ಮುಂಜಾನೆ ಗಂಟೆ ಒಂಬತ್ತೇ ಆಗಿದ್ದರೂ ಎಂತಹ ಬಿಸಿಲು ! ಇನ್ನು ಮಧ್ಯಾಹ್ನ
ಹೇಗಿರುವುದೋ.... ಆ ಕಲ್ಪನೆಯಿಂದಲೇ ತುಂಬ ಸೆಕೆಯೆನಿಸಿ ಪಾವನಾ ತನ್ನ
ಕೋಣೆಯಿಂದ ಎದ್ದು ಪಡಸಾಲೆಗೆ ಬಂದಳು.
ಬೇಸಿಗೆಯ ರಜೆ. ಮುಂಜಾನೆ ಅಲಾರಂ ಇಟ್ಟು ಟೈಂಪೀಸನ್ನು ಶಪಿಸುತ್ತ
ನಾಲ್ಕಕ್ಕೆ ಏಳಬೇಕಾದ ಪ್ರಮೇಯವಿರಲಿಲ್ಲ. ಪೂರ ಹನ್ನೆರಡು ತಾಸು ನಿದ್ರೆ
ಮಾಡಬಹುದು. ಒಂದು ತಾಸಿನ ಹಿಂದೆಯಷ್ಟೇ ಅವಳು ಎದ್ದದ್ದು.ಚಹಾ ಕುಡಿದಾದ
ನಂತರ ಕೂಡಲೆ ಸ್ನಾನ ಮಾಡಲು ಮನಸ್ಸು ಬರದೆ Grace Metaliousನ
ಕಾದಂಬರಿಯೊಂದನ್ನು ತಿರುವಿಹಾಕುತ್ತಾ ಕುಳಿತಳಾಕೆ.
-'ಓದಬೇಡ ಅದನ್ನು, ಹೊಲಸು ಪುಸ್ತಕ,' ಮೂರ್ತಿ ಹೇಳಿದ್ದ ಅವಳಿಗೆ
ಒಂದು ವರ್ಷದ ಹಿಂದೆ. ಕಾದಂಬರಿ ಎಂತಹದಾದರೇನು, ಬಿಡುವಿನ ವೇಳೆ ಕಳೆಯಲು
ಅದು ಆಪ್ಯಾಯಮಾನವೇ ಅಲ್ಲವೆ ? ಮೂರ್ತಿಯದೊಂದು ತಲೆ ಎಂದು
ಮನಸ್ಸಿನಲ್ಲಿಯೇ ನಕ್ಕಳು ಪಾವನಾ.
ಮೂರ್ತಿಯ ನೆನಪು ಧಾರವಾಡದ ಆ ಸೆಕೆಯನ್ನು ಕ್ಷಣಕಾಲ ಮರೆಯಿಸಿತು.
ಜೂನ್ ಬರಲು ಇನ್ನೂ ಪೂರ ಒಂದು ತಿಂಗಳ ಅವಧಿ ಇದೆ. ಅಷ್ಟು ಕಾಲ
ಮೂರ್ತಿಯನ್ನು ಕಾಣದೇ ಇರಬೇಕಲ್ಲ ! ಆದರೇನು, ನಂತರ ಜೀವಮಾನವಿಡೀ
ಮೂರ್ತಿಯ ಜೊತೆಗೇ ಕಳೆಯುವದಿದೆ.
ಮದುವೆಯ ನೆನಪಿನಿಂದ ಪಾವನಾ ತುಸು ಉಲ್ಹಸಿತಳಾದಳು. ಆದರೆ
ಯಾಕೋ ಹೆಚ್ಚುತ್ತಿರುವ ಬಿಸಿಲಿನಿಂದ ಅವಳಿಗೆ ಬಹಳ ಬೇಸರವೆನಿಸಿತು. ಅವ್ಯಕ್ತ
ಅಸ್ವಸ್ಥತೆಯಿಂದ ಮನಸ್ಸು ಅತ್ತಿತ್ತ ಪರದಾಡಿತು.
"ಬರ್ರಿ ಒಳಗೆ" -ಹೊರಗಿನಿಂದ ಅವಳ ತಮ್ಮ ಗೋಪಿಯ ಧ್ವನಿ ಕೇಳಿಸಿತು.
ಯಾರೋ ಬಂದಿರಬೇಕು. ಪಾವನಾ ಕತ್ತೆತ್ತಿ ನೋಡಿದಾಗ ಒಳಬಂದ ಗೋಪಿ ಹೇಳಿದ,
"ಅಕ್ಕಾ, ಯಾರೋ ಮಿ.ಪಿಂಟೋ ಕಾರವಾರದವರು."
ಎದೆಯೊಳಗೆ ಒಮ್ಮೆಲೆ ವಿನಾಕಾರಣ ನೋವಾದಂತೆನಿಸಿ ಅವಳು ತಟ್ಟನೆ ಎದ್ದು
ನಿಂತಳು. ಪಿಂಟೋ ? ಎಲಿಸನ್ ಪಿಂಟೋ ? ಈಗೇಕೆ ಬಂದ ? ಎಲ್ಲಿಂದ ? ಹೇಗೆ ?