ಪುಟ:ನವೋದಯ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

431

“ಆಗಲಿ ಗೌಡರೆ, ನಿಮ್ಮ ರಾಜ್ಯವೇ ಉಳೀಲಿ!"
ಈ ಮಾತಿಗೆ ಪ್ರತಿಭಟನೆ ಸೂಚಿಸಲು ಗೌಡರು ಬಾಯಿ ತೆರೆದರು. ಆದರೆ
ಆಗಲೆ ಜವಾನ ಎರಡನೆಯ ಗಂಟೆಯನ್ನೂ ಬಾರಿಸಿದ.
"ಎರಡು ಬೆಲ್ಲೂ ಅಗ್ಹೋಯ್ತೇನು!" ಎನ್ನುತ್ತ ಗೌಡರು, ತರಗತಿಗೆ ಹೋಗ
ಲೆಂದು ಎದ್ದರು.
...ಆದರೆ ಆ ಚರ್ಚೆ ಅಲ್ಲಿಗೇ ನಿಲ್ಲಲಿಲ್ಲ. ಗುಪ್ತಗಾಮಿನಿಯಾಯಿತು. ಬೂದಿ
ಮುಚ್ಚಿಕೊಂಡೇ ಕೆಂಡ ಅತ್ತಿತ್ತ ಸರಿಯಿತು. ಸಮಾಜವನ್ನೇ ಸಂಸ್ಥಾನವನ್ನೇ ಕಲಕಿದ
ಪ್ರಶ್ನೆ, ಅಧ್ಯಾಪಕರ ಕೊಠಡಿಯನ್ನೂ ಮಲಿನಗೊಳಿಸಿತು.
....ನಂಜುಂಡಯ್ಯನವರ ನಡಿಗೆಯಲ್ಲಿ ಹಿಂದಿಗಿಂತ ಹೆಚ್ಚು ಆತ್ಮವಿಶ್ವಾಸವಿದ್ದು
ದನ್ನು ಜಯದೇವ ಕಂಡ. ಹೈಸ್ಕೂಲು ಸ್ಥಾಪನೆಯ ಯೋಜನೆಯನ್ನು ಸಮರ್ಪಕ
ಗೊಳಿಸುವುದರಲ್ಲೆ ಅವರು ನಿರತರಾದರು.
ಒಂದು ದಿನ ಜಯದೇವನೊಡನೆ ಅವರೆಂದರು:
"ಮುಂದಿನ ಸರ್ವೋದಯ ದಿವಸ ಶಂಕುಸ್ಥಾಪನೆ ಮಾಡಿಸ್ಬೇಕು. ಕಟ್ಟಡ
ವಾಗೋದು ಎಷ್ಟರ ಕೆಲಸ? ಹೊಸ ರಾಜ್ಯ ಶುರುವಾಗೋ ಹೊತ್ತಿಗೆ ನಮ್ಮ
ಹೈಸ್ಕೂಲು ಸಿದ್ಧವಾಗಿರುತ್ತೆ."
ಬೇರೊಂದು ದಿನ, ಒಂದು ಕರಡು ಕಾಗದವನ್ನು ಜಯದೇವನ ಕೈಗೆ ಅವರು
ಕೊಟ್ಟರು. ನಿಧಿಗಾಗಿ ವಿನಂತಿ ಬರೆದುದು ದೇಶೀಯ ಇಂಗ್ಲಿಷಿನಲ್ಲಿ. ಆ ಊರಿಗೆ
ಹೈಸ್ಕೂಲು ಅಗತ್ಯವೆಂಬುದನ್ನು ಮನಗಾಣಿಸಿಕೊಟ್ಟು, ಇಪ್ಪತ್ತು ಸಾವಿರ ರೂಪಾಯಿ
ಗಳ ಕಟ್ಟಡದ ನಿಧಿಗಾಗಿ ಕರ್ನಾಟಕದ ಕೊಡುಗೈ ದೊರೆಗಳನ್ನು ಪ್ರಾರ್ಥಿಸಲಾಗಿತ್ತು.
"ಕರ್ನಾಟಕ ಅನ್ನೋ ಪದವನ್ನೇ ಉಪಯೋಗಿಸಿದೀನಿ," ಎಂದರು
ನಂಜುಂಡಯ್ಯ.
"ಇರಲಿ. ಅದಕ್ಕೇನು?"
"ಕೆಲವರು ಸಿಟ್ಟಾಗ್ತಾರೇಂತಿಟ್ಕೊಳ್ಳಿ."
ಆ ಮಾತಿಗೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸದೆ ಜಯದೇವ ಕೇಳಿದ:
"ಇಪ್ಪತ್ತು ಸಾವಿರ ರೂಪಾಯಿ ಬೇಕಾಗುತ್ತೆ, ಅಲ್ವೆ?"
"ಅಷ್ಟು ಎಲ್ಲಿಗೆ ಸಾಕು? ಉಳಿದಿರೋದನ್ನ ಸರಕಾರದಿಂದ ಕೇಳಿ ತಗೊಳ್ಳೋ
ಣಾಂತಿದೀವಿ. ನಾಳೆ ಬರೋ ಸರಕಾರವಂತೂ ನಮಗೆ 'ಇಲ್ಲ'ಅನ್ನೋದಿಲ್ಲ."
ಹಾಕಿದ್ದ ಸಹಿಗಳಲ್ಲಿ ನಂಜುಂಡಯ್ಯನ ಹೆಸರಿರಲಿಲ್ಲ.
ಅದನ್ನು ಕುರಿತು ಜಯದೇವ ಕೇಳಿದಾಗ ಅವರೆಂದರು:
"ನಾನು ಸರಕಾರಿ ನೌಕರ. ಈ ಕೆಲಸಕ್ಕೆ ರಾಜಿನಾಮೆ ಕೊಡೋವರೆಗೂ ಅಲ್ಲಿ
ಹೆಸರು ಹಾಕೋ ಹಾಗಿಲ್ಲ. ಅವಸರವೇನಂತೆ? ನಿಧಾನವಾಗಿ ಮಾಡಿದರಾಯ್ತು."
ನಾರಾಯಣಗೌಡ ಎಂಬ ಹೆಸರೊಂದಿತ್ತು ಆ ಕರಡು ಕಾಗದದಲ್ಲಿ.