ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇನ್ನಷ್ಟು ಕತೆಗಳು / ಒ೦ದು ಗಿಡ, ಒಂದು ಬಾವಿ ೫೧೯

ಎಷ್ಟೊಂದು ನೆನಪುಗಳು! ಒಂದು ಮಳೆಗಾಲದ ಸಂಜೆಯ ಹೊತ್ತಿನಲ್ಲಿ

ಜಿಟಿಜಿಟಿ ಮಳೆ ಹನಿಯುತ್ತಿದ್ದಾಗ, ತಂಗಾಳಿ ಬೀಸುತ್ತಿದ್ದಾಗ, ಮಲ್ಲಿಗೆಯ ಕಂಪು

ಮಾವಿನ ಚಿಗುರಿನ ತಂಪು ಗಾಳಿಗುಂಟ ತೇಲಿ ಬರುತ್ತಿದ್ದಾಗ, ಕೋಗಿಲೆಗಳು

ಬಣ್ಣಬಣ್ಣದ ಹಕ್ಕಿಗಳು ಇಂಪಾಗಿ ಉಲಿಯುತ್ತಿದ್ದಾಗ, ಸಂಜೆ ಸೂರ್ಯನ ಕೆಂಪು

ಧಾರವಾಡದ ಗಿಡಮರಗಳನ್ನು ಮನೆ-ದಾರಿಗಳನ್ನು ಆವರಿಸಿಕೊಂಡಿದ್ದಾಗ, ನೀನು

ಬಂದಿದ್ದೆ. ನನ್ನ-ನಿನ್ನ ಗೆಳೆತನ, ಆ ಚಿನ್ನಾಟ, ಪ್ರೀತಿಯ ಮಾತುಗಳು, ಒಲವಿನ

ನೋಟಗಳು, ನಾವು ಸುಖ-ದುಃಖ ಹಂಚಿಕೊಂಡಿದ್ದು, ನಮ್ಮ ಸುತ್ತಲಿನ ಪರಿಸರ

ಅರಳಿದಾಗ ನಾವೂ ಸಂತೋಷಪಟ್ಟಿದ್ದು, ನಮ್ಮ ಪರಿಸರ ಬಾಡಿದಾಗ ನಾವೂ

ಕೊರಗಿದ್ದು -ಈ ಎಲ್ಲವೂ ನೆನಪುಗಳಾಗಿ ನನ್ನ ಕಾಯಂ ಸಂಗಾತಿಗಳಾಗಿ

ಉಳಿದುಬಿಟ್ಟಿವೆ.

ಈಗ ನೀನಿಲ್ಲ.

ಇತ್ತೀಚೆ ನೀನು ಯಾಕೋ ಬಳಲಿದಂತೆ ಕಾಣುತ್ತಿದ್ದೆ. ಇಡೀ ದಿನ ಭರ್‍ರೆಂದು

ಸದ್ದು ಮಾಡುತ್ತ, ಓಡಾಡುವ ರಾಕ್ಷಸಾಕಾರದ ಬಸ್ಸು-ಟ್ರಕ್ಕುಗಳ ಧೂಳು ಮುಸುಗಿ

ನಿನ್ನ ಸುಂದರ ಹರಿದ್ವರ್ಣ ಕಾಂತಿ ಮಸುಕಾಗತೊಡಗಿತ್ತು. ನಿನ್ನ ಸುತ್ತ ಮೊದಲಿನಂತೆ

ಏಕಾಂತವಿರಲಿಲ್ಲ. (ನೆನಪಿದೆಯೇ, ಆ ಏಕಾಂತದಲ್ಲಿ ನಾವು ಪರಸ್ಪರ

ಪ್ರೀತಿಸುತ್ತಿದ್ದುದು?) ಶಾಂತಿಯಿರಲಿಲ್ಲ. ಅದೆಷ್ಟೊಂದು ಡಬ್ಬಿ ಅಂಗಡಿಗಳು,

ಅದೆಷ್ಟೊಂದು ಆಟೋ ರಿಕ್ಬಾಗಳು, ಹೋಟೆಲುಗಳು, ಸಿಗರೇಟು-ಬೀಡಿ ಅಂಗಡಿಗಳು,

ಆಯ್‌ಸ್ಕ್ರೀಮ್‌ ಪಾರ್ಲರುಗಳು ! ಎಲ್ಲ ಕಡೆ ಗುಟಖಾ-ಪಾನ್‌ಮಸಾಲಾ ತಿಂದು

ಉಗುಳಿದ ಹೊಲಸು ಕಲೆಗಳು, ಬೀಡಿ-ಸಿಗರೇಟಿನ ಹೊಗೆಯ ದುರ್ಗಂಧ, ಕಾಲಿಡಲೂ

ಆಗದಷ್ಟು ಜನರಿಂದ ತುಂಬಿ ಗಿಜಿಗಿಡುವ ಚಿಕನ್‌ ಕಾರ್ನರುಗಳು, ಬಾರುಗಳು, ಛೇ,

ಛೇ.... ಇಷ್ಟು ಜನರೆಲ್ಲ ಎಲ್ಲಿಂದ ಬಂದರು ?- ನನಗೂ ನಿನಗೂ

ಅಚ್ಚರಿಯಾಗುತ್ತಿತ್ತು. ಉಸಿರುಗಟ್ಟುತ್ತಿತ್ತು....

ಯಾರು ಯಾರೋ ಬಂದು ನಿನ್ನ ರೆಂಬೆ-ಕೊಂಬೆಗಳನ್ನು ನಿರ್ದಾಕ್ಸಿಣ್ಯವಾಗಿ

ಕಡಿದುಕೊಂಡು ಹೋದರು. ಆದರೂ ನಿನ್ನದು ಗಟ್ಟಿ ಜೀವ. ಬಿಸಿಲಲ್ಲಿ, ಧೂಳಿನಲ್ಲಿ,

ಹೊಲಸು ಪರಿಸರದಲ್ಲಿ ಹಸಿರುಹೊತ್ತು ನೀನು ನಿಂತೇ ಇದ್ದೆ. ನಿನ್ನಿಂದಾದಷ್ಟು

ತಂಪನ್ನು, ನೆರಳನ್ನು, ಸುಳಿಗಾಳಿಯನ್ನು ನಿನ್ನ ಬಳಿಸಾರಿದವರಿಗೆ ನೀಡುತ್ತಲೇ ಇದ್ದೆ.

ಆಗೊಮ್ಮೆ ಯಾರೋ ದೊಡ್ಡ ಮನುಷ್ಯರು ಮೂರು-ನಾಲ್ಕು ಕಾರುಗಳಲ್ಲಿ

ಬಂದರು. ನಿನ್ನ ಸುತ್ತಲಿನ ಜಾಗವನ್ನೆಲ್ಲ ನಿನ್ನ ಪರಿವೆ ಮಾಡದೇ ಅಳತೆ ಮಾಡಿದರು.