ. ನಿನ್ನನ್ನು
ಮಾತಾಡಿಸಲು ನಾನೆಷ್ಟೋ ಬಾರಿ ಪ್ರಯತ್ನಿಸಿದೆ. ಕೂಗಿ ಕರೆದೆ. ಸಿಳ್ಳು ಹಾಕಿದೆ.
ಊಹ್ಞೂ. ನಂತರ ಆ ರಾತ್ರಿ ಮಳೆ ಸುರಿಯಿತು. ಅಬ್ಬ, ಐವತ್ತು ವರ್ಷಗಳ ಹಿಂದಿನ
ಧಾರವಾಡದ ಮಳೆ ಹೇಗಿರುತ್ತಿತ್ತೆಂದು ನಿನಗೆ ನೆನಪಿರಬೇಕು. ನೆಲವನ್ನೂ,
ನೆಲದಾಳವನ್ನೂ ಮನವನ್ನೂ ಮನದಾಳವನ್ನೂ ತೋಯಿಸಿ ತಂಪುಗೊಳಿಸುತ್ತಿದ್ದ
ಜೀವದಾಯಿನಿಯಾಗಿದ್ದ ಚೈತನ್ಯದಾಯಿನಿಯಾಗಿದ್ದ ಮಳೆ. ನನ್ನ ಮೈ-ಮನಸ್ಸು
ಅಕ್ಷರಶಃ ತುಂಬಿಬಂದವು. ಮುಂಜಾನೆ ನಸುಕಿನಲ್ಲೆದ್ದು ನೋಡಿದೆ, ಮೊದಲ ಬಾರಿಗೆ
ನೀನು ತಲೆಯೆತ್ತಿ ನಗುತ್ತ ನಿಂತಿದ್ದೆ. ನನಗೆಷ್ಟು ಖುಶಿಯಾಯಿತು ಗೊತ್ತೆ ?
ಹಾಗೆ ಸುರುವಾಗಿದ್ದ ನಮ್ಮಿಬ್ಬರ ಗೆಳೆತನದ ಪ್ರಾರಂಭದ ಆ ದಿನಗಳು ಬಹಳ