ಇನ್ನಷ್ಟು ಕತೆಗಳು / ವೀಣಾ ಅವರ ಕೃತಿಗಳ ಬಗ್ಗೆ ಕೆಲವು ಅಭಿಪ್ರಾಯಗಳು ೫೨೭
- * *
" ಮಧ್ಯಮ ವರ್ಗದ ಮಹಿಳೆಯ ಸ್ವಾತಂತ್ರ್ಯದ ಹಂಬಲ ಮತ್ತು ಕಟು ವಾಸ್ತವಗಳ ದಾಖಲೆಯಾಗುವ ಅವಳ ಸ್ವಾತಂತ್ರ್ಯ ಕತೆಯ ಕೊನೆಯ ಭಾಗ ಸಶಕ್ತ ವ್ಯಂಗ್ಯವಾಗಿದೆ. ಕತೆಯ ವಸ್ತುವಿಗೆ ಹೊಂದಿಕೊಂಡಂತೆ ರೂಪುಗೊಂಡ ಶೈಲಿ ಮತ್ತು ಕತೆಯ ಕೊನೆಯಲ್ಲಿ ಮುಕ್ತಾಯಕ್ಕೆಂಬಂತೆ ಕೊಡುವ ಭಾಗ ಪೂರಕತಂತ್ರವಾಗಿ ಪರಿಣಮಿಸಿದೆ. ಇಡೀ ಕತೆ ವಿಮಲಾ ಶಂಕರಳ ಶೃಂಖಲಿತ ದಿನಚರಿಯನ್ನು ಮಂಡಿಸುತ್ತಲೇ ಸಾಗಿ ಕಡೆಯಲ್ಲಿ ಅರ್ಥಪೂರ್ಣ ತಿರುವು ತೆಗೆದುಕೊಳ್ಳುತ್ತದೆ. ಇದೇ ವಿಮಲಾ ಶಂಕರ್ ಸ್ತ್ರೀ ಸ್ವಾತಂತ್ರ್ಯ ಕುರಿತು ಆಡುವ ಮಾತುಗಳು ಕತೆಗೆ ವ್ಯಂಗ್ಯದ ಒತ್ತು ಕೊಡುವಲ್ಲಿ ಸಫಲವಾಗಿವೆ. ಮರ್ಯಾದೆ ಎಂಬ ಕತೆ ವೀಣಾ ಅವರ ಆಕರ್ಷಕ ಬರವಣಿಗೆ ಮತ್ತು ಕಥಾ ಶಿಲ್ಪಗಳ ಯಶಸ್ವಿ ಮಾದರಿಯಾಗಿದೆ. ತಮ್ಮ ತಂದೆ ಮನೆಯ ಅಡಿಗೆ ಹೆಣ್ಣನ್ನು ವಿವಾಹವಾಗಲು ನಿಶ್ಚಯಿಸಿದ್ದನ್ನು ತಿಳಿದ ಮಕ್ಕಳು ಹಿರಿಯಳಾದ ಕಮಲಾಳನ್ನು ಕರೆಯಿಸಿಕೊಳ್ಳುತ್ತಾರೆ. ಆಕೆ ಬಂದಾಗ ಸಿಗುವ ಸ್ವಾಗತ ಹೋಗುವಾಗ ಸಿಗುವುದಿಲ್ಲ. ಆಕೆ ತೆಗೆದುಕೊಂಡ ನಿರ್ಧಾರ - ಮಕ್ಕಳ ಆರೈಕೆಯೂ ಇಲ್ಲದ ತಂದೆ ಅಡಿಗೆಯವಳನ್ನೇ ವರಿಸುವ ತೀರ್ಮಾನವನ್ನು ಬೆಂಬಲಿಸುವ ನಿರ್ಧಾರ- ಇಂಥ ಅನಾದರಕ್ಕೆ ಕಾರಣ. ಇಷ್ಟು ಕಥಾ ಕೇಂದ್ರ ವೀಣಾರವರ ನಿರೂಪಣಾ ಕ್ರಮದಲ್ಲಿ ಆಕರ್ಷಣೀಯವಾಗಿದೆ." ಬರಗೂರು ರಾಮಚಂದ್ರಪ್ಪ