ಪುಟ:ನವೋದಯ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

423

ಕುಡೀರಿ. ಮೂಲೇಲಿ ಮುಚ್ಚಿಟ್ಟಿರೋ ದೋಸೇನೂ ಇರ್ಬೇಕು. ತಿನ್ನಿ."
ಆ ಸಿಡುಕಿನ ಸ್ವರ ಸಹನೆಯಾಗದೆ ಜಯದೇವ ಕಟುವಾಗಿ ನುಡಿದ:
“ಸುನಂದಾ! ಏನಿದು?"
"ನನ್ನನ್ನ ಯಾಕೆ ಈ ಊರಿಗೆ ಕರೆಕೊಂಡು ಬಂದ್ರಿ, ಹೇಳಿ? ಮನೆ ಕಾವಲು
ಕಾಯೋ ಆಳೆ, ನಾನು?"
ಜಯದೇವ ಸಿಟ್ಟು ತಡೆಯಲಾಗದೆ ಆಕೆಯ ಎರಡೂ ಭುಜಗಳನ್ನು ಹಿಡಿದು
ಬಲವಾಗಿ ಕುಲುಕಿದ.
"ಸುನಂದಾ! ಏನಾಗಿದೆಯೆ ನಿನಗೆ?"
ಆಕೆ ಜಯದೇವನನ್ನು ಹಿಂದಕ್ಕೆ ತಳ್ಳಿದಳು. ಒಮ್ಮೆಲೆ ಅಳತೊಡಗಿದಳು.
ಕೊಠಡಿಗೆ ಹೋಗಿ ಹಾಸಿಗೆಯ ಮೇಲೆ ಉರುಳಿಕೊಂಡಳು.
ಏನು ಮಾಡಬೇಕೆಂಬುದೇ ಜಯದೇವನಿಗೆ ತೋಚಲಿಲ್ಲ. ಆಕೆಯ ಬಳಿಹೋಗಿ
'ತಪ್ಪಾಯ್ತು' ಎನ್ನಬೇಕೆ? ಯಾವ ತಪ್ಪು? ಎಂತಹ ತಪ್ಪು? ಆದುದಾದರೂ ಏನು
ಆಕೆಗೆ?
ಸ್ವಲ್ಪ ಹೊತ್ತು ಆಕೆಯನ್ನು ಹಾಗೆಯೇ ಇರಗೊಡಬೇಕೆಂದು ಜಯದೇವ
ನಿರ್ಧರಿಸಿದ. ತಾನು ಮುಖಕ್ಕೆ ನೀರು ಹನಿಸಲಿಲ್ಲ. ಕಾಫಿ ತಿಂಡಿಯಂತೂ ಬೇಕಾಗಿರ
ಲಿಲ್ಲ ಆತನಿಗೆ. ಬಾಗಿಲ ಬಳಿ ಕುಳಿತು, ತಂಗಾಳಿಗೆ ಮೈಯೊಡ್ಡುತ್ತ, ಸಂಜೆಗತ್ತಲು
ದಟ್ಟವಾಗುತ್ತಿದ್ದುದನ್ನು ನೋಡಿದ. ಎಲ್ಲೆಲ್ಲಿಯೋ ಸಂಚಾರ ಮಾಡುತಿದ್ದ ಮನಸ್ಸು
ಕ್ರಮೇಣ ಅಂತರ್ಮುಖಿಯಾಯಿತು. ತನ್ನನ್ನು ಕುರಿತು, ತನಗೆ ಆತ್ಮೀಯವಾದ
ಜೀವವನ್ನು ಕುರಿತು, ಯೋಚಿಸಿತು.
ತನ್ನನ್ನು ಚೆನ್ನಾಗಿ ತಿಳಿದವಳೇ ಸುನಂದಾ. ಆದರೆ, ತನ್ನೆಲ್ಲ ವಿಚಾರಗಳೂ
ಅಷ್ಟೇ ಆಗಾಧತೆಯಿಂದ ಆಕೆಯ ವಿಚಾರಗಳೂ ಆಗುವುದು ಸಾಧ್ಯವೆ? ತನಗಾದರೋ
ನೂರಾರು ವಿದ್ಯಾರ್ಥಿಗಳ ಒಡನಾಟವಿರುತ್ತಿತ್ತು ದಿನವೂ. ಆಕೆಗೆ? ನೆರೆಯವರೊಡನೆ
ಆಡಿದ ಮಾತನ್ನೇ ಆಡುತ್ತಲಿರುವ ಅವಕಾಶ ಮಾತ್ರ. ಮನೋರಂಜನೆಯಂತೂ
ಇಲ್ಲವೇ ಇಲ್ಲ. ರೇಡಿಯೋ ಕೊಳ್ಳೋಣವೆಂದರೆ, ಅದು ದುಡ್ಡಿನ ಬಾಬು. ಸಿನಿಮಾ_
ಹಳೆಯ ನೆನಪು, ಅಷ್ಟೇ. ನಾಟಕ_ವರ್ಷಕ್ಕೊಮ್ಮೆ ಮಾಧ್ಯಮಿಕ ಶಾಲೆಯ ವಾರ್ಷಿ
ಕೋತ್ಸವವಾದಾಗ. ಪುಸ್ತಕದ ಸಹವಾಸವೊಂದೇ ಎಷ್ಟು ಸಾಕು? ತಾನು ಬೇಗನೆ
ಬಂದಿದ್ದರೆ ಒಂದಷ್ಟು ದೂರ ಜತೆಯಾಗಿ ನಡೆದು ವಾಪಸು ಬರಬಹುದಿತ್ತು. ಒಂದು
ರೀತಿಯ ವಾಯು ವಿಹಾರ. ತನಗಾದರೋ ಧ್ಯೇಯಗಳೇ ಸಿಹಿಯಾದ ಆಹಾರ.
ಆಕೆಗೆ? ಸಂಬಳವನ್ನೇನೋ ಕೈಸೇರಿದೊಡನೆ ತಂದುಕೊಡುತ್ತಿದ್ದ. ವೆಚ್ಚದ ಉಳಿ
ತಾಯದ ಲೆಕ್ಕವಿಡುತ್ತಿದ್ದುದೆಲ್ಲ ಸುನಂದೆಯೇ. ಆದರೆ, ಆ ಅಲ್ಪ ಸಂಬಳದಲ್ಲಿ ಆಗು
ತ್ತಿದ್ದ ಉಳಿತಾಯವಾದರೂ ಎಷ್ಟು? ಏನನ್ನಾದರೂ ಕೊಳ್ಳಬೇಕೆಂಬ ಆಸೆಯೋ
ಏನೋ...ಅಥವಾ, ತಾನೂ ದುಡಿಯಬೇಕೆoದು, ಸಂಪಾದಿಸಬೇಕೆಂದು...