ಪುಟ:ನವೋದಯ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

418

ಸೇತುವೆ

“ಯಾರ ಅಭಿಪ್ರಾಯ?"
"ನಮ್ಮನ್ನು ಆಳುವವರದು."
"ಅವರು ಮುಠ್ಠಾಳರು. ನಾನ್ಹೇಳ್ತೀನಿ, ಅವರು ಮುಠ್ಠಾಳರು."
ಜಯದೇವ ನಿರುತ್ತರನಾಗಿ ಕುಳಿತು, ತಿಮ್ಮಯ್ಯನವರ ಮನೋವೇದನೆಯನ್ನು
ಅರ್ಥಮಾಡಿಕೊಳ್ಳಲು ಯತ್ನಿಸಿದ.
ತಿಮ್ಮಯ್ಯನೆ ಅಂದರು:
"ನಾನ್ಹೇಳ್ತೀನಿ ಜಯದೇವರೆ. ಈ ವಿದ್ಯಾಭ್ಯಾಸಕ್ರಮದಲ್ಲಿ ನಿಜವಾಗಿಯೂ
ಸುಧಾರಣೆಯಾಗ್ಬೇಕೂಂತ ನಿಮಗಿದೆಯೇನು? ಹಾಗಾದರೆ ಉಪಾಧ್ಯಾಯರಿಗೆ ಸಿಗೋ
ವೇತನ ಮೊದಲು ಜಾಸ್ತಿಮಾಡಿ. ಇಪ್ಪತ್ತೈದು ರೂಪಾಯಿ ತಲಬಿನ ಮೇಲೆ ಒಬ್ಬ
ನನ್ನು ನೇಮಿಸಿ 'ನೀನು ವಿದ್ಯಾಗುರು' ಅಂದರೆ ಆಗ್ಹೋಯ್ತೆ ಕೆಲಸ? ಹೊಟ್ಟೆ ಚುರ್
ಅಂದಾಗ ಅವನು ಗುರ್ ಅನ್ನದೆ ಇರ್‍ತಾನೇನು? ಉಟ್ಟ ಬಟ್ಟೆಗೆ ಸಾಬೂನು ಹಾಕೋ
ಸಾಮರ್ಥ್ಯ ಇಲ್ಲದವನಿಗೆ ಗೌರವ ಯಾರ್‍ರಿ ಕೊಡ್ತಾರೆ? ಪ್ರಾಥಮಿಕ ಉಪಾಧ್ಯಾಯರಿಗೆಲ್ಲ
ಸರ್ಕಾರ ಕೊಡುತ್ತಲ್ಲ ಈ ಇಪ್ಪತ್ತೈದು ರೂಪಾಯಿ-ಇದೇನು ಸಂಬಳವೊ? ಭಿಕ್ಷವೊ?"
"ನೀವು ಹೇಳೋದರಲ್ಲಿ ಸತ್ಯಾಂಶ ಇದೆ."
"ಅಂಶ ಎಂಥದು? ಅಲ್ಲಿ ಮಿಥ್ಯಾಂಶ ಇಲ್ಲವೆ ಇಲ್ಲ. ಪೂರ್ತಿ ಸತ್ಯವೇ. ಹೋದ
ಜನ್ಮದಲ್ಲಿ ಘೋರ ಪಾಪ ಮಾಡಿದವನೇ ಈ ಜನ್ಮದಲ್ಲಿ ಉಪಾಧ್ಯಾಯನಾಗೋದು."
ಜಯದೇವ ನಿಟ್ಟುಸಿರುಬಿಟ್ಟು ಹೇಳಿದ:
“ಇದು, ಸರಕಾರ ಮೊದಲು ಯೋಚಿಸ್ಬೇಕಾದ ಮುಖ್ಯ ಪ್ರಶ್ನೆ."
"ಆದರೆ ಆಳುವವರ ತಲೆಯೊಳಗಿರೋ ಮೆದುಳೇ ಬೇರೆ. ಏನ್ಮಾಡೋಣ
ಹೇಳಿ? ಇವರ ಈ ಸುಧಾರಣೆ ಇದೆಯಲ್ಲ, ಇದೆಲ್ಲ ಅಡಿಪಾಯ ಇಲ್ದೇನೇ ಅರಮನೆ
ಕಟ್ಟೋಕೆ ಮಾಡೋ ಯತ್ನ."
ಜಯದೇವ ಹೊರಗೊಮ್ಮೆ ನೋಡಿದ. ಬೆಳಕು ಕುಂದುತ್ತ ಬರುತಿತ್ತು.
ತಿಮ್ಮಯ್ಯನನ್ನು ಆತ ದಿಟ್ಟಿಸಿದ. ಕತ್ತಲಾಗುವುದರೊಳಗೆ ತಾನು ಹಳ್ಳಿ ಸೇರಬೇಕೆಂಬು
ದರ ಕಡೆಗೆ ಆತನ ಗಮನವೇ ಇದ್ದಂತೆ ತೋರಲಿಲ್ಲ. ಗೆಲುವಿಲ್ಲದ ಆ ಮುಖ ಕಪ್ಪಿ
ಟ್ಟಿತ್ತು. ಯೋಚನಾ ಮಗ್ನರಾಗಿ ನೆಲವನ್ನೇ ನೋಡುತ್ತಿದ್ದ ತಿಮ್ಮಯ್ಯ, ನಶ್ಯದ
ಡಬ್ಬಕ್ಕೆ ಕೈ ಹಾಕಿದರು. ನಶ್ಯ ಮೂಗಿಗೇರಿದೊಡನೆ ಹಣೆಯೊಮ್ಮೆ ನೆರಿಗೆ ಕಟ್ಟಿ ಶಿಥಿಲ
ವಾಯಿತು. ಅವರು ಜಯದೇವನತ್ತ ತಿರುಗಿದರು.
"ಎಷ್ಟೋ ಕಾಲವಾದ ಮೇಲೆ ಭೀಟಿಯಾಗಿ ಸಂತೋಷದಿಂದಿರೋಣ ಎಂದರೆ
ಏನೇನೋ ಮಾತಾಡ್ಬಿಟ್ಟೆ. ಬುದ್ಧಿ ಇಲ್ದೋನು ನಾನು."
"ಹಾಗ್ಯಾಕಂತೀರಿ? ಹೃದಯ ತೆರೆದು ಇಷ್ಟೆಲ್ಲ ಮಾತಾಡಿದೆವೂಂತ ನನಗೆ
ಸಮಾಧಾನವಾಗಿದೆ."