ಪುಟ:ನಡೆದದ್ದೇ ದಾರಿ.pdf/೫೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೩೪

ನಡೆದದ್ದೇ ದಾರಿ

ಸಂಪ್ರದಾಯ, ಬೌದ್ದಿಕತೆ, ಧರ್ಮ ಎಲ್ಲದರ ಹೆಸರಿನಲ್ಲಿ ಯೂ ಮನುಷ್ಯನು
ಚಲಾಯಿಸುವ ಅಧಿಕಾರದ ಬಗ್ಗೆ ಈ ಪ್ರಕ್ರಿಯೆಯಲ್ಲಿ ಕೆಲಸ ಮಾಡುವ ಢೋಂಗಿತನದ
ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸುತ್ತದೆ." (ಪು. ೧೫೫, ಸ್ತ್ರೀ ಸಂವೇದನೆಯಲ್ಲಿ ಕನ್ನಡ
ಕಥನ) ಎಂದು ಸರಿಯಾಗಿಯೇ ಗುರುತಿಸಿದ್ದಾರೆ.
೧೯೭೫ ರಲ್ಲಿ ವೀಣಾ ಅವರ 'ಗಂಡಸರು' ಕಾದಂಬರಿ ಪ್ರಜಾವಾಣಿ
ವಿಶೇಷಾಂಕದಲ್ಲಿ ಪ್ರಕಟವಾದಾಗ, ತನ್ನ ವಸ್ತುವಿನ ಹೊಸತನ ಮತ್ತು ನಿರೂಪಣೆಯ
ನಾವೀನ್ಯತೆಯಿಂದ ಸಾಕಷ್ಟು ಸುದ್ದಿ ಮಾಡಿ, ಲೇಖಕಿಯರ ಬರವಣಿಗೆಯನ್ನು ಎಲ್ಲರೂ
ನಿರೀಕ್ಷೆ ಕುತೂಹಲಗಳಿಂದ ನೋಡುವಂತಾಯಿತು. ಈ ಕಾದಂಬರಿಯ ಶಾಂತಿ
ಸ್ವಾಭಿಮಾನಿ, ಸೂಕ್ಷ್ಮ ಸ್ವಭಾವದ ಸಾಹಸಿ ಹುಡುಗಿ. ಅವಳ ಸ್ವಾಭಿಮಾನದ
ವ್ಯಕ್ತಿತ್ವವನ್ನು ಇಷ್ಟಪಡದ, ಅವಳ ಬಾಲ್ಯದ ಗೆಳೆಯ ಶಂಕರ ಮತ್ತು ಅವನ ತಂದೆ
ತಾಯಿ ಶಂಕರನ ಜೊತೆಗಿನ ಶಾಂತಿಯ ಮದುವೆ ಪ್ರಸ್ತಾಪವನ್ನು ತಿರಸ್ಕರಿಸುತ್ತಾರೆ.
ಕೆಲಸ ಹುಡುಕಿ ಮುಂಬಯಿಗೆ ಹೋದ ಶಾಂತಿಗೆ ಗಂಡಿನ ವಿವಿಧ ಮುಖಗಳು
ಅನಾವರಣಗೊಳ್ಳುತ್ತವೆ. ಗಂಡು ಎಂತಹವನಾದರೂ ಹೆಣ್ಣನ್ನು ಸಂಶಯಿಸುವುದು,
ಅವಳಿಂದ ಮಾತ್ರ ನಿಷ್ಠೆಯನ್ನು ನಿರೀಕ್ಷಿಸುವುದು, ಶಾಂತಿ ವ್ಯವಸ್ಥೆಯ ವಿರುದ್ಧ ತಿರುಗಿ
ಬೀಳಲು ಕಾರಣವಾಗುತ್ತವೆ. ರಮಾಕಾಂತ ಶಿಂಧೆಯಂತಹವರು ತಾವು ಹೇಗಿದ್ದರೂ
ಪರವಾಗಿಲ್ಲ, ಜೊತೆಗಿರುವ ಹೆಣ್ಣು ಸಂಪ್ರದಾಯದ ಲಕ್ಷ್ಮಣ ರೇಖೆಯೊಳಗೆ
ಇರಬೇಕೆನ್ನುವವರು, ಮಠದನಂತಹ ಪ್ರೊಫೆಸರುಗಳು ವಿದ್ಯಾರ್ಥಿನಿಯರ ಜೊತೆ flirt
ಮಾಡುವ ಸ್ವಭಾವದವರು, ಹೆಂಡತಿಯಾಗುವ ಮೊದಲೇ ಅಧಿಕಾರ ಸ್ಥಾಪಿಸುವ,
ಹೊಡೆಯುವ ಜಾನ್ (ಪುಟ ೧೮೯) ಹೀಗೆ ಇವರೆಲ್ಲರನ್ನೂ ಮೀರಬಯಸುವ ಶಾಂತಿ
ಅವರಂತಾಗುವ ಅನಿವಾರ್ಯತೆ ಉಂಟಾಗುತ್ತದೆ. ಶಾಂತಿ ಲಕ್ಷ್ಮಣ ರೇಖೆಯನ್ನು
ದಾಟುತ್ತಾಳೆ. ಮೂರು ದಶಕದ ಹಿಂದೆ ವೀಣಾ ಇಂತಹ ಕಥೆಯನ್ನು ಬರೆದಾಗ
ಸಾಂಪ್ರದಾಯಿಕ ಮನೋಭಾವದ ಓದುಗರು ಬೆಚ್ಚಿಬಿದ್ದರು.
'ಶೋಷಣೆ ಬಂಡಾಯ ಇತ್ಯಾದಿ' ವೀಣಾ ಅವರ ಎರಡನೆಯ ಕಾದಂಬರಿ.
ವಿವಾಹಿತನನ್ನು ಪ್ರೀತಿಸಿ, ಪ್ರೀತಿಸಲ್ಪಟ್ಟು, ಮದುವೆಯ ನಂತರ ನಿರಾಶೆಯಿಂದ
ದುಃಖಿತಳಾದ ಕಮಲಾ, ಸ್ವಂತಿಕೆಗಾಗಿ ಪರಿತಪಿಸುವ ಡಾ. ಶಶಿ, ಗಂಡನಿಂದ
ಶೋಷಣೆಗೊಳಗಾದ ಮನೆಗೆಲಸದ ರೋಷನ್‌ಬಿ, ಸತತವಾಗಿ ಮಕ್ಕಳನ್ನು ಹೆತ್ತು
ರೋಗಿಯಾದ ಶ್ರೀಮಂತ ಗೃಹಿಣಿ ಪೂರ್ಣಿಮಾ ಸಿಂಗ್, ಹೀಗೆ ಬೇರೆ ಬೇರೆ ಸ್ತರದ
ಹೆಣ್ಣುಗಳು ಪುರುಷ ಪ್ರಧಾನತೆಯಿಂದಾಗಿಯೇ ನವೆಯುವ, ನೋಯುವ ಹೆಣ್ಣಿನ
ಚಿತ್ರಗಳು ಮನ ಕಲಕುವಂತಿವೆ.