ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೬೨
ನಡೆದದ್ದೇ ದಾರಿ

ಆ ಹಾಡು ಹಾಡುತ್ತಿರುವಾಗ, ಆ ಹಾಡಿನ ಭಾವವನ್ನು ತನ್ನ ಕಣ್ಣಿನ ಬೆಳಕಿನಲ್ಲಿ ಹುಡುಕಬಯಸುವಷ್ಟು ಹುಚ್ಚು ಕಲ್ಪನಾಜೀವಿ ಹರೀಶ. ಎಷ್ಟೋ ಸಲ ತಾನು ಆ
ಹಾಡು ಹಾಡಿ ಮುಗಿಸಿ ಸುಂದಾಗಿ ಕೂತಾಗ ತನ್ನ ಕಡೆ ಬೆನ್ನು ಮಾಡಿ ನಿಂತು, ದೂರ
ಎಲ್ಲೋ ನೋಡುತ್ತ, ನೊಂದ ದನಿಯಲ್ಲಿ ತನಗೆ ಹೇಳಿರಲಿಲ್ಲವೆ ಆತ ? - “ಸರಯೂ,
ನಿನ್ನ ಈ ಹಾಡು ಕೇಳಿದಾಗೆಲ್ಲಾ ನನಗೆ ಒಂದು ಥರಾ ಅಸಮಾಧಾನ ಅನಸ್ತದ, ಸ್ಪಷ್ಟ
ಮಾತಾಡತೀನಿ ಅಂತ ಕೆಟ್ಟನಿಸಿಗೋ ಬ್ಯಾಡ. 'ನಾನೇ ವೀಣೆ ನೀನೇ ತಂತಿ' ಅಂತ ನೀ
ಹಾಡತೀಯಲಾ, ಆವಾಗ ನಾನs ತಂತಿ ಅಂತ ನಂಬಬೇಕು ಅನಸ್ತದ ನನಗ. ಆದರ
ನಿನ್ನ ನೋಡಿದರ "ನೀನೇ ತಂತಿ' ಅಂತ ನೀನು ಬ್ಯಾರೆ ಯಾರಿಗೋ
ಹೇಳಲಿಕ್ಹತೀಯೇನೋ ಅಂತನಸ್ತದ. ಹೀಂಗ್ಯಾಕ ಆಗತದನಬೇಕು ?"
“ನೀ ಹೀಂಗೆಲ್ಲಾ ವಿಚಾರ ಮಾಡಿದರ ನಾ ಏನು ಹೇಳಿ ಹರೀಶ ? ನನ್ನ
ಸಲುವಾಗಿ ನಿನಗ ಏನೇನರs ಅನಿಸಿದರೆ ಅದೂ ನಂದೇ ತಪ್ಪೇನು ?"
'ಛೇ, ತಪ್ಪಲ್ಲ ಸರೂ, ಆದರ ನನಗ್ಯಾಕೋ ಈ ನಿನ್ನ ಹಾಡು ಕೇಳಿದಾಗೆಲ್ಲ
ಈ ಸಮಸ್ಯಾ ಬರತದ ನೋಡು."
“ಬಿಡು, ನಾ ಇನ್ನಮ್ಯಾಲ ಹಾಡೋದೇ ಇಲ್ಲ."
“ನೀ ಅದನ್ನ ಬಾಯಿಬಿಟ್ಟು ಹಾಡದಿದ್ರೇನಾತು, ನನಗ ನಾನು ತಂತಿ ಅಂತ
ವಿಶ್ವಾಸ ಹುಟ್ರೋತನಕಾ ಈ ಸಮಸ್ಯಾ -ಒಗಟು ಬಗೀಹರಿಯೂದಿಲ್ಲ."
“ನೀ ಬರಬರತ ಭಾಳs ಸೆಂಟಿಮೆಂಟಲ್ ಆಗಲಿಕ್ಹತ್ತೀ ಹರೀಶ, ಸ್ವಲ್ಪ
ಭೂಮಿಗೆ ಇಳದ ಬಾ ಇನ್ನ."
-ಯಾಕೋ ಈ ವಿಷಯವನ್ನು ಮುಂದುವರೆಸುವುದು ಅವಳಿಗೆ
ಇಷ್ಟವಿಲ್ಲ. ಈ 'ತಂತಿ'- 'ವಿಶ್ವಾಸ'-'ಸಮಸ್ಯೆಗಳು' ಅವಳನ್ನು ವಾಸ್ತವಿಕತೆಯಿಂದ
ದೂರ ಎಳೆದೊಯ್ದು ಆ ಹಿಂದಿನ ಕನಸಿನ ಲೋಕದಲ್ಲಿ ಬೀಸಾಡುತ್ತವೆ. ಪ್ರಯತ್ನ
ಪಟ್ಟು ಮರೆಯತೊಡಗಿರುವ ಆ ಹಳೆಯ ದಿನಗಳಿಂದ ಸಾಧ್ಯವಾದಷ್ಟು ದೂರ
ದೂರವಾಗಬೇಕೆಂದು ಅವಳಿಗೆ ಆಸೆ. ಹಳೆಯದರಿಂದ ದೂರ.... ಹೊಸದಕ್ಕೆ ಸಮೀಪ....
-ನೀನೇ ತಂತಿಯೆಂಬ ನಂಬಿಗೆಯನ್ನು ಹರೀಶನಲ್ಲಿ ಹುಟ್ಟಿಸುವುದು ಹೇಗೆ ?
ಅದಕ್ಕೆ ಮೊದಲು ತಾನು ಹಾಗೆ ನಂಬಬೇಕು, ಹರೀಶನೇ ತಂತಿ ಎಂದು ತನ್ನ ವೀಣೆಯ
ಗಾನಕ್ಕೆ ಆತನೇ ಸ್ವರ ಎಂದು ; ಆತ ಬರಿ ಕುಂಬಳಕಾಯಿ ಅಲ್ಲವೆಂದು ;
ಮದುವೆಯಾದ ಹೊಸದರಲ್ಲಿ ಹಾಗೆ ನಂಬಲು ತಾನು ಪ್ರಾಮಾಣಿಕವಾಗಿ
ಪ್ರಯತ್ನ ಮಾಡಿದ್ದಳು. ಆ ಪ್ರಯತ್ನದಲ್ಲಿ ಯಶಸ್ಸು ದೊರೆಯತೊಡಗಿದೆಯೆಂದೂ
ಅನಿಸಿತ್ತು. ಆದರೆ ಅದೆಲ್ಲ ಭ್ರಮೆಯೆಂಬ ತೀವ್ರ ಅರಿವು ಇತ್ತೀಚೆ ಉಂಟಾಗತೊಡಗಿದೆ.