ಪುಟ:ನಡೆದದ್ದೇ ದಾರಿ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಳ್ಳುಗಳು/ಬರಿ ನೆನಪು

೫೩

ಏಕಿತ್ತು? ....ಏಕೆ?
ಎಲಿಸನ್ ಧಾರವಾಡದಲ್ಲಿ ಕಳೆದುದು ಎರಡು ವರ್ಷ.ಪ್ರತಿ ರವಿವಾರ ತಪ್ಪದೇ
ಆತ ಮನೆಗೆ ಬರುತ್ತಿದ್ದ. ಎಷ್ಟು ಆಸ್ಥೆಯಿಂದ ಆಕೆ ರವಿವಾರದ ದಾರಿ
ಕಾಯುತ್ತಿದ್ದಳು!ವಾರಕ್ಕೊಮ್ಮೆ ಎಲಿಸನ್ನ ಸಂಗ ದೊರೆಯುತ್ತಿದ್ದ ಆ ಮೂರು-
ನಾಲ್ಕು ತಾಸುಗಳ ನೆನಪೆಂದರೆ ಮೈ ಜುಮ್ಮೆನ್ನುವದು, ಕಣ್ಣುಮುಚ್ಚಾಲೆ, ಪತಂಗ,
ಬ್ಯಾಡ್ಮಿಂಟನ್.... ತಾವಿಬ್ಬರೂ ಆಡದ ಆಟಗಳೇ ಉಳಿದಿರಲಿಲ್ಲ.
ಎಡಗೈಯನ್ನು ತನ್ನ ಬೆನ್ನ ಹಿಂದೆ ಆಸರಾಗಿ ಕೊಟ್ಟು, ಬಲಗೈಯಿಂದ ತನ್ನ
ಮುಖ ಮೇಲೆತ್ತಿ, ಎಲಿಸನ್ ಎಷ್ಟು ಸುಂದರವಾಗಿ ತನ್ನ ಹಣೆಯನ್ನು
ಮುದ್ದಿಸುತ್ತಿದ್ದ!ಚೇಷ್ಟೆಯಿಂದ ಒಮ್ಮೆ ಸೀತಮ್ಮ ಅಂದಿದ್ದರು,"ಎಲಿಸನ್,ನೀ ನಮ್ಮ
ಪಾವನಾನ್ನ ಲಗ್ನಾ ಮಾಡಿಕೊಂಡಬಿಡಪಾ."
ನಕ್ಕು ಆತ ಸುಮ್ಮನಿದ್ದ. ಆದರೆ ಪಾವನಾ ಕೂಡಲೆ ಆತನ ಕೈಗಳಿಂದ
ಕೊಸರಿಕೊಂಡು ದೂರ ಹೋಗಿ ಸಿಡುಕಿನ ಧ್ವನಿಯಲ್ಲಿ ಅಂದಿದ್ದಳು,"ಥೂ, ನೀನು
ಕ್ರಿಶ್ಚಿಯನ್.... ನನಗ ಬ್ಯಾಡಪಾ."
ಎಲಿಸನ್ ಗಟ್ಟಿಯಾಗಿ ನಕ್ಕ ನೆನಪು. ಆ ನಗೆಯಲ್ಲಿ ನೋವು ಅಡಗಿತ್ತೆ?
-ಅದನ್ನು ತಿಳಿದುಕೊಳ್ಳುವಷ್ಟು ಪ್ರಬುದ್ಧಳಾಗಿರಲಿಲ್ಲ ಆಗ ತಾನು.
ಇಂಟರ್ ಸಾಯನ್ಸ್ ಮುಗಿಸಿ ಪೂನಾಕ್ಕೆ ಹೋಗಿ ಮೆಡಿಕಲ್ಗೆ ಸೇರಿದ್ದ
ಎಲಿಸನ್ ಮತ್ತೆಂದೂ ಧಾರವಾಡಕ್ಕೆ ಬಂದಿರಲಿಲ್ಲ.
ಪಾವನಾ ಆತನನ್ನು ಮರೆತಳೆ?
'ಹೌದು' ಎಂದು ನಂಬಲು ಆಕೆ ವ್ಯರ್ಥ ಪ್ರಯತ್ನ ಮಾಡಿದಳು.
ಎಲಿಸನ್ ತನ್ನ ಬಾಲ್ಯದ ಗೆಳೆಯ. ಆಗ ತನಗಿದ್ದ ಎಲ್ಲಾ
ಗೆಳೆಯ-ಗೆಳತಿಯರಲ್ಲೂ ಹೆಚ್ಚು ದೊಡ್ಡವನು. ಸೈಕಲಿನ ಮೇಲೆ ಮುಂದಿನ ಸೀಟಿನಲ್ಲಿ
ತನ್ನನ್ನು ಕೂಡಿಸಿಕೊಂಡು ಜೋರಿನಿಂದ ಓಡಿಸಿ ಅದೆಷ್ಟು ಸಲ ಆತ ತನ್ನನ್ನು
ಹೆದರಿಸಿರಲಿಲ್ಲ!ಹಿಂದಿನಿಂದ ಓಡಿ ಬಂದು ಎರಡೂ ಕೈಗಳಿಂದಲೂ ತನ್ನನ್ನು ಮೇಲೆತ್ತಿ
ಹಿಡಿದು ಅದೆಷ್ಟು ಸಲ ಆತ ಕೆಳಗೆ ಬೀಳಿಸುವೆನೆಂದು ಬೆದರಿಕೆ ಹಾಕಿರಲಿಲ್ಲ!
ಎರಡು ವರ್ಷಗಳ ದೀರ್ಘ ಅವಧಿಯ ಆ ಗೆಳೆತನದಲ್ಲಿ ಒಮ್ಮೆ ತಾವು
ಜಗಳವಾಡಿದ್ದೆವು. ಹದಿನೈದು ದಿನ ಮಾತಾಡಿರಲಿಲ್ಲ. ಎಂಥ ನೋವಿನ ನೆನಪು ಅದು!
ನಿನ್ನೆ ತಾನೇ ನಡೆದು ಹೋದಂತೆ ಆ ಸಂಗತಿ ಇನ್ನೂ ಪಾವನಾಗೆ ನೆನಪಿದೆ.
ಪಾವನಾ ಆಗ ಕವಿತೆ ಬರೆಯಲು ಪ್ರಾರಂಭಿಸಿದ್ದಳು. ಆದರೆ ಯಾರಿಗೂ
ತೋರಿಸುತ್ತಿರಲಿಲ್ಲ. ಎಂಟು ವರುಷದ ಹುಡುಗಿ ಬರೆಯುವ ಕವಿತೆಗಳಲ್ಲಿ