ಪುಟ:ನವೋದಯ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

429

ಕೇళి ಕೌತುಕಪಟ್ಟ. ಎಲ್ಲಿಯೋ ತಪ್ಪು ತಿಳಿವಳಿಕೆಯಾಗಿರಬೇಕೆಂದು ಭಾವಿಸುತ್ತ
ಆತನೆಂದ:
"ರಾಜಪ್ರಮುಖರ ಹುದ್ದೆಯೇ ಇನ್ನು ಇಲ್ವಂತೆ. ನಮ್ಮ ರಾಜ ಪ್ರಮುಖ
ರೊಬ್ಬರನ್ನೇ ತೆಗೆದು ಹಾಕ್ತಾರೆ ಅನ್ನೋದು ಸರಿಯಲ್ಲ."
ನಂಜುಂಡಯ್ಯನವರಿಗೆ ಆ ವಾದ ಮೆಚ್ಚುಗೆಯಾಯ್ತು. ಆದರೆ ಗೌಡರೆಂದರು:
"ಎಲ್ಲಾ ಸೋಗು ಸಾರ್! ನಂಬಬೇಡಿ!"
"ವರದೀಲಿ ಸ್ಪಷ್ಟವಾಗಿಯೇ ಇದೆಯಲ್ಲ. ನಿನ್ನೆ ರಾತ್ರೆ ಅದರ ಸಾರಾಂಶವನ್ನು
ಎರಡು ಸಾರೆ ಓದಿದೆ. ಮೈಸೂರು ಇಲ್ಲಿಯೇ ಇರುತ್ತೆ. ಇದನ್ನೂ ಒಳಗೊಂಡು
ಒಂದು ವಿಸ್ತಾರವಾದ ರಾಜ್ಯ ಬರುತ್ತೆ, ಅಷ್ಟೆ."
"ಇಲ್ಲಿಯೇ ಇರೋದು ಅಂದರೇನು? ನಾವು ಉಳಿಸಿರೋ ಸಂಪತ್ತನ್ನ
ಇನ್ಯಾರೋ ಬಂದು ದೋಚ್ತಾರೆ."
"ಅದರರ್ಥವೇನು ಲಕ್ಕಪ್ಪಗೌಡರೇ? ಇನ್ಯಾರು ಬರ್ತ್ತಾರೆ ಇಲ್ಲಿಗೆ? ನಮ್ಮದೇ
ಅಲ್ವೆ ರಾಜ್ಯ? ಕನ್ನಡ ರಾಜ್ಯ ಅಲ್ವೆ?"
"ಕನ್ನಡ! ಆ ಧಾರವಾಡದವರು ಮಾತಾಡೋ ಭಾಷೇನ ಕನ್ನಡ
ಅಂತೀರೇನು?"
"ಉಚ್ಚಾರ-ಪದಗಳು ಸ್ವಲ್ಪ ಭಿನ್ನವಾಗಿರ್ತವೆ ಅಷ್ಟೆ. ಮೈಸೂರು ಸಂಸ್ಥಾನ
ದಲ್ಲೇ ಇಲ್ವೆ? ಮಲೆನಾಡಿನೋರು ಮಾತಾಡೋದು ಒಂದು ತರಹೆ ಕನ್ನಡ-ಬಯಲು
ಸೀಮೆಯವರದು ಒಂದು ತರಹೆ ಕನ್ನಡ."
"ಭಾಷೆ ಒಂದೇ ಅಲ್ಲ ಸಾರ್. ಅವರ ಸಂಸ್ಕೃತೀನೆ ಬೇರೆ, ನಮ್ಮ ಸಂಸ್ಕೃತೀನೇ
ಬೇರೆ."
ಆ ವಾದ ಜಯದೇವನಿಗೆ ವಿಚಿತ್ರವಾಗಿ ತೋರಿತು.
"ಹ್ಯಾಗಂತೀರಾ? ಕನ್ನಡ ನಾಡಿನ ಪ್ರಾಚೀನ ಇತಿಹಾಸವನ್ನು ನೋಡಿದ್ರೆ,
ಭಾರತೀಯ ಸಂಸ್ಕೃತಿಯ ಆವರಣದಲ್ಲಿ ಕನ್ನಡ ಸಂಸ್ಕೃತಿ ಒಂದು ಬೆಳೆದು ಬಂದದ್ದನ್ನ
ಗುರುತಿಸ್ಬಹುದು. ಮೈಸೂರು ಸಂಸ್ಕ್ರತೀಂತ ಪ್ರತ್ಯೇಕವಾಗಿ ಯಾವುದನ್ನೂ
ಕಾಣೆನಪ್ಪ."
"ನಾವು ಅನ್ನ ತಿಂತೀವಿ. ಅವರು ಜೋಳದ ರೊಟ್ಟಿ, ತಿಂತಾರೆ. ನಾವೂ ಅವರೂ
ಬೇರೆ ಬೇರೆ ಅನ್ನೋದು ಅಷ್ಟರಿಂದಲೇ ಗೊತ್ತಾಗೊಲ್ವೆ?"
"ಇದೆಲ್ಲಾ ಯಾರೂ ಒಪ್ಪೋ ಮಾತಲ್ಲ!"
ಈ ಸಂಭಾಷಣೆಯನ್ನು ಸುಮ್ಮನೆ ಕೇಳುತ್ತ ಸಿಗರೇಟು ಸೇದುತ್ತ ಕುಳಿತಿದ್ದ
ನಂಜುಂಡಯ್ಯ, ಸಿಗರೇಟನ್ನು ಭಸ್ಮಕುಂಡಕ್ಕೆ ಚುರುಟಿ ಹೇಳಿದರು:
"ನೀವು ವರದೀನ ಯಾವುದರಲ್ಲಿ ಓದಿದಿರಿ ಜಯದೇವ್? ಕನ್ನಡ ಪತ್ರಿಕೆ
ಯಲ್ಲೋ - ಇಂಗ್ಲಿಷಿನಲ್ಲೋ?"