೫೨೬ ನಡೆದದ್ದೇ ದಾರಿ
ಲೇಖಕಿಯರಿಂದ ಭಿನ್ನವಾದ ರೀತಿಯಲ್ಲಿ ಬದುಕಿನ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿ ಅಷ್ಟೇ ಧೈರ್ಯದಿಂದ ಆ ಪ್ರಶ್ನೆಗಳಿಗೆ ಉತ್ತರಕ್ಕೆ ಹುಡುಕಾಡಿದ ರಾಜಲಕ್ಷ್ಮಿ ಎನ್. ರಾವ್ ಅವರ ಮಾರ್ಗದಲ್ಲಿ ವೀಣಾ ಅವರಿದ್ದಾರೆ. ಇವರ “ಮುಳ್ಳುಗಳು" ಕಥಾ ಸಂಕಲನ ಗದ್ಯ ಸಾಹಿತ್ಯಕ್ಕೆ ಹೊಸ ಜೀವ ತಂದಿರುವಂತೆಯೇ ಕಥಾಸಾಹಿತ್ಯಕ್ಕೆ ಹೊಸ ಭರವಸೆ ತಂದಿದೆ.
ಇವರ ಕತೆಗಳಿಗಿಂತ ಹೆಚ್ಚಾಗಿ ಈ ಕತೆಗಳ ಹಿಂದಿನ ಪ್ರಜ್ಞೆ ಹೆಚ್ಚು ಸ್ವಾರಸ್ಯಕರವಾದದ್ದು. ಒಬ್ಬ ವ್ಯಕ್ತಿಯ ಮನಸ್ಸಿನ ಅನಿಸಿಕೆಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಧೈರ್ಯ ಮತ್ತು ಆ ಅನಿಸಿಕೆಗಳ ಆಳಕ್ಕೆ ಇಳಿಯುವ ಕುತೂಹಲ ಇವು ಇಲ್ಲಿವೆ. ಇದರ ಜೊತೆಗೆ ತೀವ್ರವಾದ ಭಾವನೆಗಳನ್ನು ಅದೇ ಸ್ಥಿತಿಯಲ್ಲಿ ಹಿಡಿದಿಡಬಲ್ಲ ಶೈಲಿಯನ್ನು ಈ ಲೇಖಕಿ ರೂಢಿಸಿಕೊಂಡಿದ್ದಾರೆ. ಪಿ. ಲಂಕೇಶ್
- * *
ಹೊಸ ಸಂವೇದನೆಯ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಶ್ರೀಮತಿ ವೀಣಾ ಅವರ ಸಾಧನೆ ಅಪೂರ್ವವಾದುದು. ಹೆಣ್ಣು ಮಕ್ಕಳ ಒಳತೋಟಿಯನ್ನು ನಿರ್ಭೀತಿಯಿಂದ ಯಾವುದೇ ಮೈ ಚಳಿ ಇಲ್ಲದೆ ಇವರಷ್ಟು ದಿಟ್ಟವಾಗಿ, ಕಲಾತ್ಮಕವಾಗಿ ಅಭಿವ್ಯಕ್ತಿಸುತ್ತಿರುವ ಇನ್ನೊಬ್ಬ ಲೇಖಕಿ ಕನ್ನಡದಲ್ಲಿ ಇಲ್ಲ ಎನ್ನಬಹುದು. ತಮ್ಮ ಮೊದಲ ಕಥಾಸಂಕಲನ “ಮುಳ್ಳುಗಳು" ಮೂಲಕ ಎಲ್ಲರ ಗಮನ ಸೆಳೆದ, ಕನ್ನಡದ ಪ್ರತಿಭಾನ್ವಿತ ಲೇಖಕಿಯರ ಕೊರತೆಯನ್ನು ತುಂಬಬಲ್ಲವರು ಇವರೇ ಎಂಬ ಭರವಸೆಯನ್ನು ಕೃತಿಯಿಂದ ಕೃತಿಗೆ ಬೆಳೆಯುತ್ತ ಬಂದ ವೀಣಾ ನಿಜಗೊಳಿಸಿದ್ದಾರೆ. ವೀಣಾರವರ ಜೀವಂತ ಕಲೆಗಾರಿಕೆಯನ್ನು ಅವರ "ಕೊನೆಯ ದಾರಿ" ಮತ್ತು "ಕವಲು" ಕಥಾಸಂಕಲನಗಳಲ್ಲಿ ಹಾಗೂ “ಗಂಡಸರು" ಕಾದಂಬರಿಯಲ್ಲಿ ನಿಚ್ಚಳವಾಗಿ ಕಾಣಬಹುದು. ಸಮಾಜದ ಅಂತರಂಗ ಪ್ರಪಂಚವನ್ನು ಸೂಕ್ಷ್ಮವಾಗಿ ಬಿಚ್ಚುತ್ತಾ ಹೋಗುವ, ವ್ಯಕ್ತಿಗಳ ಮುಖವಾಡಗಳನ್ನು ಕಳಚಿ ಅವರ ನಿಜಸ್ವರೂಪವನ್ನು ಅನಾವರಣಗೊಳಿಸುವ, ಮತ್ತು ಸಂಕೀರ್ಣ ಅನುಭವಗಳನ್ನು ಸಫಲ ಕೃತಿಯಾಗಿ ಅಣಿಗೊಳಿಸುವ ಇವರ ಪ್ರತಿಭೆ ಕಣ್ಣು ಕುಕ್ಕುವಂಥದು. ಶ್ರೀಕೃಷ್ಣ ಆಲನಹಳ್ಳಿ