ಪುಟ:ನವೋದಯ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

424

ಸೇತುವೆ

ಯೋಚಿಸುತ್ತಿದ್ದಂತೆ ಮತ್ತಷ್ಟು ಬೇಸರವಾಯಿತು ಜಯದೇವನಿಗೆ.
ಹಿಂಬದಿಯಿಂದ ವಿದ್ಯುತ್ ಗುಂಡಿಯೊತ್ತಿದ ಸದ್ದು.
ಸುನಂದಾ ಎದ್ದು ಅಡುಗೆ ಮನೆಗೆ ಹೋದಳು. ಬಳಿಕ ಎಷ್ಟು ಹೊತ್ತಾದರೂ
ಆಕೆ ಹೊರ ಸುಳಿಯಲಿಲ್ಲ. ['ಅಡುಗೆ ಮಾಡುತ್ತಿರಬೇಕು.']
ಜಯದೇವ ಮೆಲ್ಲನೆದ್ದು ಹೊರಬಾಗಿಲಿಗೆ ಅಗಣಿಹಾಕಿ ಕೊಠಡಿಗೆ ನಡೆದ.
ಹಾಸಿಗೆ ಸುನಂದೆಯ ವಿಷಯ ಹೇಳಿತು. ತೋಯ್ದಿತ್ತು ದಿಂಬು. ಜಯದೇವ
ಹಾಸಿಗೆಯಮೇಲೆ ಕುಳಿತು ತೋಯ್ದುಭಾಗಗಳನ್ನು ಮುಟ್ಟಿ ನೋಡಿದ. ಸಂಕಟವೆನಿಸಿತು.
ದಿಂಬನ್ನು ಬದಿಮಗುಚಿ ಅದಕ್ಕೆ ತಲೆ ಇರಿಸಿದ. ಕಾಲು ಚಾಚಿ ಮಲಗಿದ.
ದೇಹ ಮನಸ್ಸು ಎರಡೂ ದಣಿದಿದ್ದುದರಿಂದ, ಆತನಿಗೆ ಅರಿವಿಲ್ಲದಂತೆಯೇ ನಿದ್ದೆ
ಬಂತು....
ಕೋಮಲವಾದ ಬೆರಳುಗಳು ಮೈಮುಟ್ಟುತ್ತಿದ್ದುವು. ಮಧುರವಾದ ಕಂಠ
ಹೇಳುತ್ತಿತ್ತು:
“ಏళి, ಊಟಕ್ಕೇಳಿ."
ಜಯದೇವ ಎಚ್ಚತ್ತು ಮಗ್ಗುಲು ಹೊರಳಿದ. ಆದರೆ ಅಲ್ಲಿ ಯಾರೂ ಇರಲಿಲ್ಲ.
ಕೊಠಡಿಯ ದೀಪ ಎ೦ದಿನ೦ತೆ ಮಂದವಾಗಿ ಉರಿಯುತ್ತಿತ್ತು. ರಾತ್ರೆ, - ಹಗಲಲ್ಲ.
ಎಷ್ಟು ಹೊತ್ತಾಯಿತೋ?
ಸುನಂದಾ ತನ್ನನ್ನು ಕರೆದು ಒಳಹೋಗಿರಬೇಕೆಂದು ಜಯದೇವ ಎದ್ದ.
ಎಂಟು ಗಂಟೆ! ಅಷ್ಟರ ವರೆಗೂ ಅಡುಗೆ ಮನೆಯಲ್ಲಿ ಒಂಟಿಯಾಗಿಯೆ ಹೊತ್ತು
ಕಳೆದಳೆ ಸುನಂದಾ?
ಹಜಾರದ ಒಳಬಾಗಿಲ ಬಳಿ ಜಯದೇವ ನಿಂತ.
ಹಿಂತಿರುಗಿ ನೋಡದೆಯೆ ಸುನಂದಾ ಹೇಳಿದಳು:
"ತಟ್ಟೆ ಇಡ್ತೀನಿ. ಕೈಕಾಲು ಮುಖ ತೊಳಕೊಂಡು ಬನ್ನಿ."
...ತಟ್ಟೆಯ ಮುಂದೆ ಕುಳಿತಾಗಲೂ ಮಾತಿರಲಿಲ್ಲ. ಮೌನ ಸರಿಯಲ್ಲವೆಂದು
ಜಯದೇವ ಹೇಳಿದ:
"ಬಡಿಸ್ಕೊಂಡು ನೀನೂ ಕೂತ್ಕೊ."
"ನಿಮ್ಮದಾಗಲಿ."
ಆತನ ಊಟವಾದೊಡನೆ ಆಕೆ ಹೇಳಿದಳು:
“ಅಡಿಕೆಪುಡಿ ಅಲ್ಲೇ ಇದೆ. ತಗೊಂಡ್ಬಿಡಿ."
ಜಯದೇವ ಅದರ ಗೊಡವೆಗೆ ಹೋಗಲಿಲ್ಲ. ಕೊಠಡಿಗೆ ನಡೆದು ಡಿ. ವಿ. ಜಿ.
ಯವರ "ರಾಜ್ಯಶಾಸ್ತ್ರ" ವನ್ನು ಕೈಗೆತ್ತಿಕೊಂಡ. ಓದಲು ಮನಸಾಗದೆ ಹಾಗೆಯೇ
ಕೆಳಕ್ಕಿರಿಸಿ, ಹಾಸಿಗೆ ಸರಿಪಡಿಸಿ, ಗೋಡೆಗೊರಗಿ ಕುಳಿತ.
ಸ್ವಲ್ಪ ತಡೆದು ಅಡಿಕೆಪುಡಿಯ ಡಬ್ಬದೊಡನೆ ಸುನಂದಾ ಬಂದಳು. ಆಕೆ ಕೇಳಿದಳು: