೫೧೮ ನಡೆದದ್ದೇ ದಾರಿ
ಹಾಳಾಗಿದ್ದಾರೆ, ಮುದುಕರನ್ನು ಕೇಳುವುದಿಲ್ಲ, ಗೌರವಿಸುವುದಿಲ್ಲ, ಕರ್ನಾಟಕ
ಏಕೀಕರಣವಾಗಿದೆ, ಇನ್ನು ಕನ್ನಡ ಭಾಷೆ ಅಭಿವೃದ್ಧಿ ಹೊಂದುವುದು, ಧಾರವಾಡದಲ್ಲಿ
ಮೊದಲಿನಷ್ಟು ಮಳೆಯಾಗುವುದಿಲ್ಲ, ಹಸಿರೂ ಕಡಿಮೆಯಾಗಿದೆ, ಲೈನಬಜಾರಿನ
ಪೇಢೆಗೆ ಮೊದಲಿನ ರುಚಿ ಇಲ್ಲ. ಹೀಗೆಯೇ ನೂರೊಂದು ಸುದ್ದಿಗಳು...
ನಿನ್ನ ನೆರಳಲ್ಲೊಂದು ಸಿಮೆಂಟಿನ ಬೆಂಚು. ಅಲ್ಲಿ ಯೂನಿವ್ಜರ್ಸಿಟಿಗೆ ಹೋಗುವ
ಬಸ್ಸಿನ ಸ್ಟಾಪ್ ಮಾಡಿದ್ದರು. ಬಸ್ಸಿಗೆ ಕಾಯುವವರೆಲ್ಲ ಆ ಬೆಂಚಿನ ಮೇಲೆ ಮತ್ತು
ಸುತ್ತ-ಮುತ್ತ ಕೂತು-ನಿಂತು ಹೊತ್ತು ಕಳೆಯುವರು. ಅದೆಷ್ಟೋ ಹುಡುಗ-
ಹುಡುಗಿಯರಿಗೆ ಇದೇ ಮೀಟಿಂಗ್ ಪ್ಲೇಸ್ ಎಂಬ ಗುಟ್ಟು ತಿಳಿದ ನಾನೂ ನೀನೂ
ಮರೆಯಲ್ಲೇ ನಗುತ್ತಿದ್ದೆವು. ಬಸ್ಸುಗಳು ಸಾಲಾಗಿ ಬಂದು ಹೋದರೂ ಕೆಲವರು
ಬಸ್‌ಸ್ಟಾಪ್‌ನಲ್ಲೇ ಉಳಿದುಕೊಳ್ಳುವರು. ಬಸ್ ಹೋದ ನಂತರ ಮತ್ತೆ
ಪಿಸುದನಿಯಲ್ಲಿ ಮಾತಾಡಿಕೊಳ್ಳುತ್ತ ನಿಲ್ಲುವರು. ಕೊನೆಗೆ ಒಂದೇ ಬಸ್ಸು ಹತ್ತಿ
ಹೋಗುವರು. ಸಂಜೆ ಮತ್ತೆ ಅದೇ ಸ್ಟಾಪ್‌ನಲ್ಲಿಳಿದು ಕತ್ತಲಾಗುವ ವರೆಗೂ
ನಿಲ್ಲುವರು. ಅವರ ಕಣ್ಣುಗಳಲ್ಲಿನ ಮಿಂಚು, ಹೃದಯಗಳ ಬಡಿತ, ಮನಸ್ಸುಗಳ
ಮಿಡಿತ, ಎಲ್ಲವೂ ನೋಡಲು ಚೆನ್ನ. ಇವರಲ್ಲದೇ ಸಂಜೆಯ ಹೊತ್ತು ಕೆಲವರು
ವಯಸ್ಸಾದ ದಂಪತಿಗಳೂ ಬಂದು ಈ ಬೆಂಚೆನ ಮೇಲೆ ಕೂಡುವರು. ಅವರಲ್ಲಿ
ಒಂದು ಜೊತೆ ಸಾಹಿತ್ಯಪ್ರೇಮಿಗಳು. ಬೇಂದ್ರೆಯವರ ಕಾವ್ಯದ ಬಗ್ಗೆ, ಶಂಬಾ ಅವರ
ಸಿದ್ಧಾ ೦ತಗಳ ಬಗ್ಗೆ ಚರ್ಚಿಸುವರು. ಇನ್ನೊಬ್ಬಾತ ಬರೀ ಪೇ ಸ್ಕೇಲ್ ಬಗ್ಗೆ, ಬೋನಸ್-
ಇನ್‌ಕ್ರಿಮೆಂಟ್ ಬಗ್ಗೆ ಮಾತಾಡಿ-ಮಾತಾಡಿ ಬೋರ್ ಮಾಡುತ್ತಿದ್ದ. ಒಬ್ಬಾಕೆ
ವಯಸ್ಸಾದ ಮುತ್ತೈದೆ ಸದಾ ತನ್ನ ಪೆದ್ದು ಗಂಡನ ಮೇಲೆ ಹರಿಹಾಯುವಳು. ಹೀಗೆ
ನಿಂತಲ್ಲೇ ಜೀವನದ ಹತ್ತು ಹಲವು ಮುಖಗಳ ಪರಿಚಯ ನಮಗಾಗುತ್ತಿತ್ತು.
ಈಚೆಗೆ ಇಲ್ಲಿ ಸುತ್ತಲೂ ಬಹಳ ಅಂಗಡಿಗಳು ತಲೆಯೇಳತೊಡಗಿದ್ದವು.
ಮೊದಲು ಏನು ಬೇಕಾದರೂ ಪೇಟೆಗೇ ಹೋಗಬೇಕಿತ್ತು. ಈಗ ಇಲ್ಲೇ ಕಾಯಿಪಲ್ಲೆ,
ಹಾಲು, ಕಿರಾಣಿ ಸಾಮಾನು ಎಲ್ಲ ಸಿಗುವುದು. ಓಡಾಡುವ ಜನರೂ ದಿನದಿಂದ ದಿನಕ್ಕೆ
ಹೆಚ್ಚಾಗುತ್ತಲೇ ಇದ್ದಾರೆ. ಇಡೀ ದಿನ ಎಲ್ಲರಿಗೂ ಗಡಿಬಿಡಿ, ಅದೇನೋ ಅವಸರ,
ಎಲ್ಲರೂ ಯಾವಾಗಲೂ ಎಲ್ಲಿಯೋ ಧಾವಿಸುತ್ತಲೇ ಇರುತ್ತಾರೆ. ಹಾಯಾಗಿ
ಮೆಲುದನಿಯಲ್ಲಿ ಮಾತಾಡಿಕೊಂಡು ಜನರು ವಿರಾಮವಾಗಿ ನಡೆದುಹೋಗುತ್ತಿದ್ದ
ದಿನಗಳು ಬಹುಶಃ ಮುಗಿದಿರಬೇಕು. ಇಲ್ಲಿ ಈಗ ಮೊದಲಿನಷ್ಟು ಹಸಿರು, ಆ ಶಾಂತಿ,
ಸಮಾಧಾನ ಇಲ್ಲ. ಏನೋ ಕಳೆದುಹೋಗುತ್ತಿದೆ. ಮರೆಯಾಗುತ್ತಿದೆ...