ಪುಟ:ನವೋದಯ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

421

ಪಾಠ ಹೇಳುವಾಗಲೂ ತುಲನೆಮಾಡುವಾಗಲೂ ವಿದ್ಯಾರ್ಥಿಗಳ ಜಾತಿಗೇ
ಪ್ರಾಧಾನ್ಯ. ಅದನ್ನು ಎಂದಾದರೊಮ್ಮೆ ಬದಿಗೊತ್ತುತ್ತಿದ್ದುದು ದೊಡ್ಡ ಮನೆತನದ
ಪ್ರಶ್ನೆ ಬಂದಾಗ ಮಾತ್ರ. ಅಂತಹ ಸಂದರ್ಭಗಳಲ್ಲಿ ಜಾತಿಯನ್ನು ಮೀರಿಸಿ ನಿಲ್ಲುತ್ತಿತ್ತು
ಸಿರಿವಂತಿಕೆ.
ಜಯದೇವ ಭಾವಿಸಿದ್ದ, ಉಪಾಧ್ಯಾಯನ ವ್ಯಕ್ತಿತ್ವ ಅತಿ ಮುಖ್ಯವಾದುದೆಂದು.
ಆತನ ಅಚ್ಚಿನಲ್ಲೆ ಅಲ್ಲವೆ ನಾಳೆಯ ಪ್ರಜೆಗಳನ್ನು ಎರಕ ಹೊಯ್ಯುವುದು? ಆದರೆ
ಅನುಭವದಲ್ಲಿ ಕಂಡಂತೆ, ಅದು ಬರಿಯ ತತ್ತ್ವ. ಮಾತಿನಲ್ಲಿ ಆಡಬೇಕಾದುದು, ಕೃತಿ
ಯಲ್ಲಿ ತೋರಬೇಕಾದುದಲ್ಲ. ಗುರು ಶಿಷ್ಯರ ಸಂಬಂಧವಂತೂ ತರಗತಿಯ ಆವರಣ
ದೊಳಗೆ ಮಾತ್ರ. ಪ್ರಾಥಮಿಕ ಶಾಲೆಯಲ್ಲೂ ಅಷ್ಟೆ, ವಿಶ್ವವಿದ್ಯಾನಿಲಯದ ಮಟ್ಟ
ದಲ್ಲೂ ಅಷ್ಟೆ.
ಈ ಪರಿಸ್ಥಿತಿಯನ್ನು ಬದಲಾಯಿಸುವುದು ಅಗತ್ಯವಾಗಿತ್ತು. ಆದರೆ ಹೇಗೆ? ಆ
ಯಜ್ಞವನ್ನು ಆರಂಭಿಸಬೇಕಾದವರು ಯಾರು? ಎಲ್ಲಿ?
...ಸುನಂದಾ ಮನೆಯಂಗಳದಲ್ಲಿ ಮಲ್ಲಿಗೆ ಸೇವಂತಿಗೆ ಗುಲಾಬಿಗಳನ್ನು ನೆಟ್ಟಳು.
ಶಾಲೆಯ ಹೂದೋಟದಲ್ಲಿ ಜಯದೇವ ಕೈಯಾಡಿಸಿದ. ಮೇಲಿನಿಂದ ನೀರು
ಹೊಯ್ಯುತ್ತಿದ್ದ, ಆಕಾಶಮಾಲಿ. ಬಣ್ಣ ಬಣ್ಣದ ಹೂಗಳು ಬಣ್ಣದೆಲೆಗಳು ಹಸುರೆಲೆ
ಗಳು ರಮ್ಯವಾಗಿ ಬೆಳೆದುವು.
ಅದನ್ನು ಜಯದೇವ ಬಣ್ಣಿಸಿದಾಗಲೆಲ್ಲ ಸುನಂದಾ ಹೇಳುತ್ತಿದ್ದಳು:
"ಮನೆಗಿಂತ [ನನಗಿಂತ] ಶಾಲೆಯ ಮೇಲೆಯೇ ನಿಮಗೆ ಹೆಚ್ಚು ಪ್ರೀತಿ!"
ಶಾಲೆಯ ಪುಸ್ತಕ ಭಂಡಾರವನ್ನು ವ್ಯವಸ್ಥಿತಗೊಳಿಸಿದ, ಜಯದೇವ. ಈಗ
ಸಂಬಳ ತರಲೆಂದು ಪ್ರತಿ ತಿಂಗಳೂ ತಾಲ್ಲೂಕು ಕೇಂದ್ರಕ್ಕೆ ಹೋಗುತ್ತಿದ್ದವನು ಶಾಲೆಯ
ಜವಾನ. ಆದರೆ ಒಮ್ಮೆ ನಂಜುಂಡಯ್ಯನವರೇ ಸ್ವತಃ ಹೋಗಿ, ಆ ವರ್ಷದ ಮೀಸಲು
ಹಣವನ್ನೂ ವಿನಿಯೋಗಿಸಿ ಹೊಸ ಪುಸ್ತಕಗಳನ್ನು ತಂದರು. ಪುಸ್ತಕಗಳ ಆಯ್ಕೆ
ಸಮರ್ಪಕವಾಗಿರಲಿಲ್ಲ. ತಾನೇ ಹೋಗಿದ್ದರೆ ಚೆನ್ನಾಗಿತ್ತು ಎಂದು ಜಯದೇವ ಮನಸಿ
ನಲ್ಲೆ ಅಂದುಕೊಂಡ. ಕನ್ನಡದಲ್ಲಂತೂ ಅಗ್ಗದ ಸರಕೇ ಜಾಸ್ತಿ. ಬಣ್ಣ ಬಣ್ಣದ್ದು.
ಮೊದಲು ಓದಿ ನೋಡದೆ ಹುಡುಗರಿಗೆ ಕೊಡಲು ಅಂಜಿಕೆಯೇ. ಮಕ್ಕಳಿಗೋಸ್ಕರ
ವೆಂದು ಸೃಷ್ಟಿಯಾಗಿದ್ದ ಸಾಹಿತ್ಯ ಬಲು ಕಡಮೆ. ಆ ಊರಿನ ಒಬ್ಬನೇ ಒಬ್ಬ ಪತ್ರಿಕೆ
ವ್ಯಾಪಾರಿಯಲ್ಲಿ ಸಿಗುತ್ತಿದ್ದುದಂತೂ 'ಚಂದಮಾಮ' ಒಂದೇ.
'ನಾವಿರೋ ಹಾಗೆಯೇ ಇದೆ ನಮ್ಮ ಸಾಹಿತ್ಯವೂ ಕೂಡ,' ಎಂದು ತನ್ನಷ್ಟಕ್ಕೆ
ಜಯದೇವ ನುಡಿದ.
ಪುಸ್ತಕಗಳನ್ನು ಓದಲೆಂದು ಜಯದೇವ ಮನೆಗೊಯ್ದ. ಸುನಂದೆಗೆ ಹೊತ್ತು
ಕಳೆಯಲು ಆ 'ಕಥೆಪುಸ್ತಕ'ದ ಸಾಹಿತ್ಯ ಒಳ್ಳೆಯ ಸಾಧನವಾಯಿತು.
ಒಂದು ದಿನ ತರಕಾರಿ ತುಂಬಿದ ದೊಡ್ಡದೊಂದು ಚೀಲವನ್ನು ಜಯದೇವನ