ಪುಟ:ನವೋದಯ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

328

ಸೇತುವೆ

ನಾಚಿಕೆಗೇಡು, ಯಾರಾದರೂ ನೋಡಿದರೋ ಏನೋ, ಎಂದು ಆತ ಅತ್ತಿತ್ತ ದೃಷ್ಟಿ
ಹೊರಳಿಸಿದ. ಅಂತಹ ವಿಶೇಷ ಆಸಕ್ತಿಯೇನೂ ಯಾರಿಗೂ ಅಲ್ಲಿ ಇರಲಿಲ್ಲ.
ಮಂಪರಿನ ಪರದೆ ಸರಿದು ಎಚ್ಚತ್ತು ಕುಳಿತ ಸುನಂದಾ ಕೇಳಿದಳು:
"ನೋಡೋಕೆ ಎಷ್ಟೊಂದು ಬೋಳುಬೋಳಾಗಿದೆ,ಅಲ್ವಾ?"
ಹಿಂದಕ್ಕೆ ಧಾವಿಸುತ್ತಿದ್ದ ಒಂಟಿಮರಗಳನ್ನು ನೆಲಹೊಲಗಳನ್ನೂ ನೋಡಿ ಜಯ
ದೇವ ಉತ್ತರವಿತ್ತ:
"ಹೂಂ. ಮಳೆ ಬರೋವರೆಗೂ ಹೀಗೆಯೇ. ಆ ಮೇಲೆ ಎಲ್ಲಾ ಹಸುರಾಗುತ್ತೆ.
ಆಗ ಚೆನ್ನಾಗಿರುತ್ತೆ, ನೋಡೋಕೆ."
....ನಿತ್ಯಾನಂದ ಸರ್ವಿಸಿನಲ್ಲಾಗಿದ್ದರೆ ಒಂದು ಗಂಟೆಯ ಪ್ರವಾಸ. ಸರ್ಕಾರಿ
ಬಸ್ಸು ಹತ್ತು ನಿಮಿಷ ಮುಂಚಿತವಾಗಿಯೆ ಊರು ಸೇರಿತು.
ಜಯದೇವನ ಹಿಂದೆಯೆ ಕುಳಿತಿದ್ದ ಮನುಷ್ಯ ಕೇಳಿದ:
"ಎಲ್ಲಿ ವಸತಿ ಮಾಡ್ತೀರಿ ಮೇಸ್ಟ್ರೆ?"
ಮುಖ್ಯೋಪಾಧ್ಯಾಯರಿಗೇನೋ ತಾನು ಬರುವ ವಿಷಯ ತಿಳಿಸಿ ಜಯದೇವ
ಕಾಗದ ಬರೆದಿದ್ದ. ಮನೆ ಸಿಗುವವರೆಗಿನ ತಾತ್ಕಾಲಿಕ ವ್ಯವಸ್ಥೆಯನ್ನು ಅವರು ಮಾಡಿ
ದ್ದರೂ ಮಾಡಿರಬಹುದು.
"ಎಲ್ಲೀಂತ ತೀರ್ಮಾನಿಸಿಲ್ಲ ಇವರೆ. ಸ್ಟ್ಯಾಂಡಿಗೆ ಯಾರಾದರೂ ಬಂದಿದಾ
ರೇನೊ ನೋಡ್ಬೇಕು."
ಬಸ್ಸು ನಿಂತು ಕೆಲವರಿಳಿದರು. ಸಾಮಾನುಗಳನ್ನು ಮೆಲ್ಲಗೆ ಇಳಿಸುವಂತೆ ಒಬ್ಬ
ಆಳಿಗೆ ಜಯದೇವ ನಿರ್ದೇಶವಿತ್ತ.
ಶಾಲೆಯ ಹುಡುಗರೇನಾದರೂ ಕಾಣಿಸುವರೇ ಎಂದು ಆತ ಅತ್ತಿತ್ತ ನೋಡಿದ.
ಒಬ್ಬನೇ ಆಗಿದ್ದರೆ ಯಾವ ಯೋಚನೆಯೂ ಇರಲಿಲ್ಲ. ಈಗ, ಸುನಂದೆಯೂ ಜತೆ
ಯಲ್ಲೆ ಇದ್ದಾಗ__
ಯಾರೂ ಬಂದಿರಲಿಲ್ಲ.
ಆದರೆ 'ಅಪರಿಚಿತನಾದ ಆ ಪರಿಚಿತ' ಆಹ್ವಾನವಿತ್ತ:
“ಮನೆ ಸಿಗೋವರೆಗೆ ಬೇಕಾದರೆ ನಮ್ಮಲ್ಲೇ ಇರಬಹುದು.ಬಡವರ ಮನೆ.
ನಿಮಗೆ ಅನನುಕೂಲವಾಗದೇ ಇದ್ದರೆ__"
ಮನೆ ಸಿಗುವವರೆಗೆ ಅಲ್ಲವಾದರೂ ಆ ದಿನದ ಮಟ್ಟಿಗೆ ಅವರ ಮನೆಗೆ ಹೊರಟು
ಬಿಡುವುದೇ ಸರಿ__ಎನಿಸಿತು ಜಯದೇವನಿಗೆ.
ಅಷ್ಟರಲ್ಲೆ ಸ್ವರ ಕೇಳಿಸಿತು:
"ನಮಸ್ಕಾರ ಸಾರ್."
ಎತ್ತರವಾಗಿ ಬೆಳೆದಿದ್ದ ಸ್ಫುರದ್ರೂಪಿ ಯುವಕ. ನಾಟಕದ ನಟರಂತೆ ಕತ್ತಿನ
ವರೆಗೂ ಇಳಿಬಿಟ್ಟಿದ್ದ ತಲೆಗೂದಲು.