ಪುಟ:ನವೋದಯ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

419

"ಏನು ಮಾತಾಡಿದೆವೋ. ನೋಡಿ ಜಯದೇವರೆ, ವಯಸ್ನಲ್ಲಿ ಚಿಕ್ಕೋ
ರಾದ್ರೂ ನೀವು ನನಗೆ ಅಣ್ಣ ಇದ್ದ ಹಾಗೆ.”
"ಹಾಗೆಲ್ಲ ಹೇಳ್ಬಾರ್ದು."
"ಆಡಬಾರದ್ದು ಏನಾದರೂ ಅಂದಿದ್ರೆ ಕ್ಷಮಿಸ್ಬಿಡಿ."
"ಆಡಬಾರದ್ದು ನೀವು ಅಂದಿದ್ರೆ ತಾನೆ, ಕ್ಷಮಿಸೋ ಪ್ರಶ್ನೆ?"
ತಿಮ್ಮಯ್ಯನವರೂ ಬಾಗಿಲಿನತ್ತ ನೋಡಿದರು.
"ಇವತ್ತು ಸದ್ಯಃ ಮೋಡದ ಸುಳಿವಿಲ್ಲ. ಕತ್ತಲಾಗೋ ಹೊತ್ತಿಗೆ ಮನೆ
ಸೇರ್‍ತೀನಿ. ಟೈಮೆಷ್ಟಾಯಿತು?"
ತಿಮ್ಮಯ್ಯ ಜಯದೇವನ ಕೈಯತ್ತ ನೋಡಿದರು. ಅದು ಬರಿದಾಗಿತ್ತು.
ಜಯದೇವ ಕತ್ತು ಚಾಚಿ, ಹಜಾರದ ಕಂಭಕ್ಕೆ ಪೀಠ ಹೊಡೆದು ನಿಲ್ಲಿಸಿದ್ದ ಟೈಂಪೀಸನ್ನು
ದಿಟ್ಟಿಸಿ ಹೇಳಿದ:
"ಆರು ಘಂಟೆ."
ತಿಮ್ಮಯ್ಯನ ಬಳಿ ಹಿಂದೆಯೊಂದು ಕಿಸೆಗಡಿಯಾರವಿದ್ದುದು ನೆನಪಾಗಿ ಜಯ
ದೇವ ಕೇಳಿದ:
"ಎಲ್ಲಿ ನಿಮ್ಮ ಕಿಸೆ ಗಡಿಯಾರ?"
"ಅದೇ? ನನ್ನ ಮನೋರಮೆ ಹೋದ ಸಲ ಬಾಣಂತಿಯಾದಾಗ ಮಾರವಾಡಿ
ಕಟ್ಟೆಗೆ ಹೋಯ್ತು. ಸಾಯೋವರೆಗೂ ಬಿಡಿಸ್ಕೊಳ್ದೆ ಇದ್ದರೆ, ಆಮೇಲೆ 'ರಾಷ್ಟ್ರೀಯ
ವಸ್ತುಸಂಗ್ರಹಾಲಯದವರು ತಗೋತಾರೇ'೦ತ ಆ ಸೇಠ್ ಗೆ ಹೇಳಿದೀನಿ. ಪ್ರಾಥಮಿಕ
ಉಪಾಧ್ಯಾಯನ ಕಿಸೆ ಗಡಿಯಾರ-ಪ್ರದರ್ಶಿಸೋದಕ್ಕೆ ಬೇಕಾಗುತ್ತೆ ನೋಡಿ!"
"ಎಷ್ಟು ರೂಪಾಯಿಗೆ ಒತ್ತೆ ಇಟ್ಟಿರಿ?"
"ಭರ್ತಿ ಎರಡು ಕೈ."
"ಹತ್ತು ರೂಪಾಯಿನೆ?"
"ಹೂಂ. ಮಾರವಾಡೀನಾ ಜಾಸ್ತಿಕೊಡೋನು?"
ತಿಮ್ಮಯ್ಯ ಎದ್ದು ನಿಂತು ಹೇಳಿದರು:
"ನನಗಿನ್ನು ಅಪ್ಪಣೆ ಕೊಡಿ, ಹೊರಡ್ತೀನಿ."
ಕೆಲಸದ ನಡುವೆ ಆ ಸಂಭಾಷಣೆಗೂ ಕಿವಿಗೊಡುತ್ತಲಿದ್ದ ಸುನಂದಾ ಹೊರ
ಬಂದಳು.
"ಬರ್ತೀನಿ ತಾಯೀ," ಎಂದರು ತಿಮ್ಮಯ್ಯ.
ಜಯದೇವನೆಂದ:
"ಬಿಡುವಾದಾಗ್ಲೆಲ್ಲ ಭೇಟಿ ದಯಪಾಲಿಸಿ."
"ನಾನೂ ಒಬ್ಬ ಮನುಷ್ಯ ಅಂತ ನೀವು ಗೌರವ ತೋರಿಸ್ತಿದೀರಲ್ಲ. ಭೇಟಿ