ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೬
ನಡೆದದ್ದೇ ದಾರಿ

'ನನ್ನನ್ನು ನೋಡಿಯೂ ನೋಡಲಾರದಂತಿದ್ದಿ ನೀನು.'
'ಈಗೇಕೆ ಬಂದಿರುವಿ ?'
'ಕವನ ಬರೀಬೇಕು ಅಂತಿದ್ದಿಯಲ್ಲ ?'
'ಅದಕ್ಕೂ-ನಿನಗೂ ಸಂಬಂಧವೇನು ?'
-'ಹಹ್ಹಹ್ಹಾ' ಎಂದು ಗಹಗಹಿಸಿತು ಹೆಣ. ಕಣ್ಣು ಕೆಕ್ಕರಿಸಿ ಸಿಟ್ಟಾಗಿ ನೋಡಿದೆ,
'ನಗುತ್ತೀ ಏಕೆ ?'
'ಸಂಬಂಧ ಕೇಳಿದಿ. ಹಳೆಯ ಸಂಬಂಧ. ಹೋಗಲಿ ಬಿಡು. ನೀ ಕವನ ಬರೆಯಲು
ನನ್ನ ಸಹಾಯ ಬೇಕು. ಅದಕ್ಕೇ ಬಂದೆ.'
'ನೀನೇನು ಮಾಡುವ ಹಾಗಿದ್ದೀ ?'
'ನೀ ಕವನ ರಚಿಸುವುದು ಸಾಧ್ಯವಾಗಬೇಕಿದ್ದರೆ ಮೊದಲು ನನ್ನನ್ನು ಬದುಕಿಸು,
ನಾನು ಜೀವ ತಳೆದಾಗ ಮಾತ್ರ ನೀನು ಬರೆಯುವುದು ಸಾಧ್ಯ. ನಾನು ಹೆಣವಾಗಿರುವಾಗ ನೀನು ಏನೂ ಬರೆಯಲಾರಿ.'
'ನೀನು ತಪ್ಪು ತಿಳಿದಿರುವಿ. ನಾನು ಯಾರ ಸಹಾಯವಿಲ್ಲದೆಯೇ ಬರೆಯಬಲ್ಲೆ.
ನೀನು ಹೆಣವಾಗಿದ್ದರೇನು, ಬದುಕಿದ್ದರೇನು ? ನೀನು ಯಾರೋ ಏನೋ-'
'ನಾನು-'
'ನೀನು ಏನೇ ಆಗಿರು. ನನ್ನ ಸುದ್ದಿಗೆ ಬರಬೇಡ.'
'ಹಾಗಿದ್ದರೆ ನಿನ್ನ ಕವನ-'
'ಅದರ ಚಿಂತೆ ನನಗಿರಲಿ. ನೀನು ಹೊರಡು.'
'ಕವನದ ಚಿಂತೆ ನಿನಗಿದ್ದರೆ ನನ್ನ ಚಿಂತೆಯನ್ನೂ ನೀನು ಮಾಡಬೇಕಾಗುವುದು.
ನಾನು ಜೀವಂತವಾಗದ ಹೊರತು ಏನೂ ಬರೆಯಲಾರಿ ನೀನು.'
'ನೀನು ಹೆಣವಾಗಿದ್ದಾಗಲೇ ನಾನು ಕವನ ಬರೆಯುವೆ ನೋಡುತ್ತಿರು.'
'ಕವನದ ಹೆಣ ಬರೆಯಬಹುದು ಅಷ್ಟೆ.'
'ಶಟಪ್, ನನ್ನ ಕವನಗಳೆಂದಾದರೂ ಹೆಣವಾಗಿದ್ದವೆ ? ಹಿಂದೆ ಬರೆದವುಗಳೆಲ್ಲ
ಜೀವಂತ ಕವನಗಳಾಗಿರಲಿಲ್ಲವೇ ?'
'ಆಗಿನ ಮಾತು ಬೇರೆ. ನಾನು ಆಗ ಹೆಣವಾಗಿರಲಿಲ್ಲ.'
'ಹ್ಞೂ? ಹಾಗಿದ್ದರೆ ನಾನು ವಿಚಾರ ಮಾಡುವೆ ಈ ಬಗ್ಗೆ. ನಾಳೆ ಬಂದು
ಭೆಟ್ಟಿಯಾಗು'.
ಇಷ್ಟು ದಿನ ಎಲ್ಲಿತ್ತೋ, ಬಹಳ ದಿನಗಳ ನಂತರ ಒಂದು ಕವನ
ಬರೆಯಬೇಕೆಂದು ವಿಚಾರ ಮಾಡತೊಡಗಿದಾಗ ಈಗ ಪ್ರತ್ಯಕ್ಷವಾಗಿತ್ತು ಈ ಹೆಣ.