ದಿನಾ ಮನೆಯಲ್ಲಿ ಎರಡು ಮಕ್ಕಳ ಕೂಡ ದಾರಿ ಕಾಯುವ ಹೆಂಡತಿಯ ಕಡೆ
ಹೋಗುವುದು ಬಿಟ್ಟು ಸೀದಾ ನನ್ನ ಕಡೆ ಬರುತ್ತಿದ್ದುದುಂಟು. ಎಲ್ಲ ಸರಿಯಾಗೇ
ನಡೆದಿತ್ತು. ಇನ್ನೂ ಸ್ವಲ್ಪ ದಿನ ಹಾಗೇ ನಡೆದಿದ್ದರೆ ಅವನ ಮಡಿವಂತಿಕೆಯ
ವಿಚಾರಗಳನ್ನೆಲ್ಲ ಅವನ ಓದಿ-ಓದಿ ಬೊಕ್ಕವಾಗತೊಡಗಿರುವ ಆ ತಲೆಯಿಂದ ಹೊರಗೆ
ಹಾಕಿ ಅವನನ್ನು ದಾರಿಗೆ ತರುವುದು ನನಗೆ ಶಕ್ಯವಾಗಲೂ ಬಹುದಿತ್ತು. ಆದರೆ
ಅಷ್ಟರಲ್ಲೇ, ವಿನಯನೇ ಹೇಳುವ ಹಾಗೆ,ನಾನು ಅವನ ಹೃದಯ ಹೊಸಕಿ ಹಾಕಿದ್ದೆ.
ಕಾರಣ-ಡಾಕ್ಟರ್ ಗೋವಿಂದಮೂರ್ತಿಯೊಂದಿಗಿನ ನನ್ನ ಸ್ನೇಹದ ಬಗ್ಗೆ
ನಾನು ಅವನಿಗೆ ಏನೂ ಹೇಳಿರಲಿಲ್ಲ ಎಂಬುದು.
-ವಿನಯನನ್ನು ಮೋಸಗೊಳಿಸಲು ನಾನೆಂದೂ ಉದ್ದೇಶಿಸಿರಲಿಲ್ಲ . ಆದರೂ
ಅವನಿಗೆ ನಾನು ಯಾರ ಬಗ್ಗೆಯೂ ಹೇಳಿರಲಿಲ್ಲವೇಕೆ ?
ವಿನಯ ಅಥೆಲೋನಂತಹ ಕಟ್ಟಾಪ್ರೇಮಿ. ಪ್ರೀತಿ, ಆತ್ಮ, ಜನ್ಮಾಂತರದ ನಂಟು
ಇತ್ಯಾದಿ ಬಗ್ಗೆ, ದೇಹಗಳ ನಶ್ವರತೆಯ ಹಾಗೂ ಭಾವನೆಗಳ ಶಾಶ್ವತತೆಯ ಬಗ್ಗೆ ಅವನು
ಲೆಕ್ಚರ್ ಕೊಡುವಾಗೆಲ್ಲ ನನಗಿದು ಚೆನ್ನಾಗಿ ಗೊತ್ತಾಗಿತ್ತು. ಮಾತಿನಿಂದ, ಕೇವಲ
ಮಾತಿನಿಂದ, ಅದೂ ಸಹಾ ಯಾವಾಗಲೂ ಒಂದೂವರೆ ಫೂಟು ದೂರವೇ ಕೂತು
ಆಡುವ ಮಾತಿನಿಂದ ಅವನಿಗೆ ನನ್ನನ್ನು ಮುಗಿಲಲ್ಲಿ ತೇಲಿಸಬಲ್ಲ ಸಾಮರ್ಥ್ಯವಿತ್ತು.
ಅಂಥ ವಿನಯನನ್ನು ಸುಮ್ಮನೆ ಕಳೆದುಕೊಳ್ಳುವುದೆ ? ಅವನಿಗೆ
ಗೋವಿಂದಮೂರ್ತಿಯಂಥ 'ಛಿ, materialistic' ಮನುಷ್ಯನ ಬಗ್ಗೆ ಹೇಳುವುದೆ ?
'ಆಯಿತು, ನಾ ಇನ್ನ ಹೋಗ್ತೀನಿ. ಛಲೋ ಪಾಠ ಕಲಿಸಿದಿ. ನಿನ್ನಿಂದ ನನ್ನ
ಜೀವನಕ್ಕ ಆದ ಈ ಆಘಾತ ನಾ ಸಾಯೋತನಕಾ ನನ್ನ ಕೊಲ್ಲತಾನೇ ಇರತದ
ಅನ್ನೋದು ಮರೀಬ್ಯಾಡ. ನಂದೇ ತಪ್ಪು. ನಾನೇ ಸರ್ವಸ್ವ ಅಂತ ನಂಬಿದ ಹೆಂಡತೀ
ಬಿಟ್ಟು ನಿನ್ನ ಬೆನ್ನು ಹತ್ತಿದೆ. ದೇವರು ಛಲೋ ಶಿಕ್ಷಾ ಕೊಟ್ಟ.'-ಇಷ್ಟಂದು ದಾಪುಗಾಲು
ಹಾಕುತ್ತ ಹೊರಟು ಹೋಗಿದ್ದ ವಿನಯ- ಅವನೇ ಸರ್ವಸ್ವವೆಂದು ತಿಳಿದಿದ್ದ
ಹೆಂಡತಿಯ ಕಡೆ- 'ನೀನೇ ಸರ್ವಸ್ವ'ವೆಂದು ಹೇಳುವಾಗ ಮರೆತಿದ್ದ ಹೆಂಡತಿಯ ಕಡೆ.
ಇಂದು ಎಷ್ಟು ದಿನಗಳ ನಂತರ ಭೆಟ್ಟಿಯಾದ. 'ಲಿಲಿ, ನಿನ್ನ ಮರೆಯೂದು
ಆಗಲಿಲ್ಲ ನನಗ. ನಾ ಜೀವನದಾಗ ಒಮ್ಮೆಯೆ ಪ್ರೀತಿ ಮಾಡಿದೆ. ಅದು ನಿನ್ನನ್ನ. ನೀ
ಹೇಗೆಯೇ ಇರು- ಅದು ಬದಲಾಗುವುದಿಲ್ಲ' ಅಂದ. 'ಇದೇ ಖರೆ ಪ್ರೀತಿಯ ಲಕ್ಷಣ'-ಅಂತ ವಿವರಣೆ ಸಹ ಕೊಟ್ಟ.
ವಿನಯನಿಂದ ಉಪಯೋಗವಾದೀತು ಅನ್ನಿಸುತ್ತಿದೆ....