ಪುಟ:ನಡೆದದ್ದೇ ದಾರಿ.pdf/೫೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇನ್ನಷ್ಟು ಕತೆಗಳು / ವೀಣಾ ಅವರ ಕೃತಿಗಳ ಬಗ್ಗೆ ಕೆಲವು ಅಭಿಪ್ರಾಯಗಳು ೫೨೩

ಬಗ್ಗೆ ನಿರ್ದಿಷ್ಟವಾಗಿ, ಸ್ಪಷ್ಟವಾಗಿ ಏನೂ ಹೇಳಲು ಬರುವದಿಲ್ಲೆಂಬುದೇ ಅದರ ಸದ್ಯದ ವೈಶಿಷ್ಟ್ಯ. ಯಾಕೆಂದರೆ ಅದು ತನ್ನ ಶಕ್ತಿಯನ್ನು, ಒಲವನ್ನು, ಸೀಮೆಯನ್ನು ತಾನೇ ಶೋಧಿಸುವ ಪ್ರಯೋಗಾವಸ್ಥೆಯಲ್ಲಿದೆ. ಇಂಥ ಅವಸ್ಥೆ ಬೆಳೆಯುವ ಕಲೆಗೆ ತೀರ ಅವಶ್ಯವಾದದ್ದು ಅನಿವಾರ್ಯವಾದದ್ದು ಎಂದು ಗಮನದಲ್ಲಿಟ್ಟುಕೊಂಡು, ಅದರ ಕೆಲವು ಆಂತರಿಕ ಒಲವುಗಳನ್ನಾಗಲಿ ಸಂಘರ್ಷಗಳನ್ನಾಗಲಿ ಎತ್ತಿ ತೋರಿಸುವದೇ ವಿಮರ್ಶೆ ಸದ್ಯ ಮಾಡಬಹುದಾದ ಕೆಲಸ. ಈ ದೃಷ್ಟಿಯಿಂದ ಇಲ್ಲಿಯ ಕತೆಗಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಪ್ರತಿಯೊಂದರ ವೈಶಿಷ್ಟ್ಯವನ್ನು ಸೂಚಿಸುವ ಯತ್ನ ಈ "ಟಿಪ್ಪಣಿ'ಯಲ್ಲಿ ಮಾಡಲಾಗಿದೆ. 'ಮುಳ್ಳುಗಳು' ಎಂಬ ಕತೆ ಇನ್ನೂ ಲಗ್ನವಾಗದ, ಆದರೆ ಲಗ್ನಕ್ಕಾಗಿ ಕಾತರಳಾಗಿ ನಿಂತ, ಪ್ರಾಧ್ಯಾಪಿಕೆ ಶಾಂತಿಯ ಒಂದು ದಿನದ 'ಮೂಡ'ನ್ನು ರೂಪಿಸುತ್ತದೆ. ಕತೆಯಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಆ ಮನಸ್ಥಿತಿಯನ್ನು ಸ್ಪಷ್ಟವಾಗಿ ಮೂರ್ತಗೊಳಿಸಲು ಸಹಾಯ ಮಾಡುತ್ತವೆ. ಕತೆಯ ಅರ್ಥವೆಲ್ಲ ಅದರ ಕೇಂದ್ರದಲ್ಲಿದ್ದ ಒಂದು ವ್ಯಂಗ್ಯಾತ್ಮಕವಾದ ಸಂಗತಿಯನ್ನವಲಂಬಿಸಿದೆಯೆಂದು ನಾವು ಗಮನಿಸಬೇಕು : ನಾಯಿಕೆಯು ತನ್ನ ಕಾತರತೆಯನ್ನು ಬಿಚ್ಚು ಮನಸ್ಸಿನಿಂದ ಒಪ್ಪಿಕೊಳ್ಳದೆ, ತನಗೆ ಒಳಗೆ ತೊಂದರೆ ಕೊಡುವ 'ಮುಳ್ಳು' ತನ್ನ ಹೊರಗೆ ಇವೆ ಎಂದು ಸಾಧಿಸುತ್ತ, ತನ್ನ ಮನಸ್ಸಿನ ಸಂದಿಗ್ಧತೆಯಲ್ಲಿಯೇ ತೊಳಲಾಡುವ ಸನ್ನಿವೇಶವೇ ಮೂಲತಃ ವ್ಯಂಗ್ಯಾತ್ಮಕವಾದದ್ದು. ಆದರೆ ಈ ಕೇಂದ್ರ ವ್ಯಂಗ್ಯದ ಅರಿವು ಯಾಕೋ ಏನೋ ನಿರ್ಲಿಪ್ತ ವಸ್ತುನಿಷ್ಠ ಕಲಾಪ್ರಜ್ಞೆಯ ಪಾತಳಿಯ ಮೇಲೆ ಕೆಲಸ ಮಾಡುವದಿಲ್ಲವಾದ್ದರಿಂದ ಕತೆ. ಪಡೆಯಬೇಕಾದ ಗಹನತೆಯನ್ನೂ ಅರ್ಥಪೂರ್ಣತೆಯನ್ನೂ ಪಡೆದಿಲ್ಲ ವೆಂದೆನಿಸುವದು. ಆದರೆ ಕತೆ ಹೇಳುವ ರೀತಿಯಲ್ಲಿ, ಸನ್ನಿವೇಶಗಳನ್ನು ಸಾಂಕೇತಿಕವಾಗಿ, ಉದ್ದೇಶಪೂರ್ಣವಾಗಿ ಉಪಯೋಗಿಸಿಕೊಳ್ಳುವಲ್ಲಿ ಸಾಕಷ್ಟು ಕಲೆಗಾರಿಕೆಯಿದೆ. 'ಮುಳ್ಳುಗಳು' ಕತೆಯಲ್ಲಿ ಸಾಧಿಸದಿದ್ದದ್ದು 'ಅತಿಥಿ'ಯಲ್ಲಿ ಮಾತ್ರ ಚನ್ನಾಗಿ ಸಾಧಿಸಿದೆ. ವಸ್ತುವಿನಲ್ಲಿ ರುವ ವ್ಯಂಗ್ಯಕ್ಕೆ ತಿಳಿಗಣ್ಣಿನ ವಸ್ತುನಿಷ್ಕತೆಯ ಬೆಂಬಲ ಸಿಕ್ಕಿದ್ದರಿಂದ 'ಅತಿಥಿ' ತುಂಬ ಯಶಸ್ವಿಯಾಗಿದೆ. ತನ್ನ ಮಹತ್ವಾಕಾಂಕ್ಷೆಗಾಗಿ ತಾರುಣ್ಯದಲ್ಲಿ ಪ್ರೇಮವನ್ನು ಧಿಕ್ಕರಿಸಿ, ನಂತರ ವಯಸ್ಸಾದಂತೆ ಜೀವನ ಸಾಫಲ್ಯಕ್ಕೆ ಎರವಾಗಿ, sadistic ಆಗುತ್ತ ನಡೆದ, ಜೀವನಕ್ಕೇ ಅತಿಥಿಯಾದ ಪ್ರೊ. ಲೀಲಾವತಿಯ ಮನಸ್ಥಿತಿಯ ಚಿತ್ರಣ ಈ ಕತೆಯಲ್ಲಿದೆ. ದೃಷ್ಟಿಕೋನದಲ್ಲಿ ವಿಡಂಬನೆ- ಸಹಾನುಭೂತಿಗಳ ಸಮತೋಲವನ್ನು ಸಾಧಿಸಲು ಲೇಖಿಕೆ ಮಾಡಿದ ಪ್ರಯತ್ನ ತುಂಬ