ವಿಶಿಷ್ಟ ರುಚಿ, ಸುವಾಸನೆ, ಸತ್ವ ಇದೆ. ಆದರೆ ಬೆಲ್ಲವನ್ನು ಸಂಸ್ಕರಿಸಿ ಮಾಡುವ
ಪ್ರಕ್ರಿಯೆಯಲ್ಲಿ ಈ ವೈಶಿಷ್ಟ್ಯಗಳೆಲ್ಲ ಕಳೆದುಹೋಗುತ್ತವೆ. ಲೇಖಕಿಯರ ಸಂವೇದನೆ
ಬೆಲ್ಲದಂತೆ. ವಿಶಿಷ್ಟ ಸತ್ವ, ರುಚಿ, ಬಣ್ಣದ ಗುಣಗಳನ್ನು ಹೊಂದಿದ್ದರೂ ಅಭಿವ್ಯಕ್ತಿಯ
ಸಮಸ್ಯೆಯಿಂದ, ಹಿಂಜರಿಕೆಯಿಂದ ಈ ಅನುಭವಗಳು ಸಂಸ್ಕರಣೆಯಾಗಿ ಬರಹ
ರೂಪದಲ್ಲಿ ಬಂದಾಗ ಅವು ಸಕ್ಕರೆಯಂತೆ ತಮ್ಮ ಮೂಲಗುಣ ರೂಪಗಳನ್ನು
ಕಳೆದುಕೊಂಡಿರುತ್ತವೆ. (ಸಂಕಿರಣವೊಂದರಲ್ಲಿ ಮರಾಠೀ ಲೇಖಕಿಯೊಬ್ಬರು ಹೇಳಿದ
ಮಾತಿದು.)
ವೀಣಾ ಶಾಂತೇಶ್ವರ ಅವರು ಬರವಣಿಗೆಯನ್ನು ಆರಂಭಿಸಿದ ಕಾಲದಲ್ಲಿ
ಬರೆಯುತ್ತಿರುವವರಲ್ಲಿ ಈ ತೊಡಕುಗಳಿದ್ದರೂ ಅವರು ಅವುಗಳನ್ನು ಮೀರಿ
ಅಭಿವ್ಯಕ್ತಿಯಲ್ಲಿ ತಮ್ಮ ಸ್ವಂತಿಕೆಯನ್ನು ಸಾಧಿಸಿದ್ದಾರೆ.
ಪ್ರೊ. ಶಾಂತಿನಾಥ ದೇಸಾಯಿಯವರು ವೀಣಾ ಅವರ ಕಥೆಗಳ ಈ ಗುಣವನ್ನು
'ಮುಳ್ಳುಗಳು' ಸಂಗ್ರಹದ ಕಥೆಗಳಲ್ಲೇ ಗುರುತಿಸಿದ್ದಾರೆ. “ಈ ಕತೆಗಳಲ್ಲಿ ವಿಮರ್ಶಕನ
ಕುತೂಹಲವನ್ನೂ ಕಾಳಜಿಯನ್ನೂ ಕೆರಳಿಸುವ ವಿಷಯವೆಂದರೆ ಅವುಗಳಲ್ಲಿಯ ಕಥನ
ಕಲೆಯ ಸ್ವರೂಪ ಮತ್ತು ಅಭಿವ್ಯಕ್ತಿಯ ರೀತಿ."
ತಮ್ಮ ಮೊದಲ ಸಂಕಲನದ ಕತೆಗಳ ದಿಟ್ಟ ಅಭಿವ್ಯಕ್ತಿಯಿಂದಾಗಿ ವೀಣಾ
ಶಾಂತೇಶ್ವರ ಅವರು ಓದುಗರ, ವಿಮರ್ಶಕರ ಗಮನ ಸೆಳೆದು ಮೆಚ್ಚುಗೆ ಗಳಿಸಿಕೊಂಡರು.
ಇದು ಕನ್ನಡದಲ್ಲಿ ಲೇಖಕಿಯರ ಸಾಹಿತ್ಯದ ಮಟ್ಟಿಗಂತೂ ಒಂದು ಮೈಲಿಗಲ್ಲು.
ಇದರಿಂದಾಗಿ ಎಪ್ಪತ್ತರ ದಶಕದ ಆರಂಭದಲ್ಲಿಯೇ ಮುಕ್ತವಾಗಿ ಬರೆಯಬಯಸುವ
ಲೇಖಕಿಯರಿಗೆ ನವಮಾರ್ಗವೊಂದು ದೊರೆತಿತ್ತು. ವೀಣಾ ಅವರು ತೋರಿದ 'ಈ
ದಾರಿಯಲ್ಲಿ ನಮ್ಮ ಅಭಿವ್ಯಕ್ತಿ ಸರಾಗವಾಯಿತು' ಎಂದು ಗೆಳತಿ, ಲೇಖಕಿ - ಕವಿ
ಶಶಿಕಲಾ ವೀರಯ್ಯಸ್ವಾಮಿ ನೆನೆಸಿಕೊಳ್ಳುತ್ತಾರೆ. ಹೀಗೆ ವೀಣಾ ಶಾಂತೇಶ್ವರ
ಪರಂಪರೆಯನ್ನು ಹುಟ್ಟುಹಾಕಿದ ಲೇಖಕಿಯರಲ್ಲಿ ಒಬ್ಬರು. ಎಪ್ಪತ್ತರ ದಶಕದ
ಉತ್ತರಾರ್ಧದಲ್ಲಿ ಕಥಾ ಸಂಕಲನ ಪ್ರಕಟಿಸಿದ ವೈದೇಹಿ ತಮ್ಮದೇ ಅಭಿವ್ಯಕ್ತಿಯ
ರೀತಿಯನ್ನು ಸಾಧಿಸಿದ್ದಾರೆ. ಹಾಗೆಯೇ ನೇಮಿಚಂದ್ರ ಅವರದು ಇನ್ನೊಂದು ಶೈಲಿ.
ಈಗ ಇಪ್ಪತ್ತೊಂದನೇ ಶತಮಾನದ ಲೇಖಕಿಯರ ಎದುರು ಹಲವಾರು ಮಾದರಿಗಳಿವೆ.
ವೀಣಾ ಅವರ ಕಥೆ ಕಾದಂಬರಿಗಳಲ್ಲಿ ಸ್ತ್ರೀ ಪುರುಷರ ಆಕರ್ಷಣೆ, ದ್ವಿಸ್ತರ
ಮೌಲ್ಯಗಳ ಕಾರಣದಿಂದ, ವ್ಯಕ್ತಿವಿಶಿಷ್ಟ ಸಮಸ್ಯೆಗಳಿಂದ ಹುಟ್ಟಿಕೊಳ್ಳುವ
ಸಂಘರ್ಷಗಳು, ಇವುಗಳನ್ನು ಧೈರ್ಯದಿಂದ ಎದುರಿಸುವ ಸ್ತ್ರೀಯರು, ಹೀಗೆ
ವೈವಿಧ್ಯಮಯ ವಸ್ತುಗಳಿವೆ. ಗಂಡು ಹೆಣ್ಣಿನ ಬದುಕಿನ ಹಲವು ಮುಖಗಳನ್ನು ವೀಣಾ
ಪುಟ:ನಡೆದದ್ದೇ ದಾರಿ.pdf/೫೩೮
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಇನ್ನಷ್ಟು ಕತೆಗಳು / ವೀಣಾ ನಡೆದ ದಾರಿ....
೫೩೧