ಅಲ್ಲ ; ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಹರೀಶನ ಮಗುವಿಗಾಗಿ?... ಹೌದು,
ಅದಕ್ಕಾಗಿ ತಾನು ಸ್ಥಿ ತಪ್ರಜ್ಞಳಾಗಬೇಕು ; ದಾಂಡೇಲಿಯ ಅಡವಿಯ ಕನಸು ಕಾಣಬಾರದು
ಹಳೇ ವಾದ್ಯಕ್ಕೆ ಹೊಸ ತಂತಿ ಹಾಕಿ ಹೊಸ ರಾಗ ಸುರು ಮಾಡಬೇಕು ;
ಹಿಂದಿನದೆಲ್ಲ ಬರಿ 'ಪ್ಲೆಟೋನಿಕ್' ಎಂದು ಮರೆತು ಬಿಡಬೇಕು; ಹಳೆಯ ಕತೆ ಎಂದು
ದೂರ-ದೂರ ಸರಿಸಿಬಿಡಬೇಕು....
ಆ ರಾತ್ರಿ ಎಂದಿನಂತೆ ಊಟದ ನಂತರ ಮಾಳಿಗೆಯ ಮೇಲೆ ಹರಟುತ್ತ ಕೂತಾಗ
ಸರಯೂ ಹರೀಶನಿಂದ ಹೇಳಿಕೊಳ್ಳದೆಯೇ ತನ್ನ ಪ್ರೀತಿಯ ಆ ಹಾಡು ಹಾಡಿದಳು.
ಹಾಡು ಮುಗಿದ ಕೂಡಲೆ ಹರೀಶ ಅವಳನ್ನು ಎದೆಗೊತ್ತಿಕೊಳ್ಳುತ್ತ ಅವಳ ಕಿವಿಯಲ್ಲಿ
ಪಿಸುನುಡಿದ, "ಸರೂ, ಇವತ್ತ - ಇವತ್ತ ಮಾತ್ರ ಮಾತ್ರ ನೀ ಹಾಡೋವಾಗ 'ನೀನೇ
ತಂತಿ' ಅಂತ ಅಗದೀ ಪ್ರಾಮಾಣಿಕ ಆಗಿ ಹೇಳಲಿಕ್ಹತ್ತೀ ಅಂತ ಅನಿಸಿತು. ಯಾಕೋ
ಗೊತ್ತಿಲ್ಲ. ಇನ್ನ ಮ್ಯಾಲ ಮಾತ್ರ ನಾನು ತಂತಿ ಅನ್ನೋ ಈ ನಂಬಿಕೆ ನಾ ಅಂತೂ
ಕಳಕೊಳ್ಳೊದಿಲ್ಲ. ಭಾಳ ದಿವಸದ ಮ್ಯಾಲ ಇವತ್ತ ನಾವು ಒಬ್ಬರಿಗೊಬ್ಬರು ಸಮೀಪ
- ಅಗದೀ ಸಮೀಪ ಬಂದೀವಿ ಅನಸ್ತದ. ನಾವು ಹೀಂಗ ಇರೋಣ ಸರೂ, ಏನಂತೀ?"
"ಹೂ ಹೂ" - ಕಣ್ಣು ಮುಚ್ಚಿದ್ದಳು ಸರಯೂ.
ಹರೀಶ ಸುಖವಾಗಿ ನಿದ್ರಿಸುತ್ತಿದ್ದಾನೆ. ಸರಯೂಗೆ ನಿದ್ರೆಯೇ ಬರಲೊಲ್ಲದು.
ಬೆಳಗಾಗುತ್ತ ಬಂದಿದೆ. ಆದರೆ ರಾತ್ರಿಯೆಲ್ಲ ವಿಪರೀತ ಮಳೆಯಾಗಿದ್ದರಿಂದ ಇನ್ನೂ
ಕತ್ತಲೋ ಕತ್ತಲು. ಹಾಸಿಗೆಯ ಮೇಲೆ ಮಲಗಿರುವುದು ಸಾಧ್ಯವಾಗದೆ ಅವಳು
ಸಾವಕಾಶವಾಗಿ ಎದ್ದು ಪಡಸಾಲೆಗೆ ಬಂದಳು. ಮೆಲ್ಲನೆ ನಡೆದು ಕಿಡಿಕಿಯ ಹತ್ತಿರವಿದ್ದ
ಗಿಳಿಯ ಪಂಜರದೆದುರಿಗೆ ಹೋಗಿ ನಿಂತಳು. ಕತ್ತಲಲ್ಲಿ ಅದರ ಕಣ್ಣುಗಳು ಪಳಪಳನೆ
ಹೊಳೆದವು. ಅದರ ಗಂಟಲಿನಿಂದ 'ಹರಿ ಹರಿ'ಯ ಬದಲು ಎಂಥದೋ ಹತ್ತಿಕ್ಕಿದಂಥ
ಗೊಗ್ಗರು ಧ್ವನಿ ಹೊರಡುತ್ತಲಿದೆ. ಏನು ಹೇಳುತ್ತಿದೆ ಈ ಗಿಳಿ ?
ತೆರೆದಿರಿಸಿದ್ದ ಕಿಡಿಕಿಯ ಬಾಗಿಲಿಂದ ಭರ್ರ್ ಎಂದು ತಣ್ಣನೆಯ ಗಾಳಿ ಒಳಗೆ
ಬೀಸಿ ಬರುತ್ತಲಿದೆ. ಕಿಡಿಕಿಯ ಸಲಾಕೆಗಳನ್ನು ಬಿಗಿಯಾಗಿ ಅದುಮಿದಳು ಸರಯೂ....
ಏ ಹುಡುಗನೇ, ಅಂದು-ಇಂದು-ಬಹುಶಃ ಮುಂದೂ ಸಹ-ನನ್ನ ವೀಣೆಯ
ತಂತಿಯಾದವನೇ, ಕೇಳು. ಹತ್ತು ವರುಷಗಳ ಹಿಂದೆಯೆ, ನನ್ನ-ನಿನ್ನ ಜೀವನದಲ್ಲಿ
ಬೇರೆಯವರ ನಿರುಪಯೋಗಿ ಪ್ರವೇಶ ಆಗುವ ಮೊದಲೆ, ಅಂದರೆ ನಾನಿನ್ನೂ ನನ್ನ
ವೀಣೆಯನ್ನು ಶ್ರುತಿ ಮಾಡುವ ಹಾಗೂ ನೀನು ಎಲೆಕ್ಟ್ರಿಕ್ ಕಂಭಕ್ಕೆ ಬಿಗಿಯಲ್ಪಡುವ