ಇನ್ನಷ್ಟು ಕತೆಗಳು / ಒ೦ದು ಗಿಡ, ಒಂದು ಬಾವಿ ೫೨೧
ಡಾಕ್ಟರರೋ-ಪೇಶಂಟೋ, ಸಭ್ಯರೋ-ಕಳ್ಳರೋ, ಏನೂ ತಿಳಿಯುವುದಿಲ್ಲ. ಎಲ್ಲರ
ತಲೆಗೂದಲಿಗೂ ಬಣ್ಣ ; ಎಲ್ಲರ ಮುಖಗಳ ಮೇಲೂ ಅತೃಪ್ತಿಯ ಕಳೆ ; ಎಲ್ಲರ
ಬಾಯಲ್ಲೂ ಗುಟಖಾನೋ ಮತ್ತೆಂಥದೋ ಸುಡುಗಾಡು. ಇದು ಎಂತಹ ಸಂಸ್ಕೃತಿ !
ನಿಜವಾಗಿ ಹೇಳಬೇಕೆಂದರೆ ನಾನೂ ಈಗ ಬದುಕಿಲ್ಲ. ನನ್ನೊಳಗೆ ಒಂದು
ಕಾಲದಲ್ಲಿ ತುಂಬಿಕೊಂಡಿದ್ದ ಅಮೃತ ಸಮಾನವಾದ ಸಿಹಿನೀರು ಅದೆಂದೋ
ಬತ್ತಿಹೋಗಿದೆ. ಸುತ್ತೆಲ್ಲ ತಲೆಯೆತ್ತಿ ನಿಂತ ಬೋರ್‌ವೆಲ್ಲುಗಳಿಂದ ನನ್ನ ಸೆಲೆಗಳು
ಜೀವ ಕಳೆದುಕೊಂಡಿವೆ. ನನ್ನ ಸುತ್ತ ತಿಪ್ಪೆ, ಕಸ. ನನ್ನೊಳಗೂ ಅದೇ. ಗಣೇಶ ಚವತಿ
ಬಂತೆಂದರೆ ಸಾಕು, ಸಾವಿರಾರು ಗಣಪತಿಗಳನ್ನು ತಂದು ನನ್ನಲ್ಲಿ ವಿಸರ್ಜಿಸುತ್ತಾರೆ.
ಬಾಡಿದ ಹೂಗಳು, ಎಲೆಗಳು, ಕಾಗದದ ಚೂರುಗಳು, ಒಣಗಿದ ಕಸಕಡ್ಡಿ, ಮಣ್ಣು
ಎಲ್ಲವನ್ನೂ ನನ್ನಲ್ಲಿ ಸುರಿಯುತ್ತಾರೆ. ಎಲ್ಲ ಸೇರಿ ದುರ್ನಾತ ಬೀರುತ್ತಿರುವ
ಕೊಳಚೆಗುಂಡಿಯಾಗಿದ್ದೇನೆ ನಾನು. ಸಂಜೆಗಳಲ್ಲಿ ಉದ್ದಕೂದಲು ಬಿಟ್ಟು ಕಪ್ಪು ಕನ್ನಡಕ
ತೊಟ್ಟು ವಿಚಿತ್ರ ವೇಷಧಾರಿಗಳಾದ ಜನರು ವಿಚಿತ್ರ ವಾಹನಗಳನ್ನೇರಿ ಬರುತ್ತಾರೆ.
ಬಾರುಗಳ ಒಳಸೇರುವ ಮೊದಲು ಹಾಗೂ ಹೊರಬಂದ ನಂತರ ತುಸು ಹೊತ್ತು
ನನ್ನ ಕಟ್ಟೆಯ ಮೇಲೆ ಕೂತಿರುತ್ತಾರೆ. ಅವರ ಮಾತು, ಅಭಿರುಚೆ, ವರ್ತನೆ ನೋಡಿ
ಜುಗುಪ್ಸೆಯಾಗುತ್ತದೆ. ನಾನೇಕೆ ಇನ್ನೂ ಇಲ್ಲಿದ್ದೇನೆ ಅನಿಸುತ್ತದೆ. ನನಗೂ
ಒಂದಲ್ಲೊಂದು ದಿನ ನಿನ್ನಂತೆ ಈ ಹೊಲಸು ಪರಿಸರದಿಂದ ಮುಕ್ತಿ ಸಿಗುವುದೇ ?
ಅಥವಾ ಈ ಅತಂತ್ರ ಸಂಸ್ಕೃತಿಯ ಪ್ರತೀಕವಾಗಿ ನಾನು ಹೀಗೆಯೇ ಕೊನೆವರೆಗೆ
ನಾರುತ್ತ ಉಳಿದುಕೊಂಡಿರಬೇಕೇ ?