ಪುಟ:ನವೋದಯ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

435

ಗೊಮ್ಮೆಯೊ ನಡೆಯುವ ಸಮ್ಮೇಳನ. ಪ್ರತಿನಿಧಿಯಾಗಿ ಹೋಗಲು ನಂಜುಂಡಯ್ಯ
ನವರಿಗೆ ಇಷ್ಟವಿರಲಿಲ್ಲ.
"ನೀವು ಹೋಗ್ತೀರಾ ಜಯದೇವ್?" ಎಂದು ಅವರು ಕೇಳಿದರು.
ಒಂದೇ ದಿವಸದ ಸಮ್ಮೇಳನ; ಬೆಳಗ್ಗೆ ಹೋಗಿ ಮಾರನೆಯ ಮಧ್ಯಾಹ್ನದೊಳಗೆ
ಹಿಂತಿರುಗಬಹುದು; ಸುನಂದೆಯನ್ನು ಒಪ್ಪಿಸುವುದು ಕಷ್ಟವಾಗದು_ಎಂದೆಲ್ಲ
ಯೋಚಿಸಿ ಜಯದೇವನೆಂದ:
"ಲಕ್ಕಪ್ಪಗೌಡರು ಹೋಗೋಲ್ವಂತೇನು?"
ನಂಜುಂಡಯ್ಯ ನಸುನಕ್ಕು ಹೇಳಿದರು:
"ನೋಡಿ, ಬರ್ತಿದಾರೆ. ಕೇಳಿಬಿಡೋಣ."
ತಾವಾಗಿ ವಂದಿಸುವ ಶಿಷ್ಟಾಚಾರಕ್ಕೆ ಎಂದೋ ಎಳ್ಳುನೀರು ಬಿಟ್ಟಿದ್ದ ಲಕ್ಕಪ್ಪ
ಗೌಡರು, ಕಪಾಟದ ಹಿಂಬದಿಯಲ್ಲಿ ಕೊಡೆಯನ್ನು ತೂಗ ಹಾಕಿ, ಕುರ್ಚಿಯ ಮೇಲೆ
ಕುಳಿತರು.
ನಂಜುಂಡಯ್ಯನವರು ಸಮ್ಮೇಳನದ ವಿಷಯ ತಿಳಿಸಿದಾಗ ಗೌಡರೆಂದರು:
"ಹೋದ ಸಲ ಹೋಗಿದ್ನೆಲ್ಲ. ಅಷ್ಟು ಸಾಕು. ಬಸ್ಚಾರ್ಜು ಕೈಯಿಂದ
ಹಾಕೋಕೆ ನಾನೇನು ತಯಾರಿಲ್ಲ."
ತೃಪ್ತಿಯಾಯ್ತು ತಾನೆ?_ಎಂಬರ್ಥದಲ್ಲಿ ಜಯದೇವನನ್ನು ನ೦ಜು೦ಡಯ್ಯ
ನೋಡಿದರು. ಬಳಿಕ ಅವರೆಂದರು:
"ಈವರೆಗೆ ಒಂದು ಜಿಲ್ಲಾ ಸಮ್ಮೇಳನವನ್ನೂ ಜಯದೇವರು ನೋಡಿಲ್ಲ_"
"ಅವರೇ ಹೋಗಿ ಬರ್ಲಿ," ಎಂದು ಲಕ್ಕಪ್ಪಗೌಡರು ಮಾತು ಮುಗಿಸಿದರು.
...ಸುನಂದಾ ತಾನೂ ಬರುವೆನೆಂದಳು. ಆ ಊರಲ್ಲಿ ಒದಗಬಹುದಾದ
ವಸತಿಯ ತೊಂದರೆಯನ್ನು ವಿವರಿಸಿದ ಬಳಿಕ ಒಬ್ಬನೆ ಹೋಗಲು ಸಮ್ಮತಿ
ದೊರೆಯಿತು.
ಆದರೂ ಆಕೆ ಕೇಳಿದಳು:
"ರಾತ್ರೆಯೇ ವಾಪಸು ಬಂದು ಬಿಡೋಕೆ ಆಗೊಲ್ವೇನು?"
"ಸಮ್ಮೇಳನ ಮುಗಿಯೋದು ಎಷ್ಟು ಹೊತ್ತಾಗುತ್ತೊ? ಬಸ್ಸು ಸಿಗಬೇಕಲ್ಲ.
ಭಾನುವಾರ ಸಮ್ಮೇಳನ. ಸೋಮವಾರ ಬೆಳಗ್ಗೆಯೆ ಅಲ್ಲಿಂದ ಹೊರಟ್ಬಿಡ್ತೀನಿ.
ರಾತ್ರೆ ಹೊತ್ತು ಇಲ್ಲಿ ಮಲಗೋಕೆ ಪಕ್ಕದ್ಮನೆ ಅಜ್ಜಮ್ಮನ್ನ ಕೇಳ್ಕೊಂಡರಾಯ್ತು."
"ಹೂಂ."
ಸಮ್ಮೇಳನದ ವಿವರವನ್ನೂ ತಿಳಿಯುವ ಆಸೆ ಆಕೆಗೆ.
"ಎಷ್ಟು ಜನ ಬರ್ತಾರೆ ಸಮ್ಮೇಳನಕ್ಕೆ?"
"ಒಂದಿನ್ನೂರು ಮುನ್ನೂರು ಜನ ಬರಬಹುದೋ ಏನೋ."
“ಮೇಡಮ್ಗಳೂ ಬರ್ತಾರೇನು?"