ಪುಟ:ನಡೆದದ್ದೇ ದಾರಿ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೮೪

ನಡೆದದ್ದೇ ದಾರಿ

“ನೀ ಕಾಲೇಜಿನ್ಯಾಗಿದ್ದಾಗ ಎಷ್ಟ ಛಂದ ಕವಿತಾ ಬರೀತಿದ್ದೆಲ್ಲ ? ಎಲ್ಲಾರೂ
ಹುಚ್ಚ ಹುಚ್ಚ ಆಗತಿದ್ರು, ನಿನ್ನ ಕವಿತಾ ಓದಿ. ಈಗ್ಯಾಕ ಒಮ್ಮಿಲಿಗೇ ಎಲ್ಲಾ
ಬಿಟ್ಟುಬಿಟ್ಟಿ ?' -ಶಶಿ ಕೇಳಿದ್ದಳು.
ದೇಶಾವರಿ ನಗೆ ನಗುತ್ತ ಉತ್ತರಿಸಿದ್ದೆ, 'ಹಹ್ಹೆ, ಈಗ ಟೈಮೇ ಸಿಗೂದಿಲ್ಲ.'
'ಆದರ ಇವರ ಪತ್ರಿಕಾಕ್ಕೆ ನೀ ಒಂದು ಕವಿತಾ ಕೊಡಲಿಕ್ಕೇ ಬೇಕು ನೋಡು.
ನಾನು ಇವರಿಗೆ ಪ್ರಾಮಿಜ್ ಮಾಡೀನಿ ನಿನ್ನ ವತಿಯಿಂದ ಇನ್ನೂ ದಿವಸ ಅವ. ನೀ
ಹೊಸಾ ಕವಿತಾ ಬರಿ, ನಿನಗೇನು ಅದು ಅಸಾಧ್ಯ ಅಲ್ಲ. ನಿಂತನಿಂತಲ್ಲೇ ಕವಿತಾ ಬರದ
ಬಿಡ್ತಿದ್ದಿ ನೀ ಕಾಲೇಜಿನ್ಯಾಗಿದ್ದಾಗ,' - ಒಲೆಯ ಮೇಲೆ ಎಸರಿಟ್ಟು ಪುಡಿ-ಸಕ್ಕರೆ ಹಾಕಿ
ಇಳಿಸಿ ಹಾಲು ಬೆರೆಸಿದೊಡನೆ ತಯಾರಾಗಿಬಿಡುವ ಚಹಾದಷ್ಟೇ ಸರಳ ಇದೂ ಸಹ-
ಎಂಬಂತೆ ಮಾತಾಡಿದ್ದಳು ಶಶಿ, ಸಿಟ್ಟು ಬಂದಿತ್ತು. ತಾನೇ ಪ್ರಾಮಿಜ್ ಮಾಡಿದಳಂತೆ
ನನ್ನ ವತಿಯಿಂದ, ಯಾರು ಹೇಳಿದ್ದರು ಇವಳಿಗೆ ಇಂಥ ಕಾರಭಾರ ಮಾಡಲು ?
ಎಲ್ಲಕ್ಕೂ ಅಸಹ್ಯವೆಂದರೆ ಅವಳ ದನಿಯಲ್ಲಿ ಸ್ಪಷ್ಟ ಕಾಣುತ್ತಿದ್ದ ವಿಶ್ವಾಸ ; ತಾನು
ಕೇಳಿದಾಗ ನಾನು ಕೊಡದೇ ಏನು ಎಂಬ ನಿರ್ಲಕ್ಷ್ಮವಾದ ವಿಶ್ವಾಸ,
-'ನನಗೆ ಆಗೂದಿಲ್ಲ ಶತೀ, ಎಂದಾಗ ಅದಕ್ಕೆ ಏನೂ ಕಿಮ್ಮತ್ತು ಕೊಡದೆಯೆ
ಮುಂದುವರಿಸಿದ್ದಳಾಕೆ, 'ಛೇ ಛೇ, ಆಗೂದಿಲ್ಲ ಅನ್ನೋ ಮಾತೇ ಸುಳ್ಳು. ಎಷ್ಟು ಜನ
ಕೇಳಿದ್ರೂ ಎಲ್ಲಾರಿಗೂ ಕಳಿಸತಿದ್ದಿ. ಎಲ್ಲಾ ಕವಿಸಮ್ಮೇಳನದಾಗೂ ಓದತಿದ್ದಿ. ಎಷ್ಟು
ಕಲೆಕ್ಕನ್ನು ಪಬ್ಲಿಶ್ ಮಾಡಿದ್ದಿ ನೀ ಕಾಲೇಜಿನ್ಯಾಗಿದ್ದಾಗ-' ಅವಳ 'ನೀ
ಕಾಲೇಜಿನ್ಯಾಗಿದ್ದಾಗ' ಏನೋ ಒಜ್ಜೆಯಾಗಿ, ಏನೋ
ಮುಳ್ಳಿನಂತಾಗಿ, ಏನೋ ವಿಷವಾಯುವಾಗಿ, ತಲೆಯೇರಿ ಚುಚ್ಚಿ ಉಸಿರುಕಟ್ಟಿಸುವಂತಾಗಿ, ಹೇಗಾದರಾಗಲಿ
ಪಾರಾಗಬೇಕೆಂದು ಹೇಳಿದ್ದೆ, “ಆಗಲಿ ನೋಡೋಣ. ಇನ್ನೂ ಒಂದು ತಿಂಗಳ ಅವಧಿ
ಇದೆಯಲ್ಲ.'
ಅಂದು ಅವರಿಬ್ಬರೂ ಹೋದನಂತರ ಪುನಃ ಆ 'ನೀ ಕಾಲೇಜಿನ್ಯಾಗಿದ್ದಾಗ
ನೆನಪಾಗಿತ್ತು. ಅಂದಹಾಗೆ ಆಗೆಲ್ಲ ಎಷ್ಟೊಂದು ಬರೆಯುತ್ತಿದ್ದೆ....ಈಗೇಕೆ ಒಮೆಲೆ
ಎಲ್ಲ ಬಿಟ್ಟೆ ? ಬರೆಯಬೇಕು. ಮತ್ತೆ ಬರೆಯಲು ಸುರುಮಾಡಬೇಕು.
-ಇತಿಹಾಸಕ್ಕೆ ಗುಡ್ ಬೈ ಹೇಳಿದ್ದೆ ನಿಜ. ಆದರೆ ಈ ಬರೆಯುವುದು ನನ್ನ
ಇತಿಹಾಸದ ಅಂಗ ಮಾತ್ರವಾಗಿತ್ತೆ ? ಆದಕ್ಕೂ ಏಕೆ ಗುಡ್ ಬೈ ಹೇಳಿದ್ದೆ ಇಷ್ಟು ದಿನ ?
ಇನ್ನು ಬರೆಯಬೇಕು, ಅಂದರಾದರೂ ಈ ನಿರಂತರ ಶೂನ್ಯದ ಅನುಭವ
ಇಲ್ಲವಾದೀತು....
'ಯಾಕ, ಭಾಳ ಖುಶೀ ಕಾಣಸ್ತೀಯಲ್ಲ ಇವತ್ತ ?' - ಸಂಜೆ ದವಾಖಾನೆಯಿಂದ
ಬಂದ ಶ್ರೀನಿವಾಸ ಕೇಳಿದ್ದ.