ಮಧ್ಯಾಹ್ನ ಇಂದು ಎಷ್ಟು ಆರಾಮು ನಿದ್ದೆ ಹತ್ತಿತ್ತು. ಎಷ್ಟೋ ದಿನಗಳಿಂದ ಮಧ್ಯಾಹ್ನ ಮಲಗಿರಲಿಲ್ಲ. ಇವತ್ತು ಸತ್ತಂತೆ ನಿದ್ದೆ ಮಾಡಿದೆ. ಆಫೀಸಿನ ಚಿಂತೆಯಿಲ್ಲ. ಅಕೌಂಟಿನ ಚಿಂತೆಯಿಲ್ಲ. ಮತ್ತು ಹ್ಞಾ, ಮುಖ್ಯವಾಗಿ ಆ ಗಡ್ಡದ ಬಾಸ್‌ನ ಚಿಂತೆಯಿಲ್ಲ.
ನಾನು ಕ್ಷಮೆ ಕೇಳುತ್ತೀನಿ, ಅವನು ಹೇಳಿದ ಹಾಗೆ ಕೇಳುತ್ತೀನಿ- ಅಂತ ತಿಳಿದಿದ್ದ ಆ ಸಾಬ.'ಇಲ್ಲಿ ನೋಡು ಲಿಲಿ, ನಿನ್ನನ್ನ ಕೆಲಸದಿಂದ ಡಿಸ್‌ಮಿಸ್ ಮಾಡಿದ ಆರ್ಡರ್ ಬಂದಿದೆ-ಜನರಲ್ ಮ್ಯಾನೇಜರ್‌ರಿಂದ'-ಅಂದ, ನನ್ನನ್ನೇ ನೋಡುತ್ತ.
ನನಗೆ ಗೊತ್ತಿರಲಿಲ್ಲವೆ ಅದರ ಇತಿಹಾಸ? ಯಾರು ನನ್ನ ಬೇಜವಾಬ್ದಾರಿಯ ಬಗ್ಗೆ, ನಡತೆಯ ಬಗ್ಗೆ ದೂರು ಕೊಟ್ಟಿದ್ದರೆಂದು, ಯಾಕೆ ಕೊಟ್ಟಿದ್ದರೆಂದು ಎಲ್ಲ ಪುಷ್ಪಾ ಕುಲಕರ್ಣಿ ಹೇಳಿದ್ದಳು. ಈ ಬಾಸ್‌ನ ಪಿ. ಎ ಅಲ್ಲವೆ ಆಕೆ.
'ವಿಚಾರ ಮಾಡು ಲಿಲಿ, ನಿನ್ನ ಕೆಲಸ ಉಳಿಸಿಕೊಡ್ತೀನಿ ಅಲ್ಲಾಕೆ ಕಸಮ್'- ನನಗೆ ಬೇಕಾಗಿರಲಿಲ್ಲ. ಈ ಬಾಸ್‌ನ ಟಿ. ಬಿ ಹೆಂಡತಿ ಊರಿಗೆ ಹೋದಾಗಲೆಲ್ಲ ಅವನ ಹಾಸಿಗೆಯ ಸಂಗಾತಿಯಾಗುವುದು. ಅದೂ ಸಹ ಅದರಿಂದ ಏನೂ ಉಪಯೋಗವಾಗದೇ ಇರುವಾಗ, ಬರೇ ಈ ನೌಕರಿಯ ಸಲುವಾಗಿ ಅವನ ಕುರುಚಲು ಗಡ್ಡ-ಅವನ 'ಅಲ್ಲಾಕೆ ಕಸಮ್' ಸಹಿಸುವುದು ನನಗೆ ಬೇಕಾಗಿರಲಿಲ್ಲ.
ಮನೆಗೆ ಬಂದಾಗ ಮೈ-ಮನಸ್ಸು ಭಾರ-ಭಾರ. ಗಾಢ ನಿದ್ದೆ ಬಂತು.... ಕನಸಿನಲ್ಲಿ ಯಾರೋ ನನ್ನನ್ನು ಗಟ್ಟಿಯಾಗಿ ಎದೆಗೊತ್ತಿಕೂಂಡ ಹಾಗೆ; 'ನಾ ಇದ್ದೀನಿ ನಿನ್ನ ಕೂಡ. ಎಂದೂ ನಿನ್ನ ಕೈಬಿಡೋದಿಲ್ಲ. ನಿನಗೆ ಬೇಕಾದ್ದೆಲ್ಲ ಕೊಡ್ತೀನಿ. ಹ್ಞಾ, ಮಗು ಕೂಡ. ಎಷ್ಟು ಬೇಕು ಹೇಳು? ಒಂದು? ನಾಲ್ಕು? '-ಅಂದ ಹಾಗೆ.
ಯಾರದು ಆ ಬಿಗಿಯಾದ ಅಪ್ಪುಗೆ? ಆ ಬೀಸಾದ ತೋಳುಗಳು?
-ಎಷ್ಟೊತ್ತು ಕಂಡೆನೋ ಇದೇ ಕನಸನ್ನ! ನನ್ನ ಸುತ್ತಲೆಲ್ಲ ಸಣ್ಣ-ಸಣ್ಣ ಮಕ್ಕಳು. ಎಷ್ಟೊಂದು ಮುದ್ದಾಗಿದ್ದ ಮಕ್ಕಳು....ಎಲ್ಲ ನನ್ನವೇ. ಅವುಗಳ ಮಧ್ಯೆ ಆ ಮಕ್ಕಳನ್ನು ನನಗೆ ಕೂಟ್ಟ ಆ ಅಗಲ ಎದೆಯ ಗಂಡಸು-
-ಯಾರು?
ಫಕ್ಕನೆ ಎಚ್ಚರವಾಗಿತ್ತು.
ಛಿ, ವಿನಯ ಸಾಳಕಾರ ತೀರ ಹೇಡಿ.ತೀರ ನಿರುಪಯೋಗಿ.ಅವನ ಫಿಲೊಸೊಫಿ, ಅವನ ಪ್ಲೆಟೋನಿಕ್ ಪ್ರೀತಿ, ಅವನ ವಾದ- ಎಲ್ಲ bogus.