ಈ ಭ್ರಮೆ ಸಥ್ಯವೆನಿಸುವಷ್ಟು ತೀಕ್ಷ್ಣವಾಗಿದ್ದ ಕ್ಷಣಗಳಲ್ಲಿ ಅಕಸ್ಮಾತ್ ಶ್ರುತಿ ತಪ್ಪಿ ಗಾನದಲ್ಲಿ ಅಪಸ್ವರ ಕೇಳಿಬಂದ ಅನುಭವವಾಗುವುದು. ಎಲ್ಲ ಬಿಟ್ಟು ದೂರ, ಮತ್ತೆ ಆ ಹಳೆಯ ಜಗತ್ತಿಗೆ ಓಡಿಹೋಗಬೇಕು ಎನಿಸುವುದು. ಹಿಂದೇ ಆದದ್ದೆಲ್ಲಾ ಮತ್ತೊಮ್ಮೆ ಆಗಬೇಕು ಎನಿಸುವುದು. ಎಲ್ಲರಿಂದ ಬೈಯಿಸಿಕೊಳ್ಳುವ ಹಾಗೆ, ದೂರಗೊಳಿಸಲ್ಪಡುವ ಹಾಗೆ, ಎಲ್ಲರೂ ಅತ್ಯಾಶ್ಚರ್ಯ ಪಡುವ ಹಾಗೆ ಏನಾದರೊಂದನ್ನು ಮಾಡಬೇಕೆನಿಸುವುದು...ಬರೇ ಅನಿಸುವುದು...
-ಹೇಗೆ ನಂಬುವುದು ಹರೀಶನೇ ತಂತಿ ಎಂದು?
'ಸರೊ, ನಾನ ತಂತಿ ಅಂತ ನೀ ನಂಬಿಯಲಾ, ಇದನ್ನು ಉಳಿಸಿಕೊಂಡು ಹೋಗೋದು ಎಷ್ಟ ಕಠಿಣ ಅನ್ನೊದರ ಕಲ್ಪನೆ ಅದs ಏನು ನಿನಗ ? ಸುಮನ ನಾವು ದೂರ ದೂರ ಇರೋದೇ ಸರಿ ಅನ್ನುಸ್ತದ ನನಗ.'
-ಎಂದು ಹೇಳಿದ್ದ ಅವನು ಹಿಂದೆ; ಅವನು, ತಾನು ತನ್ನ ತಂತಿ ಎಂದು ತಿಳಿದುಕೊಂಡವನು...
ತನ್ನ ತಂತಿ, ಎಂಥ ತಂತಿ?
-ಶ್ರುತಿ ಮಾಡಿ ತಂಬೂರಿಗೆ ಜೋಡಿಸಿದರೆ ಮಧುರ ಗಾನ ಹೊರಡಿಸಬಹುದಾಗಿದ್ದ ತಂತಿ. ಆದರೆ ಹಾಗಾಗದೆ ಯಾಕೋ ಎಂತೋ (ಹಿಂದಿನ ಜನ್ಮದ ಕರ್ಮಕ್ಕಾಗಿ ಇರಬಹುದೇ?) ಬೀದಿಯಲ್ಲಿನ ಎಲೆಕ್ಟ್ರಿಕ್ ದೀಪದ ಕಂಭಕ್ಕೆ ಬಿಗಿಯಲಟ್ಟಿದ್ದ ತಂತಿ.
ಯಾಕೆ ಹಾಗಾಯಿತು
ಬಹುಶಃ: ತಾವಿಬ್ಬರೂ ಭೆಟ್ಟಿಯಾದದ್ದೇ ತಪ್ಪು ಗಳಿಗೆಯಲ್ಲಿ ; ಪರಸ್ಪರರ ದಾರಿಗಳು ಬೇರೆ-ಬೇರೆ ಎಂದು ನಿರ್ಧಾರವಾಗಿ ಹೋದ ನಂತರ; ಅರ್ಧದಾರಿಯಿಂದ ತಿರುಗಿ ಬರುವುದು ಆಗದೆ, ಮುಂದರಿಯಲೂ ಆಗದೆ, ತಿರುಗಿತಿರುಗಿ ನೋಡುತ್ತ ಎಡವುತ್ತ ಮುಗ್ಗರಿಸುತ ಹೊರಟಿದ್ದ ಅವನು ಹೌದು; ಅವನ ಪ್ರೀತಿ ಸುಡುವ ಬೆಂಕಿಯಂಥದಲ್ಲ; ಅದರದು ಶೀತಲ ತೀವ್ರತೆ, ಅದು ಯಾವಾಗಲೂ ಇದೆ, ಇದ್ದೇ ಇರುತ್ತದೆ ಎಂದು ತನಗೆ ಗೂತ್ತಿದರು ಅದೆಂದೂ ಜೀವಂತವಾಗಿದೆ ಎನ್ನಿಸುವುದಿಲ್ಲ; ಸತ್ತು ಹೋಗಿದೆ ಎಂದೂ ಅನ್ನಿಸುವುದಿಲ್ಲ; ಅದು ನಿಶ್ಚೇಷ್ಟಿತವಾಗಿ ಬಿದ್ದುಕೊಂಡಿದೆ ಅನ್ನಿಸುವುದು. ಅಂತೆಯೇ ಅದಕ್ಕೆ 'ಪ್ಲೇಟೋನಿಕ್' ಎಂದು ಶುದ್ದವಾಗಿ ಮಡಿಯಾಗಿ ಹೆಸರಿಸಿ, ಆದರ ಭಾರ ಹೊರುವುದರಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದಿರಬೇಕು ಅವನು.